ಸಾಗರ/ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಾರು ಹೊತ್ತಿ (Fire Accident) ಉರಿದಿದೆ. ಸಾಗರ ನಗರದ ಎಲ್ಐಸಿ ಕಚೇರಿ ಮುಂಭಾಗ ಭಾನುವಾರ ಮಧ್ಯಾಹ್ನ ಈ ಅಗ್ನಿಅವಘಡ ಸಂಭವಿಸಿದ್ದು, ಕಾರಿನಲ್ಲಿದ್ದ ಚಾಲಕ ಪಾರಾಗಿದ್ದಾರೆ.
ಸೊರಬ ತಾಲೂಕಿನ ಉಳವಿಯ ವಿಜಯ್ ಎಂಬುವರಿಗೆ ಸೇರಿದ ಕಾರು ಇದಾಗಿದ್ದು, ವಿಜಯ್ ಅವರು ಸಾಗರದಲ್ಲಿ ನಡೆಯುತ್ತಿರುವ ಮಾರಿಜಾತ್ರೆಗೆ ಹೊರಟ್ಟಿದ್ದರು. ಬಿ.ಎಚ್.ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಬೆಂಕಿ ಕಾಣಸಿಕೊಂಡಿದೆ. ತಕ್ಷಣವೇ ಎಚ್ಚೆತ್ತುಕೊಂಡ ಚಾಲಕ ವಿಜಯ್ ಕಾರಿನಿಂದ ಕೆಳಗೆ ಇಳಿದಿದ್ದಾರೆ.
ಕಾರಿನ ಇಂಜಿನ್, ಬ್ಯಾಟರಿ ಹಾಗೂ ಕಾರಿನ ಮುಂಭಾಗ ಸುಟ್ಟು ಕರಕಲಾಗಿದೆ. ಸ್ಥಳೀಯರೇ ಮುಂದೆ ನಿಂತು ನೀರು ಹಾಯಿಸಿ ಬೆಂಕಿ ನಿಯಂತ್ರಣಕ್ಕೆ ಶ್ರಮಪಟ್ಟರು. ಇದರಿಂದ ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಪ್ಯಾಲೇಸ್ ಗ್ರೌಂಡ್ ಬಳಿ ಹೊತ್ತಿ ಉರಿದ ಕಾರುಗಳು
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ಬಳಿ ಕಾರುಗಳು ಹೊತ್ತಿ ಉರಿದಿದೆ. ಐಷಾರಾಮಿ ಕಾರು ಸೇರಿ ಎರಡರಿಂದ ಮೂರು ಕಾರು ಸುಟ್ಟು ಕರಕಲಾಗಿವೆ. ಕಸಕ್ಕೆ ಬೆಂಕಿ ತಗುಲಿರಬಹುದು ಅಥವಾ ಕಾರಿನಲ್ಲಿ ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
ಲಾರಿ ಹಾಗೂ ಟಾಟಾ ಏಸ್ ನಡುವೆ ಮುಖಾಮುಖಿ ಡಿಕ್ಕಿ
ಹಾವೇರಿ ನಗರದ ಜಿ.ಎಚ್. ಕಾಲೇಜು ಬಳಿ ಲಾರಿ ಹಾಗೂ ಟಾಟಾ ಏಸ್ ನಡುವೆ ಮುಖಾಮುಖಿ ಡಿಕ್ಕಿ ಆಗಿದೆ. ಡಿಕ್ಕಿಯಾದ ರಭಸಕ್ಕೆ ಲಾರಿ ಪಲ್ಟಿ ಆಗಿದ್ದು, ಟಾಟಾ ಏಸ್ ವಾಹನ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಸಿಟ್ಟಿಗೆದ್ದು ಗಿರವಿ ಅಂಗಡಿಗೆ ಬೆಂಕಿ ಇಟ್ಟ ಗ್ರಾಹಕ; ಗಾಯಗೊಂಡ ಮಾಲೀಕ