ಬೆಂಗಳೂರು: ಸುಳ್ಳು ದೂರು ಸಲ್ಲಿಸಿ ವಂಚನೆ ಎಸಗಿದ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ, ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ (Prashanth Sambargi) ವಿರುದ್ಧ ನಗರದ ಹಲಸೂರ್ ಗೇಟ್ ಠಾಣೆಯಲ್ಲಿ ಸೆಕ್ಷನ್ 420 ಅಡಿ ಎಫ್‌ಐಆರ್ ದಾಖಲಾಗಿದೆ.
2017ರ ಜುಲೈನಲ್ಲಿ ಸಂಬರ್ಗಿಯಿಂದ ದೇವನಾಥ್ ಎಂಬುವವರು ಸಾಲ ಪಡೆದಿದ್ದರು. ಮನೆಯ ಅಸಲಿ ದಾಖಲೆ, ಖಾಲಿ ಚೆಕ್ ಕೊಟ್ಟು ಶ್ಯೂರಿಟಿ ನೀಡಿದ್ದರು. ಬಳಿಕ ಅದೇ ವರ್ಷದ ಡಿಸೆಂಬರ್‌ನಲ್ಲಿ ಅಷ್ಟೂ ಹಣ ವಾಪಸ್ ನೀಡಿದ್ದರು ಎನ್ನಲಾಗಿದೆ. ಆದರೆ ಹೆಚ್ಚಿನ ಬಡ್ಡಿ ಹಣ ನೀಡಬೇಕೆಂದು ಮನೆ ದಾಖಲೆ ನೀಡದೆ ಸತಾಯಿಸುತ್ತಿದ್ದಾರೆ ಎಂದು ಸಂಬರ್ಗಿ ವಿರುದ್ಧ ದೇವನಾಥ್ ವಿವಿಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇನ್ನು ಪ್ರಕರಣದಲ್ಲಿ ಸಾಲ ವಾಪಸ್ ನೀಡಿಲ್ಲ ಎಂದು ದೇವನಾಥ್ ವಿರುದ್ಧವೂ ಸಂಬರ್ಗಿ ವಿವಿಧೆಡೆ ಸುಳ್ಳು ದೂರು ನೀಡಿದ್ದರು ಎಂದು ಆರೋಪಿಸಲಾಗಿದೆ. ಸುಳ್ಳು ದೂರು ಸಲ್ಲಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ದೇವನಾಥ್ ನೀಡಿದ ದೂರಿನ ಮೇರೆಗೆ ಹಲಸೂರು ಗೇಟ್ ಠಾಣೆಯಲ್ಲಿ ಸಂಬರ್ಗಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.