Site icon Vistara News

Fire tragedy : ಬೈಲಹೊಂಗಲದ ಇಂಚಲ ಗ್ರಾಮದಲ್ಲಿ ಅಗ್ನಿದುರಂತ: 20ಕ್ಕೂ ಅಧಿಕ ರೈತರ ಬಣವೆ ಭಸ್ಮ, ಟ್ರ್ಯಾಕ್ಟರ್‌, ಕೃಷಿ ಸಲಕರಣೆ ಕರಕಲು

Bailahongala fire tragedy

#image_title

ಬೈಲಹೊಂಗಲ (ಬೆಳಗಾವಿ) : ತಾಲೂಕಿನ ಇಂಚಲ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ (Fire tragedy) ರೈತರ ಇಪ್ಪತ್ತಕ್ಕೂ ಹೆಚ್ಚು ಬಣವೆಗಳು ಸುಟ್ಟು ಬೂದಿಯಾಗಿವೆ. ಒಂದು ಟ್ಯಾಕ್ಟರ್ ಹಾಗೂ ಕೃಷಿ ಸಲಕರಣೆಗಳು ಸುಟ್ಟು ಕರಕಲಾಗಿವೆ. ಸೋಮವಾರ ರಾತ್ರಿ ಈ ದುರಂತ ಸಂಭವಿಸಿದೆ.

ರೈತರು ಬೆಳೆಗಳ ರಾಶಿ ಮುಗಿಸಿ ಗ್ರಾಮದ ಹೊರವಲಯದಲ್ಲಿ ಬಣವೆಗಳ ಮೂಲಕ ದನ ಕರುಗಳ ಮೇವು ಸಂಗ್ರಹಣೆ ಮಾಡಿದ್ದರು. ಬಿರು ಬಿಸಿಲಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಬಣವೆಗಳು, ಕೃಷಿ ಸಲಕರಣೆ ಬೆಂಕಿಗೆ ಆಹುತಿಯಾಗಿವೆ.

ವಿಷಯ ತಿಳಿದು ಅಗ್ನಿಶಾಮಕ ದಳದ ಎರಡು ವಾಹನ, ಪಕ್ಕದ ಜಮೀನಿನ ರೈತರು ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಲು ಶ್ರಮಿಸಿದರೂ ನಿಯಂತ್ರಣಕ್ಕೆ ಬರಲಿಲ್ಲ. ಬೆಳಗಾವಿ, ಗೋಕಾಕ, ಸವದತ್ತಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ನೆರವಾದರು.

ರೈತರು ತಮ್ಮ ಬೋರ್‌ ವೆಲ್ ಮೂಲಕ ನೀರು ತಂದು ಬೆಂಕಿ ನಂದಿಸಲು ಶ್ರಮಿಸಿದರು. ಬಣವೆ ಸುತ್ತಮುತ್ತ ಮನೆಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಗೋವಿನ ಜೋಳದ ಬೆಳೆ, ಜೋಳ ಹಾನಿಯಾಗಿದೆ. ಬಿಸಿಎಂ ಹಾಸ್ಟೆಲ ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಅರಿತು ಕಣದಲ್ಲಿರುವ ಎತ್ತುಗಳ ಕಣಿ ಬಿಚ್ಚಿದ ಪರಿಣಾಮ ಎತ್ತಗಳು ಸುರಕ್ಷಿತವಾಗಿ ಉಳಿದವು.

ಸತತ 6 ಗಂಟೆಗಳ ಕಾಲ ನಿರಂತರವಾಗಿ ಆಗ್ನಿಶಾಮಕದಳದ ಸಿಬ್ಬಂದಿ, ರೈತರು, ನೂರಾರು ನಾಗರೀಕರು ಬೆಂಕಿ ನಂದಿಸಲು ನೆರವಾದರು. ದನಕರುಗಳಿಗೆ ಸಂಗ್ರಹಿಸಿಟ್ಟದ್ದ ಬಣವೆಗಳಿಗೆ ಏಕಾಎಕಿ ಬೆಂಕಿ ತಗುಲಿ ಅಪಾರ ನಷ್ಟವಾಗಿದ್ದು ಸರ್ಕಾರ ಕೂಡಲೇ ಪರಿಹಾರ ಕಲ್ಪಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : Fire tragedy : ಬೆಂಕಿ ಬಿದ್ದ ಕೊಟ್ಟಿಗೆಯಿಂದ ನಾಲ್ಕು ದನಗಳನ್ನು ರಕ್ಷಿಸಿದ ಸಾಹಸಿ ಕೊನೆಗೆ ತಾನೇ ಸುಟ್ಟು ಹೋದ

Exit mobile version