ಬೆಂಗಳೂರು: ಬಿಜೆಪಿ ಸಂಘಟನೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಮುಖಂಡ ಕೆ.ಎನ್ ಚಕ್ರಪಾಣಿ ಅವರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬೆಂಗಳೂರಿನ ವಿರೂಪಾಕ್ಷಪುರದಲ್ಲಿ ದೂರು ದಾಖಲಾಗಿದೆ.
ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿರುವ ವಿರೂಪಾಕ್ಷಪುರದ ಶ್ರೀಧರ್ ಅಪಾರ್ಟ್‌ಮೆಂಟ್ ಮಾಲೀಕ ಶ್ರೀಧರ್ ಮೂರ್ತಿ ಎಂಬುವವರು ದೂರು ದಾಖಲಿಸಿದ್ದಾರೆ. ಶ್ರೀಧರ್ ಅವರ ಅಪಾರ್ಟ್‌ಮೆಂಟ್ ಹಾಗೂ ಕೆ.ಎನ್ ಚಕ್ರಪಾಣಿ ಅವರ ಮನೆ ಎದುರುಬದುರಾಗಿವೆ.
ಇತ್ತೀಚೆಗೆ ಶ್ರೀಧರ್ ಮೂರ್ತಿಯವರು ತಮ್ಮ ಅಪಾರ್ಟ್‌ಮೆಂಟ್ ಗೇಟ್ ರಿಪೇರಿ ಮಾಡಿಸುತ್ತಿದ್ದರು. ಈ ವೇಳೆ ಏಕಾಏಕಿ ನುಗ್ಗಿದ ಚಕ್ರಪಾಣಿ, ಇಲ್ಲಿ ಕೆಲಸ ಮಾಡದಂತೆ ಅಲ್ಲಿದ್ದ ಕಾರ್ಮಿಕರನ್ನು ತಡೆದಿದ್ದಾರೆ. ನಂತರ ಅಲ್ಲಿಯೇ ಕುಳಿತಿದ್ದ ತಮ್ಮ ಬಳಿ ಬಂದು ಕಪಾಳಕ್ಕೆ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ, ನನ್ನ ಮನೆ ಮುಂದೆ ನೀನು ಇರಬಾರದು, ಇದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. 12 ಜನರ ಜತೆ ಬಂದ ಚಕ್ರಪಾಣಿ ಕುಡಿದು ಗಲಾಟೆ ಮಾಡಿದ್ದಾರೆ ಎಂದು ದೂರಿನಲ್ಲಿ ಶ್ರೀಧರ್ ತಿಳಿಸಿದ್ದಾರೆ.
ಚಕ್ರಪಾಣಿ ಅವರ ಬಿಜೆಪಿ ರಾಷ್ಟ್ರೀಯ ಮುಖಂಡರಾದ ಯೋಗಿ ಆದಿತ್ಯನಾಥ್, ರಾಜೀವ್ ಚಂದ್ರಶೇಖರ್, ರಾಜ್ಯ ಮುಖಡರಾದ ಜಗದೀಶ ಶೆಟ್ಟರ್, ಪ್ರತಾಪ್ ಸಿಂಹ, ಡಾ. ಕೆ. ಸುಧಾಕರ್, ಬಿ.ಎಸ್. ಯಡಿಯೂರಪ್ಪ ಮುಂತಾದವರ ಜತೆ ಚಕ್ರಪಾಣಿ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಸದ್ಯ ಚಕ್ರಪಾಣಿ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 143, 448, 323, 504, 506 ಅಡಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನು ಓದಿ | ಅನುಮತಿ ಪಡೆಯದೇ ಜಾಹೀರಾತು ಪ್ರಕಟಿಸಿದ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ವಿರುದ್ದ ಎಫ್‌ಐಆರ್