Site icon Vistara News

KPSC EXAM | 2017ರಲ್ಲೂ ನಡೆದಿತ್ತು ತಂತ್ರಜ್ಞಾನ ಬಳಸಿ ಅಕ್ರಮ

Kpsc exam

ಶಿವಮೊಗ್ಗ: ಕೆಪಿಎಸ್‌ಸಿ 2017ರಲ್ಲಿ ನಡೆಸಿದ್ದ ಜಲಸಂಪನ್ಮೂಲ ಇಲಾಖೆಯ ಸಹಾಯಕ/ಕಿರಿಯ ಅಭಿಯಂತರ ನೇಮಕಾತಿಯಲ್ಲೂ ಅಕ್ರಮ ನಡೆದಿದ್ದು,  ಶಿವಮೊಗ್ಗದಲ್ಲಿ ಪರೀಕ್ಷಾರ್ಥಿಗಳಿಬ್ಬರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪರೀಕ್ಷೆ ಬರೆದಿರುವುದು ಬೆಳಕಿಗೆ ಬಂದಿದೆ.

ಬಿ.ಎಂ.ಕೀರ್ತಿ ಮತ್ತು ಪ್ರಕಾಶ್ ಅಲಿಯಾಸ್ ಪ್ರಕಾಶ್ ನಾಯ್ಕ ಎಂಬುವವರು ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಬಳಸಿ ಪರೀಕ್ಷೆ ಬರೆದ ಆರೋಪಿಗಳಾಗಿದ್ದಾರೆ.

2017ರ ಸೆಪ್ಟಂಬರ್‌ನಲ್ಲಿ ಕೆಪಿಎಸ್‌ಸಿಯಿಂದ ನಗರದ ಬಿ.ಎಚ್.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ(ಪ್ರೌಢಶಾಲಾ ವಿಭಾಗ) ಪರೀಕ್ಷಾ ಕೇಂದ್ರ 10ರಲ್ಲಿ ಪರೀಕ್ಷೆ ಬರೆದಿದ್ದರು. ಹೈಕೋರ್ಟ್ ಆದೇಶದ ಮೇರೆಗೆ ಕೆಪಿಎಸ್‌ಸಿ ಕಾರ್ಯದರ್ಶಿ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಕೋಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದಾವಣಗೆರೆಯಲ್ಲಿ ಸಿಕ್ತು ಸುಳಿವು

2017ರ ಅಕ್ಟೋಬರ್‌ 16ರಂದು ದಾವಣಗೆರೆ ಭಾಷಾನಗರದ ಎಸ್‌ಕೆಎಎಚ್‌ಪಿಯು ಕಾಲೇಜಿನಲ್ಲಿ ಮೊರಾರ್ಜಿ ದೇಸಾಯಿ ಶಾಲೆಗಳ ಸಹ ಶಿಕ್ಷಕರ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿದ್ದ ಬಗ್ಗೆ ಉಪ ವಿಭಾಗಾಧಿಕಾರಿಗಳಿಗೆ ಮಾಹಿತಿ ಬಂದಿದ್ದ ಹಿನ್ನೆಲೆ ಕಾಲೇಜಿಗೆ ಭೇಟಿ ನೀಡಿದಾಗ ಅಭ್ಯರ್ಥಿ ತಿಪ್ಪೇಶ್ ನಾಯ್ಕ ಧರಿಸಿದ್ದ ಶರ್ಟ್‌ನ ಒಳಭಾಗದಲ್ಲಿ ಮೊಬೈಲ್ ಮದರ್ ಬೋರ್ಡ್, ಸ್ಪೀಕರ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಮಾಡುತ್ತಿರುವುದು ಪತ್ತೆಯಾಗಿತ್ತು. ಅದಕ್ಕೆ ಪ್ರದೀಪ್ ಮತ್ತು ಕೃಷ್ಣನಾಯ್ಕ ಎಂಬುವರು ಸಹಕರಿಸಿದ್ದರು. ಈ ಬಗ್ಗೆ ದಾವಣಗೆರೆ ಆಜಾದ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ವೇಳೆ 2017ರ ಸೆಪ್ಟಂಬರ್‌ನಲ್ಲಿ ಜಲಸಂಪನ್ಮೂಲ ಇಲಾಖೆಯ ಹುದ್ದೆಗಳಿಗೆ ನಡೆದಿದ್ದ ಅಕ್ರಮದ ಬಗ್ಗೆಯೂ ಆರೋಪಿಗಳು ಬಾಯ್ಬಿಟ್ಟಿದ್ದರು.

ಇದನ್ನ ಓದಿ | ಪಿಎಸ್‌ಐ ನೇಮಕಾತಿ ಅಕ್ರಮ; ಮತ್ತಿಬ್ಬರು ಆರೋಪಿಗಳ ಬಂಧನ

ನ್ಯಾಯಾಲಯದ ಸೂಚನೆ

2017ರ ಸೆಪ್ಟಂಬರ್‌ನಲ್ಲಿ ಕೆಪಿಎಸ್‌ಸಿ ಜಲಸಂಪನ್ಮೂಲ ಇಲಾಖೆಯ ಸಹಾಯಕ/ಕಿರಿಯ ಅಭಿಯಂತರ ನೇಮಕಾತಿಗೆ ಪರೀಕ್ಷೆ ನಡೆಸಿತ್ತು. ದಾವಣಗೆರೆಯಲ್ಲಿ ಹನುಮಂತನಾಯ್ಕ, ಪಾಂಡುರಂಗನಾಯ್ಕ, ಬಸವರಾಜ ನಾಯಕ್, ಲೋಕೇಶ್ ನಾಯ್ಕ ಮತ್ತು ಶಿವಮೊಗ್ಗದಲ್ಲಿ ಬಿ.ಎಂ.ಕೀರ್ತಿ ಮತ್ತು ಪ್ರಕಾಶ್ ಡಿವೈಎಸ್ ಇರುವ ಬನಿಯಾನ್ ಹಾಕಿಕೊಂಡು ಪರೀಕ್ಷೆ ಬರೆದಿದ್ದರು.

ನೇಮಕಾತಿಯ ಪ್ರಾವಿಜನಲ್ ಆಯ್ಕೆ ಪಟ್ಟಿಯಲ್ಲಿ ಆರೋಪಿಗಳ ಹೆಸರಿತ್ತು. 2018ರ ಡಿಸೆಂಬರ್‌ 17ರಂದು ಆಯ್ಕೆಪಟ್ಟಿ ತಡೆ ಹಿಡಿಯುವ ಸಲುವಾಗಿ ವರದಿಯನ್ನು ಕೆಪಿಎಸ್‌ಸಿಗೆ ತನಿಖಾಧಿಕಾರಿಗಳು ಸಲ್ಲಿಸಿದ್ದರು. ಈ ನಡುವೆ ಆರೋಪಿಗಳು ಪ್ರಕರಣ ಖುಲಾಸೆಗೊಳಿಸುವಂತೆ ಹೈಕೋರ್ಟ್‌ಗೆ ರಿಟ್ ದಾವೆ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು 2021ರ ನವೆಂಬರ್‌ 23ರಂದು ದಾವೆಯನ್ನು ವಜಾಗೊಳಿಸಿ ಆರೋಪಿಗಳ ಮೇಲೆ ಸಂಬಂಧಪಟ್ಟ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು.

ಅದರಂತೆ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಆರೋಪಿಗಳ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ನಡುವೆ ಕೆಪಿಎಸ್‌ಸಿ ಕಾರ್ಯದರ್ಶಿ ಕೂಡ ದಾವಣಗೆರೆ ಮತ್ತು ಶಿವಮೊಗ್ಗ ಎಸ್ಪಿಗಳಿಗೆ ಮಂಗಳವಾರ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಹಾಗಾಗಿ ಶಿವಮೊಗ್ಗದಲ್ಲಿ ಪರೀಕ್ಷೆ ಬರೆದಿದ್ದ ಕೀರ್ತಿ ಮತ್ತು ಪ್ರಕಾಶ್ ಮೇಲೆ ಕೋಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನ ಓದಿ | Job Alert| 60 ʼಸಹಾಯಕ ನಗರ ಯೋಜಕʼ ಹುದ್ದೆಗಳಿಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನ

Exit mobile version