ಉಳ್ಳಾಲ (ಮಂಗಳೂರು): ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಭಾನುವಾರ ಮುಸ್ಸಂಜೆ ಮನೆಯವರು ಇಫ್ತಾರ್‌ನಿರತರಾಗಿದ್ದ ಬೆಂಕಿ ಆಕಸ್ಮಿಕ (Fire tragedy) ಸಂಭವಿಸಿ ಇಡೀ ಮನೆಯೇ ಸುಟ್ಟು ಭಸ್ಮವಾಗಿದೆ.
ಹರೇಕಳ ಗ್ರಾಮದ ದೇರಿಕಟ್ಟೆ ನಿವಾಸಿಯಾದ ನೇಬಿಸ (ದಿವಂಗತ ಅಬ್ದುಲ್ ಖಾದರ್) ಅವರ ಮನೆಯಲ್ಲಿ ಮುಸ್ಸಂಜೆ 6.50ರ ವೇಳೆ ಅಡುಗೆ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ಆವೇಶಕ್ಕೆ ಮನೆಯು ಸಂಪೂರ್ಣವಾಗಿ ಭಸ್ಮವಾಗಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ರಂಝಾನ್ ಉಪವಾಸದ ಪ್ರಯುಕ್ತ ಇಫ್ತಾರ್’ನಲ್ಲಿ ನಿರತವಾಗಿದ್ದ ಮನೆಯವರ ಸಮಯ ಪ್ರಜ್ಞೆಯಿಂದ ಬೆಂಕಿ ಹೊತ್ತಿ ಕೊಂಡದ್ದು ಅರಿವಾಗುತ್ತಿದ್ದಂತೆಯೇ ಎಲ್ಲರೂ ಹೊರಗೋಡಿ ಬಂದಿದ್ದರಿಂದ ಪ್ರಾಣ ಹಾನಿ ತಪ್ಪಿತು.. ಆದರೆ ಮನೆಯು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಮನೆಯ ಪೀಠೋಪಕರಣಗಳು, ಪಾತ್ರೆಗಳು, ವಿದ್ಯುತ್ ಉಪಕರಣಗಳು, ಗೃಹ ಉಪಯೋಗಿ ಪರಿಕರಗಳು, ಮಕ್ಕಳ ಶಾಲಾ ಪಠ್ಯ ಪುಸ್ತಕ ಇನ್ನಿತರ ವಸ್ತುಗಳು ಸಂಪೂರ್ಣ ಭಸ್ಮಗೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸ್ಥಳೀಯರೊಂದಿಗೆ ಸೇರಿಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಘಟನಾ ಸ್ಥಳದ ಮಾಹಿತಿ ಪಡೆದು ಶಾಸಕ ಯು ಟಿ ಖಾದರ್ ಭೇಟಿ ನೀಡಿದ್ದು, ಅದೇ ರೀತಿ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳಾದ ರೆಹನ ನಝೀರ್, ಅನೀಸ್, ಹನೀಫ್, ರೆಹನ ಮುಹಮ್ಮದ್, ಅಬ್ದುಲ್ ಬಶೀರ್ ಎಸ್‌ಎಂ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಮಾತುಗಳನ್ನಾಡಿದರು.
ಬಂಗಾರಪೇಟೆಯಲ್ಲಿ ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ; ಸವಾರರಿಬ್ಬರ ಸಾವು
ಕೋಲಾರ: ಬಂಗಾರಪೇಟೆ ತಾಲೂಕು ಪರವನಹಳ್ಳಿ ಗ್ರಾಮದ ಬಳಿ ಎರಡು ಬೈಕ್‌ಗಳ ನಡುವೆ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ.
ಬಂಗಾರಪೇಟೆ ತಾಲೂಕಿನ ತಂಗೇಡಿಮಿಟ್ಟೆ ಗ್ರಾಮದ ಗೋಪಾಲ್ (25) ಹಾಗೂ ಪರವನಹಳ್ಳಿ ಗ್ರಾಮದ ನವೀನ್ (26) ಮೃತರು ಎಂದು ಗುರುತಿಸಲಾಗಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
ಸ್ಥಳಕ್ಕೆ ಕಾಮಸಮುದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೇಗಾಗಿ ರವಾನೆ ಮಾಡಲಾಗಿದೆ. ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.