ಹಾಸನ: ಇಲ್ಲಿನ ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿ ಕಲ್ಲಸಾರಹಳ್ಳಿ ಗ್ರಾಮದಲ್ಲಿ ಹುಲ್ಲಿನ ಬಣವೆಗಳ ಮೇಲೆ ವಿದ್ಯುತ್ ತಂತಿ ತುಂಡಾಗಿ (Fire Accident) ಬಿದ್ದು, ಸುಮಾರು ಐದು ಲೋಡ್ ರಾಗಿ ಹುಲ್ಲು ಹಾಗೂ ಒಂದು ತೆಂಗಿನಮರ ಸಂಪೂರ್ಣ ಬೆಂಕಿಗಾಹುತಿ ಆಗಿವೆ.
ಗ್ರಾಮದ ಹನುಮಂತಪ್ಪ ಎಂಬುವವರಿಗೆ ಸೇರಿದ ರಾಗಿ ಹುಲ್ಲು ಬೆಂಕಿಗಾಹುತಿ ಆಗಿದ್ದು, ಕೆಲ ದಿನಗಳ ಹಿಂದಷ್ಟೇ ರಾಗಿ ಕಟಾವು ಮಾಡಿ ತಮ್ಮ ಮನೆಯ ಹಿತ್ತಲಿನಲ್ಲಿ ಮೆದೆ ಒಟ್ಟಿದ್ದರು. ಈ ವೇಳೆ ವಿದ್ಯುತ್ ತಂತಿ ತುಂಡಾಗಿ ಹುಲ್ಲಿನ ಮೆದೆ ಮೇಲೆ ಬಿದ್ದಿದ್ದು, ಒಮ್ಮೆಲೆ ಬೆಂಕಿ ಹೊತ್ತಿಕೊಂಡಿದೆ.
ಇದನ್ನೂ ಓದಿ: Karnataka Budget 2023 : ಬಡ್ಡಿ ರಹಿತ ಸಾಲ 3 ರಿಂದ 5 ಲಕ್ಷಕ್ಕೆ ಹೆಚ್ಚಳ; ಬಜೆಟ್‌ನಲ್ಲಿ ಘೋಷಣೆ
ಬೆಂಕಿ ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ರಾಗಿ ಹುಲ್ಲು ಸಂಪೂರ್ಣ ಸುಟ್ಟು ಹೋಗಿದೆ. ಹುಲ್ಲು ಬೆಂಕಿಗಾಹುತಿಯಾಗಿದ್ದರಿಂದ ಸುಮಾರು ಐವತ್ತರಿಂದ ಎಪ್ಪತ್ತೈದು ಸಾವಿರ ನಷ್ಟವಾಗಿದೆ. ಸೂಕ್ತ ಪರಿಹಾರ ನೀಡುವಂತೆ ಹನುಮಂತಪ್ಪ ಒತ್ತಾಯ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಾಣಾವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.