ಹಾವೇರಿ: ಹಾವೇರಿ ಜಿಲ್ಲೆಯ ಚಿಕ್ಕೇರೂರು ಗ್ರಾಮದಲ್ಲಿ ಬೆಂಕಿ ಆಕಸ್ಮಿಕ ನಡೆದಿದ್ದು (Fire Accident), ಐದಕ್ಕೂ ಅಧಿಕ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಸುಮಾರು 30 ಲಕ್ಷ ರೂ.ಗಿಂತ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ದಟ್ಟ ಹೊಗೆ ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಎಲೆಕ್ಟ್ರಿಕಲ್ ಅಂಗಡಿ, ಬೇಕರಿ, ಗೊಂಬಿ ಅಂಗಡಿ, ಫುಟವೇರ್ ಅಂಗಡಿ, ಹೊಟೇಲ್ ಭಸ್ಮ.ವಾಗಿದೆ. ಸ್ಥಳಕ್ಕೆ ಹಿರೇಕೆರೂರು ಶಾಸಕ ಯು.ಬಿ.ಬಣಕಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು
ಬೆಳಗಾವಿ: ಜಿಲ್ಲೆಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಖನಗಾಂವ ಗ್ರಾಮದ ಕೆ.ಎಚ್.ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕೆಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ಡಿಕ್ಕಿಯಾಗಿ ಈ ಅವಘಡ ನಡೆದಿದೆ. ಮೃತರನ್ನು ಸುಳೇಬಾವಿ ಗ್ರಾಮದ ವಿಠ್ಠಲ ದತ್ತಾ ಲೋಕರೆ (29) ಎಂದು ಗುರುತಿಸಲಾಗಿದೆ.
ಬೆಳಗಾವಿ ಕಡೆಗೆ ಬರುತ್ತಿದ್ದ ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ವಿಠ್ಠಲ ದತ್ತಾ ಲೋಕರೆ 30 ಅಡಿ ದೂರದ ಹೊಲಕ್ಕೆ ಹಾರಿ ಬಿದ್ದಿದ್ದರು. ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಕೂಡ ಪಲ್ಟಿ ಹೊಡೆದಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೈಸೂರಿನ ಗುಜರಿ ಗೋಡೌನ್‌ನಲ್ಲಿ ಅನಿಲ ಸೋರಿಕೆ, 30 ಮಂದಿ ಅಸ್ವಸ್ಥ
ಮೈಸೂರು: ಗುಜರಿಯ ಗೋಡೌನ್‌ನಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿ (Gas Leakage) 30 ಮಂದಿ ಅಸ್ವಸ್ಥಗೊಂಡ ಘಟನೆ ಮೈಸೂರಿನಲ್ಲಿ ಸಂಭವಿಸಿದೆ. ಮೈಸೂರಿನ ಹಳೆ ಕೆಸರೆಯ ಗುಜರಿ ಅಂಗಡಿಯಲ್ಲಿ ಈ ಸಮಸ್ಯೆ ಉಂಟಾಗಿದ್ದು, ಆರಂಭದಲ್ಲಿ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಐವರು ಅಸ್ವಸ್ಥಗೊಂಡರೆ ಬಳಿಕ ಸುತ್ತಲಿನ ಗ್ರಾಮಸ್ಥರೂ ಆರೋಗ್ಯ ಸಮಸ್ಯೆ ಎದುರಿಸಿ ಆಸ್ಪತ್ರೆ ಸೇರಿದ್ದಾರೆ.
ಶುಕ್ರವಾರ ಸಂಜೆ ವೇಳೆಗೆ ವಿಷಾನಿಲ ಸೋರಿಕೆಯಾಗಿತ್ತು. ಮೊದಲು ಗುಜರಿ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದವರು ಅಸ್ವಸ್ಥಗೊಂಡ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಳಿಕ ಗ್ರಾಮಸ್ಥರಿಗೆ ಕೆಮ್ಮು, ವಾಂತಿ ಶುರುವಾಗಿದೆ. ಅಸ್ವಸ್ಥಗೊಂಡಿರುವ 30 ಮಂದಿಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೈಸೂರಿನ ಹಳೆ ಕೆಸರೆಯ ರಿದಾ ಸ್ಟೀಲ್ ಟ್ರೇಡರ್ಸ್ ಗುಜರಿ ಗೋಡೌನ್‌ನಲ್ಲಿ ಘಟನೆ ಸಂಭವಿಸಿದೆ. ಅನಿಲ ಗೋಡೌನ್ನಿಂದ ಹೊರಕ್ಕೆ ಬಂದು ಕೆಸರೆ ಗ್ರಾಮದಲ್ಲಿ ಹರಡಿದಿಎ. ಕೆಸರೆ ಗ್ರಾಮಸ್ಥರಲ್ಲೂ ಉಸಿರಾಟದ ತೊಂದರೆ, ಕೆಮ್ಮು ಕಾಣಿಸಿಕೊಂಡು ಪರದಾಡಿದ್ದಾರೆ. ಎನ್.ಆರ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಹಾಗೂ ಆರೋಗ್ಯಾಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿದೆ. ಘಟನೆ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
Assault Case: ಹರಿಹರದಲ್ಲಿ ನೈತಿಕ ಪೊಲೀಸ್ ಗಿರಿ; ಯುವಕನನ್ನು ರೂಮ್‌ನಲ್ಲಿ ಹಾಕಿ ಮನಸೋ ಇಚ್ಛೆ ಹಲ್ಲೆ