ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪಾಲಿಕೆ ಮಾಜಿ ಸದಸ್ಯ ರಾಜು ಜಾನೆ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಐಪಿಸಿ ಕಲಂ 504 ಅಡಿಯಲ್ಲಿ ಆರಗ ಜ್ಞಾನೇಂದ್ರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಖರ್ಗೆ ವಿರುದ್ಧ ಆರಗ ಜ್ಞಾನೇಂದ್ರ ಮಾತನಾಡಿದ್ದರು. ಈ ವೇಳೆ ಮಲ್ಲಿಕಾರ್ಜುನ ಖರ್ಗೆಯವರ ಮೈಬಣ್ಣದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಕಾಂಗ್ರೆಸ್ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್
ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ್ ಖಂಡ್ರೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾದಿಂದ ದೂರು ದಾಖಲಿಸಲಾಗಿದ್ದು, ವರ್ಣಭೇದ, ಜನಾಂಗೀಯ ನಿಂದನೆ ಆರೋಪದಡಿ ದೂರು ನೀಡಲಾಗಿದೆ. ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ವೇಳೆ ಆರಗ ಜ್ಞಾನೇಂದ್ರ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಮನವಿ ಮಾಡಿದೆ.
ಇದನ್ನೂ ಓದಿ | Araga Jnanendra : ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ಧಿಯೇ ಹೊರತು, ಜನರಲ್ಲ ; ಆರಗಗೆ ಪ್ರಿಯಾಂಕ್ ಖರ್ಗೆ ತರಾಟೆ
ಕಲ್ಯಾಣ ಕರ್ನಾಟಕ ಭಾಗದವರು ಸುಟ್ಟು ಕರಕಲಿನಂತೆ ಇರುತ್ತಾರೆ. ಇದು ಖರ್ಗೆ ಅವರನ್ನು ನೋಡಿದರೆ ತಿಳಿಯುತ್ತದೆ. ಅರಣ್ಯ ಮಂತ್ರಿಗಳಾದ ಈಶ್ವರ ಖಂಡ್ರೆ ಅವರ ತಲೆಮೇಲೆ ಕೂದಲು ಮುಚ್ಚಿಕೊಂಡಿರುವುದರಿಂದ ಕರಕಲಾಗದಂತೆ ಉಳಿದುಕೊಂಡಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ಆರಗ ಜ್ಞಾನೇಂದ್ರ ಅವರು ವರ್ಣಭೇದ, ಜನಾಂಗೀಯ ಹಾಗೂ ಪ್ರಾಂತ್ಯವಾರು ನಿಂದನೆಗಳ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಕಾರಣರಾಗಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಆರೋಪಿಸಿದೆ.