ದೊಡ್ಡಬಳ್ಳಾಪುರ: ಇಲ್ಲಿನ ಹೊನ್ನಾಘಟ್ಟ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಬಿದ್ದು ಹಸುಗಳು ಸುಟ್ಟು ಭಸ್ಮವಾದ (Fire Accident) ಘಟನೆ ನಡೆದಿದೆ. ರೈತ ಮುನಿ ಹನುಮಯ್ಯ ಎಂಬುವವರಿಗೆ ಸೇರಿದ ರಾಸುಗಳು ದಾರುಣವಾಗಿ ಮೃತಪಟ್ಟಿವೆ.
ದನದ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಇತ್ತ ರಾಸುಗಳನ್ನು ರಕ್ಷಿಸಲು ಹೋದ ರೈತ ಮುನಿಹನುಮಯ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಸುಗಳನ್ನು ರಕ್ಷಿಸುವ ವೇಳೆ ಬೆಂಕಿ ತಗುಲಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೊಟ್ಟಿಗೆಗೆ ಬಿದ್ದ ಬೆಂಕಿಯನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸುವ ಕೆಲಸವನ್ನು ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೊನ್ನಾಘಟ್ಟ ಗ್ರಾಮದಲ್ಲಿ ನಡೆದಿದೆ.
ಟಯರ್ ಹೊತ್ತು ಸಾಗುತ್ತಿದ್ದ ಕಂಟೇನರ್‌ಗೆ ವಿದ್ಯುತ್ ತಂತಿ ಸ್ಪರ್ಶ; ಹೊತ್ತಿ ಉರಿದ ಲಾರಿಯಲ್ಲಿ ಕರಕಲಾದ ಚಾಲಕ
ಆನೇಕಲ್: ಗೋದಾಮಿಗೆ ಟಯರ್‌ಗಳನ್ನು ಸಾಗಿಸುತ್ತಿದ್ದ ಕಂಟೇನರ್ ಲಾರಿಯೊಂದಕ್ಕೆ ವಿದ್ಯುತ್ ತಂತಿ ಸ್ಪರ್ಶವಾಗಿ (Electricution) ವಾಹನವೇ ಹೊತ್ತಿ ಉರಿದಿದೆ. ಕಂಟೇನರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದ ವಡೇರ ಮಂಚನಹಳ್ಳಿ ಬಳಿ ಘಟನೆ ನಡೆದಿದೆ.
ಎಮ್ಆರ್‌ಎಫ್ ಕಂಪನಿಯಲ್ಲಿ ತಯಾರಾದ ಟಯರ್‌ಗಳನ್ನು ಗೋದಾಮಿಗೆ ಸಾಗಿಸಲಾಗುತ್ತಿತ್ತು. ಲಾರಿ ಜಿಗಣಿ ಕೈಗಾರಿಕಾರ ಪ್ರದೇಶದ ವಡೇರ ಮಂಚನಹಳ್ಳಿಯನ್ನು ತಲುಪಿದಾಗ 11 ಕೆವಿ ವಿದ್ಯುತ್ ತಂತಿ ಕಂಟೇನರ್ ಲಾರಿಗೆ ತಗುಲಿದೆ.
ಒಮ್ಮೆಗೇ ಬೆಂಕಿ ಹೊತ್ತಿಕೊಂಡಿದ್ದು ಕ್ಷಣಾರ್ಧದಲ್ಲಿ ಲಾರಿ ಹೊತ್ತಿ ಉರಿದಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರಾದರೂ ಅಷ್ಟು ಹೊತ್ತಿಗೆ ಲಾರಿ ಸಂಪೂರ್ಣ ಸುಟ್ಟು ಹೋಗಿದೆ. ಜತೆಗೆ ಅದರೊಳಗಿದ್ದ ಚಾಲಕ ರಾಜೇಂದ್ರನ್ ಅವರು ಹೊರಕ್ಕೆ ಬರಲಾಗದೆ ಸುಟ್ಟು ಕರಕಲಾಗಿದ್ದಾರೆ. ಮೃತಪಟ್ಟ ಚಾಲಕ ರಾಜೇಂದ್ರನ್ ಅವರು, ತಮಿಳುನಾಡಿನ ತಿರುವಣ್ಣಾಮಲೈ ಸಮೀಪದ ಕಂದಿಗೈ ಗ್ರಾಮದವರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: HD DeveGowda: ಹಾಸನ ಜೆಡಿಎಸ್ ದಂಗಲ್‌ಗೆ ದೇವೇಗೌಡರ ಬ್ರೇಕ್; ಭವಾನಿಗಿಲ್ಲ ಟಿಕೆಟ್?: ಇದರ ಹಿಂದಿನ ಕಾರಣವೇನು?
ಬೆಳಗ್ಗೆ 10.19ಕ್ಕೆ ವಿದ್ಯುತ್ ತಂತಿ ತಗುಲಿ ಬೆಂಕಿ ಅವಘಡ ಸಂಭವಿಸಿತ್ತು. 10.55ರ ಹೊತ್ತಿಗೆ ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ಧಾವಿಸಿದ್ದವು. ಕಂಟೇನರ್‌ನ ಹಿಂಬದಿಯ ಟಯರ್‌ಗಳಿಗೆ ಬೆಂಕಿ ಹತ್ತಿಕೊಂಡು ಅದು ಎಲ್ಲ ಕಡೆಗೂ ಹರಡಿದೆ. ವಿದ್ಯುತ್ ಆಘಾತದಿಂದ ಚಾಲಕ ರಾಜೇಂದ್ರನ್ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನಾಗೇಶ್ ತಿಳಿಸಿದ್ದಾರೆ. ಈ ಕಂಟೇನರ್ ಕೇರಳದಿಂದ ಜಿಗಣಿಯ ಗೋದಾಮಿಗೆ ಎಂಆರ್‌ಎಫ್ ಕಂಪನಿಯ ಟಯರ್‌ಗಳನ್ನು ಹೊತ್ತು ಬರುತ್ತಿತ್ತು ಎಂದು ಅವರು ಹೇಳಿದರು.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ