ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಮೀಸಲಾತಿ (Reservation) ಹೆಚ್ಚಿಸಿ ವಿಧಾನಸಭೆ ಚುನಾವಣೆಗೂ ಮುನ್ನ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದ ರಾಜ್ಯ ಸರ್ಕಾರವೀಗ ರಾಜ್ಯದ ಪ್ರಬಲ ಸಮುದಾಯದವರಾದ ಲಿಂಗಾಯತ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯದವರ ಮೀಸಲಾತಿ ಹೋರಾಟಕ್ಕೂ ಸ್ಪಂದಿಸಿದೆ. ಕೆಲವು ಗೊಂದಲಗಳ ಹೊರಾತಾಗಿಯೂ ಇದರಿಂದ ಎರಡೂ ಸಮುದಾಯದವರ ಮೀಸಲಾತಿ ಹೋರಾಟಕ್ಕೆ ಮುನ್ನಡೆ ಸಿಕ್ಕಂತಾಗಿದೆ.
3ಬಿ ವರ್ಗದಲ್ಲಿದ್ದ ಪಂಚಮಸಾಲಿ ಸಮುದಾಯದವರಿಗೆ 2ಡಿ ಹಾಗೂ 3ಎನಲ್ಲಿದ್ದ ಒಕ್ಕಲಿಗ ಸಮುದಾದಯವರಿಗೆ 2ಸಿ ಪ್ರವರ್ಗದ ಅಡಿಯಲ್ಲಿ ಮೀಸಲಾತಿ ಕಲ್ಪಿಸುವ ದಿಸೆಯಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಸಾಮಾಜಿಕ ಹಾಗೂ ರಾಜಕೀಯವಾಗಿ ಇದು ಮಹತ್ವದ ತೀರ್ಮಾನವಾದ ಕಾರಣ ಎರಡೂ ಸಮುದಾಯದವರ ಮತಗಳ ಕ್ರೋಡೀಕರಣವೂ ಆಗುವ ಸಾಧ್ಯತೆ ಹೆಚ್ಚಿದೆ.
ಹಾಗಾದರೆ, ರಾಜ್ಯದಲ್ಲಿ ಎರಡೂ ಸಮುದಾದಯವರ ಬೇಡಿಕೆ ಹೇಗಿತ್ತು? ಇದಕ್ಕಾಗಿ ಯಾವ ರೀತಿಯಲ್ಲಿ ಪ್ರತಿಭಟನೆ ನಡೆದವು? ಸರ್ಕಾರದ ಮೇಲೆ ರಾಜಕಾರಣಿಗಳನ್ನೂ ಬಳಸಿಕೊಂಡು ಹೇಗೆ ಒತ್ತಡ ಹೇರಲಾಯಿತು? ಯಾರೆಲ್ಲ ಹೋರಾಟಕ್ಕೆ ಬೆಂಬಲ ನೀಡಿದರು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಪಂಚಮಸಾಲಿ ಸಮುದಾಯದವರ ಬೇಡಿಕೆ ಏನಿತ್ತು?
ಪಂಚಮಸಾಲಿ ಸಮುದಾಯವು 3ಬಿ ವರ್ಗದಲ್ಲಿದೆ. ಈ ವರ್ಗದಲ್ಲಿ ಸಮುದಾಯವರು ಶೇ.5ರಷ್ಟು ಮೀಸಲಾತಿ ಪಡೆಯುತ್ತಿದ್ದರು. ಆದರೆ, ಶೇ.15ರಷ್ಟು ಮೀಸಲಾತಿಯನ್ನು ಖಾತರಿಪಡಿಸುವ ಇತರೆ ಹಿಂದುಳಿದ ವರ್ಗ (ಒಬಿಸಿ)ಕ್ಕೆ (2ಎ) ಸೇರಿಸಬೇಕು ಎಂದು ಒತ್ತಾಯಿಸಿದ್ದರು. ಲಿಂಗಾಯತ ಸಮುದಾಯದಲ್ಲಿ ಉಪ ಪಂಗಡಗಳು ಹೆಚ್ಚಿವೆ. ಹಾಗಾಗಿ, ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದ್ದವು.
ರಾಜ್ಯದಲ್ಲಿರುವ ಪಂಚಮಸಾಲಿ ಸಮುದಾಯದ ಅಂದಾಜು ಜನಸಂಖ್ಯೆ: 1.39 ಕೋಟಿ
ಮೀಸಲಾತಿಗಾಗಿ ಹೋರಾಟ ಹೇಗಿತ್ತು?
ವೀರಶೈವ ಲಿಂಗಾಯತ ಸಮುದಾಯದ ಪ್ರಬಲ ಉಪ ಪಂಗಡವಾದ ಪಂಚಮಸಾಲಿ ಸಮಾಜದವರು ಮೀಸಲಾತಿಗಾಗಿ ಹಲವು ವರ್ಷಗಳಿಂದ ತೀವ್ರ ಹೋರಾಟ ನಡೆಸಿದ್ದರು. ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಸೇರಿ ಸಮಾಜದ ಹಲವು ಸ್ವಾಮೀಜಿಗಳು ಹೋರಾಟ ಆರಂಭಿಸಿದ್ದರು.
ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲಾಗಿತ್ತು. ರಾಜ್ಯದೆಲ್ಲೆಡೆ ಮೀಸಲಾತಿಗಾಗಿ ಹೋರಾಟ ನಡೆಸಲಾಗಿತ್ತು. ಬಿಜೆಪಿ ಶಾಸಕರೇ ಆದ ಬಸನಗೌಡ ಪಾಟೀಲ್ ಯತ್ನಾಳ್ ಅವರೂ ಮೀಸಲಾತಿ ಹೋರಾಟವನ್ನು ಬೆಂಬಲಿಸಿದ್ದರು. ತಮ್ಮ ಸರ್ಕಾರದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದಾಗಿ ರಾಜ್ಯ ಸರ್ಕಾರವು ಪಂಚಮಸಾಲಿ ಮೀಸಲಾತಿ ಕುರಿತು ಅಧ್ಯಯನ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಸಮಿತಿಗೆ ಜವಾಬ್ದಾರಿ ವಹಿಸಲಾಗಿತ್ತು. ಇನ್ನು, ಬೆಳಗಾವಿಯಲ್ಲಿ ವಿರಾಟ್ ಪಂಚಶಕ್ತಿ ಸಮಾವೇಶ ಆಯೋಜಿಸಿ ಪಂಚಮಸಾಲಿ ಸಮುದಾಯದವರು ಸರ್ಕಾರಕ್ಕೆ ಡಿಸೆಂಬರ್ 29ರ ಗಡುವು ನೀಡಿತ್ತು. ಇದಕ್ಕೆ ಮಣಿದ ಸರ್ಕಾರವು ಈಗ ಮೀಸಲಾತಿ ನೀಡಲು ಹೊಸ ಪ್ರವರ್ಗಗಳನ್ನು ಸೃಷ್ಟಿಸಿದೆ.
ಒಕ್ಕಲಿಗರ ಬೇಡಿಕೆ ಏನಾಗಿದ್ದವು?
ಒಕ್ಕಲಿಗರ ಸಮುದಾಯದ ಮೀಸಲಾತಿಯನ್ನು (3ಎ) ಶೇ.4ರಿಂದ ಶೇ.12ಕ್ಕೆ ಹೆಚ್ಚಳ ಮಾಡಬೇಕು ಎಂಬುದು ಆಗ್ರಹವಾಗಿತ್ತು. ಒಗ್ಗಲಿಗ ಸಮುದಾಯದವರ ಗಣತಿ ಆಗಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು ಎಂಬುದು ಒಕ್ಕಲಿಗ ಸಮುದಾಯದ ಬೇಡಿಕೆಗಳು ಆಗಿದ್ದವು.
ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಮಾಣ: ಶೇ.14
ಒಕ್ಕಲಿಗ ಸಮುದಾಯದ ಹೋರಾಟ ಹೇಗಿತ್ತು?
ಒಕ್ಕಲಿಗ ಸಮುದಾಯದವರಿಗೆ ಮೀಸಲಾತಿ ನೀಡಬೇಕು ಎಂದು ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು, ರಾಜಕೀಯ ನಾಯಕರು, ಸಮುದಾಯದ ಸಂಘಟನೆಗಳು ರಾಜ್ಯ ಸರ್ಕಾರದ ಮೇಲೆ ಮೀಸಲಾತಿಗಾಗಿ ಒತ್ತಾಯ ಮಾಡಿವು. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ಕೆಂಪೇಗೌಡ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಗಳು ಹೋರಾಟದ ರೂಪುರೇಷೆ ರಚಿಸಿದ್ದವು.
ಹಾಗೆಯೇ, ಒಕ್ಕಲಿಗ ಸಮುದಾಯದ ಪ್ರಮುಖ ಸ್ವಾಮೀಜಿಗಳಾದ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿಯ ಡಿ.ವಿ.ಸದಾನಂದಗೌಡ ಸೇರಿ ಹಲವು ರಾಜಕೀಯ ನಾಯಕರು ಪಕ್ಷಾತೀತವಾಗಿ ಮೀಸಲಾತಿ ಹೋರಾಟವನ್ನು ಬೆಂಬಲಿಸಿದ್ದರು. ಮೀಸಲಾತಿ ಘೋಷಣೆ ಮಾಡಲು ಸರ್ಕಾರಕ್ಕೆ 2023ರ ಜನವರಿ 23ರ ಗಡುವು ನೀಡಲಾಗಿತ್ತು. ಅದರಂತೆ ರಾಜ್ಯ ಸರ್ಕಾರವು ಮೀಸಲಾತಿ ನೀಡುವ ದಿಸೆಯಲ್ಲಿ ಮುಂದಡಿ ಇಟ್ಟಿದೆ.
ಇದನ್ನೂ ಓದಿ | Reservation | ಪಂಚಮಸಾಲಿ-ಒಕ್ಕಲಿಗರಿಗೆ 2D ವರ್ಗ ಸೃಜನೆ: 2A ಮೀಸಲಾತಿ ಕುರಿತು ಸರ್ಕಾರದ ಮಹತ್ವದ ನಿರ್ಧಾರ