Site icon Vistara News

ಸುರತ್ಕಲ್‌ ಫಾಜಿಲ್‌ ಹತ್ಯೆ: ಮೊದಲ ಆರೋಪಿ ಅರೆಸ್ಟ್‌, ಇವನು ಹಂತಕರು ಬಂದ ಕಾರಿನ ಚಾಲಕ

Fazil

ಮಂಗಳೂರು: ಸುರತ್ಕಲ್‌ನಲ್ಲಿ ನಡೆದ ಮೊಹಮ್ಮದ್‌ ಫಾಜಿಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜುಲೈ ೨೭ರಂದು ಈ ಕೊಲೆ ನಡೆದಿದ್ದು, ಈ ನಡುವೆ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದು, ಮೊದಲ ಬಂಧನ ಈಗ ಸಾಧ್ಯವಾಗಿದೆ.

ಬಂಧಿತ ವ್ಯಕ್ತಿ ಹಂತಕರನ್ನು ಆ ಜಾಗಕ್ಕೆ ಕರೆತಂದ ಕಾರಿನ ಚಾಲಕ ಎಂದು ತಿಳಿದುಬಂದಿದೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಶನಿವಾರ ರಾತ್ರಿ ಆರೋಪಿಯನ್ನು ಸೆರೆ ಹಿಡಿಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಬೆಳ್ಳಾರೆಯ ನೆಟ್ಟಾರಿನ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರು ಅವರ ಕೊಲೆಯ ಮರುದಿನವೇ ಈ ಘಟನೆ ನಡೆದು ಎಲ್ಲೆಡೆ ಆತಂಕಕ್ಕೆ ಕಾರಣವಾಗಿತ್ತು. ಬಂಧಿತ ಆರೋಪಿಯ ಸ್ಪಷ್ಟ ಮಾಹಿತಿ ಇನ್ನು ಸ್ವಲ್ಪವೇ ಹೊತ್ತಿನಲ್ಲಿ ತಿಳಿಯಲಿದೆ.

ಇನ್ನೂ ನಾಲ್ವರು ಬಲೆಯಲ್ಲಿ
ಸುರತ್ಕಲ್‌ನ ಮಂಗಳಪೇಟೆ ನಿವಾಸಿಯಾಗಿರುವ ಫಾಜಿಲ್‌ನನ್ನು ಜುಲೈ ೨೭ರಂದು ಬಟ್ಟೆ ಅಂಗಡಿಯೊಂದರ ಮುಂದೆ ನಿಂತಿದ್ದಾಗ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಈ ಕೊಲೆಯನ್ನು ಚಾಲಕ ಸೇರಿದಂತೆ ಒಟ್ಟು ಐವರ ತಂಡ ನಡೆಸಿದೆ ಎನ್ನುವುದು ಪೊಲೀಸರಿಗೆ ಇರುವ ಮಾಹಿತಿ. ಹೀಗಾಗಿ ಸಂಶಯಿತ ಇನ್ನೂ ನಾಲ್ವರು ಪೊಲೀಸರ ವಶದಲ್ಲಿದ್ದಾರೆ ಎನ್ನಲಾಗಿದೆ. ಇದೀಗ ಚಾಲಕನ ಸ್ಪಷ್ಟ ಮಾಹಿತಿ ಸಿಕ್ಕಿರುವುದರಿಂದ ಎಲ್ಲ ವಿಚಾರಗಳು ಸ್ಪಷ್ಟವಾಗುವ ಸಾಧ್ಯತೆ ಇದೆ.

ಐದು ತಂಡಗಳಿಂದ ಕಾರ್ಯಾಚರಣೆ
ಫಾಜಿಲ್‌ ಕೊಲೆ ಆರೋಪಿಗಳ ಪತ್ತೆಗಾಗಿ ಐದು ಪೊಲೀಸ್‌ ತಂಡಗಳು ಕಾರ್ಯಾಚರಿಸುತ್ತಿವೆ. ಈ ಹಿಂದೆ ದಕ್ಷಿಣ ಕನ್ನಡದಲ್ಲಿದ್ದು ಡಿಸಿಪಿಯಾಗಿದ್ದು ಪ್ರಸಕ್ತ ಹಾಸನದಲ್ಲಿ ಎಸ್‌ಪಿಯಾಗಿರುವ ಹರಿರಾಮ್‌ ಶಂಕರ್‌ ಅವರನ್ನು ಕೂಡಾ ಕರೆಸಿಕೊಳ್ಳಲಾಗಿದ್ದು, ಅದರ ಸಹಾಯವನ್ನು ಪಡೆಯಲಾಗುತ್ತಿದೆ. ಗುರುವಾರ ರಾತ್ರಿ ಕೊಲೆಯಾದ ಸಂದರ್ಭದಲ್ಲಿ ಆಗಿರುವ ಫೋನ್ ಸಂಭಾಷಣೆ, ಮೆಸೇಜ್‌ಗಳ ಮೇಲೆ ಕಣ್ಣಿಟ್ಟು ವಿಚಾರಣೆ ನಡೆದಿದೆ. ಫಾಜಿಲ್‌ ಅವರ ಮೇಲೆ ಯಾರಿಗಾದರೂ ದ್ವೇಷವಿತ್ತೇ ಎನ್ನುವ ವಿಚಾರದಲ್ಲಿ ಗಮನ ನೀಡಲಾಗಿದೆ. ಆದರೆ, ಇದು ವೈಯಕ್ತಿಕ ದ್ವೇಷದ ಕೃತ್ಯವಲ್ಲ, ಸಮಾಜ ವಿದ್ರೋಹಿಗಳು ನಡೆಸಿರುವ ಕೊಲೆ ಎಂಬ ಮಾತೂ ಇದೆ.

ಮೊಹಮ್ಮದ್‌ ಫಾಜಿಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಮೂರು ದಿನದಲ್ಲಿ ೨೧ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದು ಸುರತ್ಕಲ್‌ ಭಾಗದಲ್ಲಿ ಆಕ್ಷೇಪಕ್ಕೂ ಕಾರಣವಾಗಿತ್ತು. ಯಾವುದೇ ಆಧಾರಗಳಿಲ್ಲದೆ ಕಂಡ ಕಂಡವರನ್ನು ಎಳೆದುಕೊಂಡು ಹೋಗಿ ಕೂಡಿ ಹಾಕಲಾಗುತ್ತಿದೆ ಎಂದು ಹೇಳಲಾಗಿತ್ತು. ಸ್ವತಃ ಅಲ್ಲಿನ ಶಾಸಕರಾಗಿರುವ ಭರತ್‌ ಶೆಟ್ಟಿ ಅವರು ಇದರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಯಾರನ್ನೂ ಅನಗತ್ಯವಾಗಿ ವಶದಲ್ಲಿ ಇಟ್ಟುಕೊಂಡಿಲ್ಲ. ತನಿಖೆಯ ಭಾಗವಾಗಿ ಇದು ನಡೆದಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟಪಡಿಸಿದ್ದರು.

ಫಾಜಿಲ್‌ ಹತ್ಯೆಗೆ ಮಿಸ್ಟೇಕನ್‌ ಐಡೆಂಟಿಟಿ ಕಾರಣವೇ?: ಪೊಲೀಸರಲ್ಲಿ ಹೀಗೊಂದು ಅನುಮಾನ

Exit mobile version