ಗದಗ: ಕಟಾವು ಮಾಡಿದ್ದ ಕಬ್ಬಿನ ಹೊಲಕ್ಕೆ ಹಚ್ಚಿದ ಬೆಂಕಿಯ ಕಿಡಿ, ಪಕ್ಕದ ಜಮೀನಿನಲ್ಲಿ ಹುಲುಸಾಗಿ ಬೆಳೆದು ನಿಂತ ಕಬ್ಬಿಗೆ ಆವರಿಸಿದ ಪರಿಣಾಮ 32 ಎಕರೆ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದು ನಿಂತಿದ್ದ ಕಬ್ಬು ಸಂಪೂರ್ಣ ಸುಟ್ಟು ಹೋಗಿರುವ (Fire tragedy) ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಿದರಳ್ಳಿ ಗ್ರಾಮದಲ್ಲಿ ನಡೆದಿದೆ.
ಗಂಗಾವತಿ ಮೂಲದ ವೈ. ಶೇಷಗಿರಿ ರಾವ್ ಎಂಬ ರೈತರಿಗೆ ಸೇರಿದ ಕಬ್ಬಿನ ಗದ್ದೆ ಇದಾಗಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಒಟ್ಟು 42 ಎಕರೆಯಲ್ಲಿ ಕಬ್ಬು ಬೆಳೆಯಲಾಗಿತ್ತು. ಇತ್ತೀಚೆಗೆ ಹತ್ತು ಎಕರೆಯಲ್ಲಿ ಮಾತ್ರ ಕಟಾವು ಮಾಡಲಾಗಿತ್ತು. ಉಳಿದ 32 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬನ್ನು ಶುಗರ್ ಫ್ಯಾಕ್ಟರಿಯವರು ಬಂದು ಕಟಾವು ಮಾಡುತ್ತಾರೆಂದು ರೈತ ಕಾದು ಕುಳಿತಿದ್ದರು.
ಒಪ್ಪಂದದ ಪ್ರಕಾರ ಗಂಗಾಪುರದ ವಿಜಯನಗರ ಶುಗರ್ಸ್ ಪ್ರೈ.ಲಿ. ಕಂಪನಿ, ಡಿಸೆಂಬರ್ ವೇಳೆಗೆ ಶೇಷಗಿರಿ ರಾವ್ ಇವರು ಬೆಳೆದಿದ್ದ ಕಬ್ಬನ್ನು ಕಟಾವು ಮಾಡಬೇಕಿತ್ತು. ಆದರೆ ಇಂದು, ನಾಳೆ ಎನ್ನುತ್ತಾ ಈ ವರೆವೂ ಕಬ್ಬು ಕಟಾವು ಮಾಡಿಲ್ಲ. ಸಮಯಕ್ಕೆ ಸರಿಯಾಗಿ ಕಬ್ಬು ಕಟಾವು ಮಾಡಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ ಎನ್ನುವುದು ರೈತರ ಅಳಲಾಗಿದೆ.
ಸಾಲಸೋಲ ಮಾಡಿ ಸಾಕಷ್ಟು ಬಂಡವಾಳ ಹಾಕಿದ್ದ ರೈತನಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಮನ ನೊಂದಿರುವ ಅವರು ವಿಷ ತೆಗೆದುಕೊಳ್ಳುತ್ತೇನೆ ಎಂಬ ನೋವಿನ ಮಾತುಗಳನ್ನು ಆಡುತ್ತಿದ್ದಾರೆ.
ಅಲ್ಲದೇ ಈ ಅನಾಹುತಕ್ಕೆಲ್ಲ ಗಂಗಾಪುರದ ವಿಜಯನಗರ ಶುಗರ್ಸ್ ಫ್ಯಾಕ್ಟರಿಯವರೇ ನೇರ ಹೊಣೆ ಎನ್ನುವುದು ರೈತರ ಆರೋಪವಾಗಿದ್ದು, ರೈತನ ಜೊತೆಗಿನ ಒಪ್ಪಂದದ ಪ್ರಕಾರ ಸರಿಯಾದ ಸಮಯಕ್ಕೆ ಕಟಾವು ಮಾಡದಿರುವುದೇ ಈ ರೀತಿಯ ಅವಘಡಗಳಿಗೆ ಕಾರಣವಾಗಿದೆ ಎಂದು ಈ ಭಾಗದಲ್ಲಿ ಬಹುತೇಕ ರೈತರ ದೂರಾಗಿದೆ.