ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ (MLA Harish Punja) ಅಭಿಮಾನಿಗಳು ಅಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಹೊಡೆದಾಟ ಸಂಭವಿಸಿದ್ದು, ಅದರ ವಿಡಿಯೊಗಳು ವೈರಲ್ ಆಗಿವೆ. ಅಂಪೈರ್ ತೀರ್ಪಿನ ವಿರುದ್ಧ ರೊಚ್ಚಿಗೆದ್ದ ಆಟಗಾರರು ಮೈದಾನದಲ್ಲಿ ಹೊಡೆದಾಡಿಕೊಂಡಿದ್ದಾರೆ.
ಹರೀಶ್ ಪೂಂಜ ಅಭಿಮಾನಿ ಬಳಗ ಮುಂಡಾಜೆ ಇದರ ವತಿಯಿಂದ ಕಬಡ್ಡಿ ಪಂದ್ಯಾಟ ನಡೆದಿತ್ತು. ಇದರಲ್ಲಿ ಅಂಪೈರ್ ಕೊಟ್ಟ ತೀರ್ಪಿನ ವಿರುದ್ಧ ಆಟಗಾರರು ಸಿಟ್ಟುಗೊಂಡು ಹೊಡೆದಾಟ ನಡೆಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದ ಆಡೂರು ಮೈದಾನದಲ್ಲಿ ಫೆ. 19ರಂದು ನಡೆದ ಘಟನೆ ನಡೆದಿದೆ ಎನ್ನಲಾಗಿದೆ. ಶಾಸಕ ಹರೀಶ್ ಪುಂಜ ಅಭಿಮಾನಿಗಳು ಹಾಗೂ ಆಟಗಾರರ ಮಧ್ಯೆ ನಡೆದ ಹೊಡೆದಾಟದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ರಾಜಕೀಯ ಪ್ರಚಾರ ಮತ್ತು ಕ್ರೀಡಾ ಪ್ರೋತ್ಸಾಹಕ್ಕಾಗಿ ರಾಜಕಾರಣಿಗಳು ಕ್ರಿಕೆಟ್, ಕಬಡ್ಡಿ ಮೊದಲಾದ ಪಂದ್ಯಾಟಗಳನ್ನು ಆಯೋಜಿಸುತ್ತಿರುವುದು ಕಂಡುಬಂದಿದೆ. ಈ ಹಿಂದೆ ಕಾರ್ಕಳ ಕ್ಷೇತ್ರದಲ್ಲಿ ಯುವಜನರನ್ನು ಸೇರಿಸಿ ಅವರ ಮನಸು ಗೆಲ್ಲುವುದಕ್ಕಾಗಿ ಹಾಲಿ ಸಚಿವ ಸುನಿಲ್ ಕುಮಾರ್ ಅವರು ಕ್ರಿಕೆಟ್ ಪಂದ್ಯಾಟಗಳನ್ನು ಆಯೋಜಿಸಿ ಹೆಸರು ಮಾಡಿದ್ದರು. ಒಂದು ಕಡೆ ಕ್ರೀಡೆಗೆ ಪ್ರೋತ್ಸಾಹ, ಇನ್ನೊಂದು ಕಡೆಯಲ್ಲಿ ಯುವಜನರ ಒಲವನ್ನು ಗಳಿಸುವ ಎರಡೂ ಕೆಲಸಗಳು ಏಕಕಾಲದಲ್ಲಿ ಇಲ್ಲಿ ಸಾಧಿತವಾಗುತ್ತದೆ. ಹೀಗಾಗಿ ರಾಜಕಾರಣಿಗಳು, ಅವರ ಅಭಿಮಾನಿಗಳು ಕ್ರೀಡಾ ಕೂಟಗಳನ್ನು ಆಯೋಜಿಸುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ ; Karnataka Election 2023: ಶಿಕಾರಿಪುರ, ವರುಣ ಕ್ಷೇತ್ರದ ಜತೆ ಇನ್ನೊಂದು ಕ್ಷೇತ್ರ ಹುಡುಕುತ್ತಿದ್ದೇನೆ: ವಿಜಯೇಂದ್ರ