ಬೆಳಗಾವಿ: ಬೆಳಗಾವಿಯಲ್ಲಿ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕನ್ನಡಿಗರ ಆಕ್ರೋಶಕ್ಕೆ ಭುಗಿಲೆದ್ದಿದೆ. ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿ ಸಂಪತ್‌ಕುಮಾರ್ ದೇಸಾಯಿ, ಅನಿಲ್ ದಡ್ಡಿಮನಿ ಎಂಬ ಕನ್ನಡಪರ ಹೋರಾಟಗಾರರ (Kannada activists) ವಿರುದ್ಧ ರೌಡಿಶೀಟ್ ಓಪನ್ ಮಾಡಲಾಗಿದೆ.
2021ರ ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವ್‌ಗೆ ನುಗ್ಗಿದ ಕೆಲವರು ಎಂಇಎಸ್ ಮುಖಂಡ ದೀಪಕ್ ದಳವಿಗೆ ಮಸಿ ಬಳಿದಿದ್ದರು. ಆ ಘಟನೆಯಲ್ಲಿ ಭಾಗಿಯಾದ ಕಾರಣಕ್ಕೆ ಸಂಪತ್ ಕುಮಾರ್ ದೇಸಾಯಿ ಮತ್ತು ಅನಿಲ್ ದಡ್ಡಿ ಮನಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಅವರು ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.
ಈಗ ಚುನಾವಣೆಯ ಹಿನ್ನೆಲೆಯಲ್ಲಿ ರೌಡಿ ಚಟುವಟಿಕೆ ಮಾಡುವವರ ಮೇಲೆ ನಿಗಾ ಇಡುವುದಕ್ಕಾಗಿ ಪೊಲೀಸರು ತಯಾರಿಸಿದ ಪಟ್ಟಿಯಲ್ಲಿ ಈ ಇಬ್ಬರು ಯುವಕರ ಹೆಸರು ಇರುವುದು ನೋಡಿ ಕನ್ನಡ ಪರ ಹೋರಾಟಗಾರರು ಸಿಟ್ಟಿಗೆದ್ದಿದ್ದಾರೆ.
ಟಿಳಕವಾಡಿ ಠಾಣೆಯಿಂದ ಅನಿಲ್ ದಡ್ಡಿಮನಿಗೆ, ಪಿಎಂಸಿ ಠಾಣೆಯಿಂದ ಸಂಪತ್‌ಕುಮಾರ್ ದೇಸಾಯಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಚುನಾವಣೆ ಕಾಲದಲ್ಲಿ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಮುಚ್ಚಳಿಕೆ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. 50 ಸಾವಿರ ರೂ. ಮೊತ್ತದ ಸ್ವಯಂ ಮುಚ್ಚಳಿಕೆ ಹಾಗೂ ಇಷ್ಟೇ ಮೊತ್ತದ ಇಬ್ಬರು ಜಾಮೀನುದಾರರಿಂದ ಮುಚ್ಚಳಿಕೆ ಪಡೆಯುವಂತೆ ಸೂಚಿಸಲಾಗಿದೆ.
ಆಕ್ರೋಶ, ಇಂದೇ ಪ್ರತಿಭಟನಾ ಸಭೆ
ಪೀರಣವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದ ಇಬ್ಬರು ಯುವಕರ ಮೇಲೆ ರೌಡಿ ಶೀಟ್ ತೆರೆಯಲು ಮುಂದಾಗಿರುವ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ರಾಜ್ಯ ಸರ್ಕಾರ, ಪೊಲೀಸರ ವಿರುದ್ಧ ಭುಗಿಲೆದ್ದ ಕನ್ನಡಿಗರ ಆಕ್ರೋಶ ವ್ಯಕ್ತವಾಗಿದ್ದು, ಇಬ್ಬರ ಮೇಲಿನ ಕ್ರಮ ಕೈಬಿಡಲು ಆಗ್ರಹಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ
ಇದೇ ವೇಳೆ #ನಾಡವಿರೋಧಿ ಸರ್ಕಾರ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದ್ದು, ʻನಮ್ಮ ಸರ್ಕಾರ ನಮ್ದಲ್ಲ.. ಬೆಳಗಾವಿ ನಮ್ದಲ್ಲ..ʼ ಎಂದು ಪೋಸ್ಟ್ ಹಾಕಲಾಗಿದೆ. ಕನ್ನಡಿಗರು ನಾನಾ ರೀತಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ : Belagavi Mahanagara Palike: ಬೆಳಗಾವಿ ಪಾಲಿಕೆ ಮೇಯರ್ ಸ್ಥಾನಕ್ಕೆ ಬಿಜೆಪಿ ಮರಾಠ ಅಸ್ತ್ರ ಪ್ರಯೋಗ, ಕರವೇ ಆಕ್ರೋಶ