ಚಾಮರಾಜನಗರ: ಜಿಲ್ಲೆಯ ಬಂಡೀಪುರದ ಅರಣ್ಯ ಪ್ರದೇಶದಲ್ಲಿ (Bandipur Forest) ಅರಣ್ಯ ಸಿಬ್ಬಂದಿ ಹಾಗೂ ಕಳ್ಳ ಬೇಟೆಗಾರರ ಮಧ್ಯೆ ಗುಂಡಿನ ಚಕಮಕಿ (Firing) ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಒಬ್ಬ ಬೇಟೆಗಾರ ಬಲಿಯಾಗಿದ್ದಾನೆ. ಹತನಾದವನ್ನು ಮನು (27) ಎಂದು ಗುರುತಿಸಲಾಗಿದೆ.
ಚಾಮರಾಜನಗರ ಜಿಲ್ಲೆ ಬಂಡೀಪುರದ ಮದ್ದೂರು ದಟ್ಟಾರಣ್ಯದಲ್ಲಿ 10 ಕಳ್ಳ ಬೇಟೆಗಾರರು ಕಡವೆ ಬೇಟೆಯಾಡಲು ಬಂದಿದ್ದರು. ಇದರ ಕುರಿತು ನಿಖರ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದೇ ವೇಳೆ ಅರಣ್ಯ ಸಿಬ್ಬಂದಿ ಮೇಲೆಯೇ ಬೇಟೆಗಾರರು ಗುಂಡಿನ ದಾಳಿ ನಡೆಸಿದ್ದಾರೆ.
ಇದಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಪ್ರತಿದಾಳಿ ನಡೆಸಿದ್ದಾರೆ. ಇದೇ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಬೇಟೆಗಾರ ಮನು ಹತನಾಗಿದ್ದಾನೆ. ಈತನು ಗುಂಡ್ಲುಪೇಟೆ ತಾಲೂಕಿನ ಭೀಮನಮಡು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ. ಉಳಿದ ಬೇಟೆಗಾರರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಒಬ್ಬ ಬೇಟೆಗಾರ ಸಾವು.
ಇದನ್ನೂ ಓದಿ: ಕೋಲಾರದಲ್ಲಿ ಪೊಲೀಸರ ಮೇಲೆಯೇ ಹಲ್ಲೆ; ಕೊಲೆ ಆರೋಪಿ ಕಾಲಿಗೆ ಗುಂಡೇಟು ಕೊಟ್ಟು ಬಂಧನ!
ಕೆಲ ದಿನಗಳ ಹಿಂದಷ್ಟೇ ಬಂಡೀಪುರದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದರು. ಬಂಡಿಪುರ ರಾಷ್ಟ್ರೀಯ ಉದ್ಯಾನವನ ಮೊಳೆಯೂರು ಅರಣ್ಯ ವ್ಯಾಪ್ತಿಯ ನಡಹಾಡಿ ಗ್ರಾಮದಲ್ಲಿ ಚಿಕ್ಕೇಗೌಡ (65) ಎಂಬವರ ಮೇಲೆ ಒಂಟಿ ಸಲಗ ದಾಳಿ ಮಾಡಿ ಕೊಂದು ಹಾಕಿತ್ತು. ಇದು ಎಚ್.ಡಿ. ಕೋಟೆ ತಾಲೂಕಿನ ಒಂದು ಗ್ರಾಮವಾಗಿದ್ದು, ಆನೆ ದಾಳಿ ನಡೆದು ಸಾವೇ ಸಂಭವಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.