ಬೆಂಗಳೂರು: ಇತ್ತೀಚೆಗೆ ಅಗ್ನಿ ಅವಘಡಗಳು ಹೆಚ್ಚಾಗುತ್ತಿದ್ದು, ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಎಸಿ ಬಸ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಹೊತ್ತಿ ಉರಿದಿದೆ. ಬೆಂಗಳೂರಿನ ವೀರಭದ್ರನಗರದಲ್ಲಿ ಅಗ್ನಿ ಅವಘಡ ನಡೆದಿದೆ.
ಮೊದಲಿಗೆ ಒಂದು ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಸುಮಾರು 20ಕ್ಕೂ ಹೆಚ್ಚು ಬಸ್‌ಗಳಿಗೂ ಆವರಿಸಿ ಸುಟ್ಟು ಕರಕಲಾಗಿವೆ. ಈ ಗ್ಯಾರೇಜ್‌ನಲ್ಲಿ 25ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಮೊದಲಿಗೆ ಬ್ಯಾಟರಿಯಲ್ಲಿ ಹೊಗೆ ಬಂದಿದ್ದು, ಒಮ್ಮೆಲೆ ಬೆಂಕಿ ಕಾಣಿಸಿಕೊಂಡಿದೆ. ಕೆಲವರು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ಆಗದೆ ಇದ್ದಾಗ ಅಲ್ಲಿದ್ದವರು ಓಡಿ ಹೋಗಿದ್ದಾರೆ.
ಇದನ್ನೂ ಓದಿ: Murder Case : ಜಾತಿ ಕಲಹ; ಕಾಂಗ್ರೆಸ್ ಮುಖಂಡನ ಕಗ್ಗೊಲೆ!
ಎಸ್.ವಿ ಕೋಚ್ ಎಂಬ ಹೆಸರಲ್ಲಿ ಗ್ಯಾರೇಜ್ ನಡೆಸಲಾಗುತ್ತಿತ್ತು. ಶ್ರೀನಿವಾಸ್ ಎಂಬುವರು ಹಲವು ವರ್ಷಗಳಿಂದ ಬಸ್‌ಗಳ ಚಾರ್ಸಿಗೆ ಬಾಡಿ ಫಿಟ್ ಮಾಡುವ ಕೆಲಸ ಮಾಡುತ್ತಿದ್ದರು. ಗ್ಯಾರೇಜ್‌ನಲ್ಲಿ ಕಟ್ಟಿಂಗ್ ಹಾಗೂ ವೆಲ್ಡಿಂಗ್ ಮಷಿನ್‌ಗಳನ್ನು ಬಳಸಿ ಕೆಲಸ ಮಾಡಲಾಗುತ್ತದೆ. ಹೀಗಾಗಿ ಸ್ಪಾರ್ಕ್‌ನಿಂದಾಗಿ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ. ಆದರೆ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಜತೆಗೆ ಸಿಲಿಂಡರ್‌ಗಳಿರುವ ಕಾರಣ ಸ್ಫೋಟದ ಆತಂಕವು ಇದೆ. ಈಗಾಗಲೇ ಬೆಂಕಿ ನಂದಿಸಲು ಒಂದು ಬಸ್ ನೀರು ಖಾಲಿ ಆಗಿದೆ. ಸ್ಥಳಕ್ಕೆ ಡಿಸಿಪಿ ರಾಹುಲ್ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಇತ್ತ ಕಣ್ಣೆದುರಿಗೆ ಗ್ಯಾರೇಜ್ ಸುಟ್ಟು ಕರಕಲಾದ ಹಿನ್ನೆಲೆ ಮಾಲೀಕ ಶ್ರೀನಿವಾಸ್ ಕಣ್ಣೀರು ಹಾಕಿದ್ದಾರೆ. ಘಟನೆಯಲ್ಲಿ ಸುಮಾರು 20 ಕೋಟಿ ರೂ. ಹೆಚ್ಚು ನಷ್ಟವಾಗಿದೆ ಎನ್ನಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ