Site icon Vistara News

Fire Accident : ಬೆಂಗಳೂರಲ್ಲಿ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್; 10 ಜನರ ಪ್ರಾಣ ಉಳಿಸಿತು ಊಟದ ಟೈಂ!

Fire Accident

ಬೆಂಗಳೂರು: ಇತ್ತೀಚೆಗೆ ಅಗ್ನಿ ಅವಘಡ ಪ್ರಕರಣಗಳು (Fire accident) ಹೆಚ್ಚಾಗುತ್ತಿದೆ. ಬೆಂಗಳೂರಿನ ಲಗ್ಗರೆ ಬಳಿಯಿರುವ ಆಸರೆ ವೃದ್ಧಾಶ್ರಮ ಸಮೀಪದಲ್ಲಿ ಅಗ್ನಿ‌ಅವಘಡ ಸಂಭವಿಸಿದೆ. ಒಮ್ಮೆಲೆ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿದ್ದು ಪಕ್ಕದಲ್ಲಿದ್ದ ಗುಜರಿ ಅಂಗಡಿಗೆ ಬೆಂಕಿ ತಗುಲಿದೆ.

ಪರಿಣಾಮ ಒಮ್ಮೆಲೇ ಅಂಗಡಿ ಹೊತ್ತಿ ಉರಿದಿದ್ದು, ದಟ್ಟ ಹೊಗೆಯೇ ಆವರಿಸಿತ್ತು. ನೋಡನೋಡುತ್ತಲೇ ಮುಜಾಹಿಲ್ ಎಂಬುವವರಿಗೆ ಸೇರಿದ ಗುಜರಿ ಅಂಗಡಿ ಸುಟ್ಟು ಭಸ್ಮವಾಗಿದೆ. ಸುಮಾರು 10 ಮಂದಿ ಈ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 1:30ರ ಸುಮಾರಿಗೆ ಈ ಅವಘಡ ಸಂಭವಿಸಿತ್ತು. ಊಟದ ಸಮಯವಾಗಿದ್ದರಿಂದ ಕೆಲಸಗಾರರೆಲ್ಲರೂ ಗುಜರಿ ಅಂಗಡಿಯಲ್ಲಿ ಇರಲಿಲ್ಲ.

ಹೀಗಾಗಿ ನಡೆಯಬಹುದಾದ ದೊಡ್ಡ ಅನಾಹುತವೊಂದು ತಪ್ಪಿತ್ತು. ಇತ್ತ ಟ್ರಾನ್ಸ್‌ಫಾರ್ಮರ್‌ ಬ್ಲಾಸ್ಟ್‌ನಿಂದಾಗಿ ಅಕ್ಕಪಕ್ಕದ ಕಟ್ಟಡಕ್ಕೂ ಬೆಂಕಿ ತಗುಲುವ ಸಾಧ್ಯತೆ ಇತ್ತು. ಹೀಗಾಗಿ ಪಕ್ಕದಲ್ಲೇ ಇದ್ದ ಆಸರೆ ವೃದ್ಧಾಶ್ರಮದಲ್ಲಿದ್ದ ಎಲ್ಲರನ್ನೂ ಸ್ಥಳಾಂತರ ಮಾಡಲಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. 5 ಫೈರ್ ಇಂಜಿನ್ ಮೂಲಕ ಬೆಂಕಿ ನಂದಿಸಲಾಯಿತು. ಸ್ಥಳೀಯರು ಸಿಬ್ಬಂದಿಗೆ ಸಾಥ್‌ ನೀಡಿದರು. ಜೆಸಿಬಿ‌ ಸಹಾಯದಿಂದ ‌ಗುಜರಿ ಅವಶೇಷಗಳ‌ ಸ್ಥಳಾಂತರ ಮಾಡಲಾಗಿದೆ. ಅದೃಷ್ಟವಶಾತ್ ‌ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಇದನ್ನೂ ಓದಿ: Road Accident : ಬೆಂ-ಮೈ ಹೆದ್ದಾರಿಯಲ್ಲಿ ಸರಣಿ ಅಪಘಾತ! ಹೊತ್ತಿ ಉರಿದ ಬೈಕ್‌ಗಳು, ಕಂಟೈನರ್‌, ಕಾರು!

ಅಗರಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ

ಬೆಂಗಳೂರಿನ ಪೈಪ್ ಲೈನ್ ರೋಡ್ ಜೋಗುಪಾಳ್ಯದಲ್ಲಿರುವ ಅಗರಬತ್ತಿ ಫ್ಯಾಕ್ಟರಿಯಲ್ಲೂ ಅಗ್ನಿ ಅವಘಡ ಸಂಭವಿಸಿದೆ. ಫ್ಯಾಕ್ಟರಿಯಲ್ಲಿ ಹತ್ತಿಕೊಂಡ ಬೆಂಕಿಯು ಒಮ್ಮೆಲೆ ರಸ್ತೆಗೆ ಆವರಿಸಿತ್ತು. ರಸ್ತೆ ಬದಿಯಲ್ಲಿ ನಿಂತಿದ್ದ 8 ಬೈಕ್‌ಗಳು ಸುಟ್ಟು ಭಸ್ಮವಾಗಿದ್ದವು. ದೊಡ್ಡ ಪ್ರಮಾಣದ ಬೆಂಕಿಯಿಂದ ಜನರು ಭಯಭೀತರಾಗಿದ್ದರು. ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ. ಈ ಅವಘಡದಲ್ಲಿ ಅದೃಷ್ಟವಾಶತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ. ಫ್ಯಾಕ್ಟರಿಯಲ್ಲಿ ಬೆಂಕಿ ಹೇಗೆ ಕಾಣಿಸಿಕೊಳ್ಳುತ್ತು ಎಂಬುದರ ಬಗ್ಗೆ ತಿಳಿದು ಬಂದಿಲ್ಲ

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version