Site icon Vistara News

ಈದ್ಗಾ ಗೋಡೆ ಕೆಡುವುದಾಗಿ ಹೇಳಿಕೆ; ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ ವಿರುದ್ಧ ಎಫ್‌ಐಆರ್‌

ಈದ್ಗಾ

ಬೆಂಗಳೂರು: ಬಾಬ್ರಿ ಮಸೀದಿ ರೀತಿ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿನ ಗೋಡೆ ಕೆಡವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಡಿಸೆಂಬರ್ 6ರೊಳಗೆ ಈದ್ಗಾ ಮೈದಾನದ ಗೋಡೆಯನ್ನು ಕೆಡವ ಬೇಕು ಎಂದು ಸರ್ಕಾರಕ್ಕೆ ಗಡುವು ನೀಡಿದ್ದ ಭಾಸ್ಕರನ್‌, ಇಲ್ಲದಿದ್ದರೆ ನಾವೇ ಆ ಕೆಲಸ ಮಾಡುತ್ತೇವೆ. ಈಗಾಗಲೇ ನಾವು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಲು ತಯಾರಿ ನಡೆಸಿದ್ದೇವೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರದ ಹಿಂದೂಪರ ಸಂಘಟನೆಗಳ ಜತೆ ಸಂಪರ್ಕದಲ್ಲಿದ್ದೇವೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.

ಭಾಸ್ಕರನ್ ಹೇಳಿಕೆಯಿಂದ ಕೋಮು ಸೌಹರ್ಧತೆಗೆ ಧಕ್ಕೆಯಾಗಲಿದೆ. ಅನ್ಯ ಧರ್ಮೀಯರು ಪೂಜಿಸುವ ಜಾಗದ ಬಗ್ಗೆ ಅವಮಾನಿಸಿ ಮಾತನಾಡಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಭಾಸ್ಕರನ್ ವಿರುದ್ಧ ಚಾಮರಾಜಪೇಟೆ ಠಾಣೆ ಪಿಎಸ್‌ಐ ನಾಗೇಂದ್ರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಕಳೆದ ಒಂದು ವರ್ಷದಿಂದ ಈದ್ಗಾ ಮೈದಾನದ ವಾರಸುದಾರಿಕೆ ವಿಚಾರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಮೈದಾನವನ್ನು ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಬೇಕೆಂದು ಹಿಂದೂಪರ ಸಂಘಟನೆಗಳು ಒಂದೆಡೆ ಒತ್ತಾಯಿಸುತ್ತಿದ್ದರೆ, ಮುಸ್ಲಿಂ ವಕ್ಫ್ ಬೋರ್ಡ್ ಮೈದಾನ ತನಗೆ ಸೇರಿದ ಆಸ್ತಿ ಎಂದು ಹೇಳುತ್ತಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಆದರೆ ಇತ್ತೀಚೆಗೆ ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ | ಈದ್ಗಾ ಮೈದಾನದಲ್ಲೇ ಗಣೇಶೋತ್ಸವ: ಶಾಸಕ ಜಮೀರ್‌ ಖಾನ್‌ಗೆ ಸವಾಲು ಹಾಕಿದ ಮುತಾಲಿಕ್

Exit mobile version