Site icon Vistara News

Pralhad Joshi: ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಮೊದಲ ಹಂತ ಡಿಸೆಂಬರ್ ಒಳಗೆ ಪೂರ್ಣ: ಪ್ರಲ್ಹಾದ್ ಜೋಶಿ

Union Minister Pralhad Joshi

#image_title

ಧಾರವಾಡ: ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ 6 ಪಥ ರಸ್ತೆ ಅಗಲೀಕರಣ ಅವಳಿನಗರದ ಜನರ ಬಹುದಿನಗಳ ಬೇಡಿಕೆಯಾಗಿದೆ. ಆದರೆ ಈ ಹಿಂದಿನ ಒಪ್ಪಂದದ ಪ್ರಕಾರ 2025ರ ವರೆಗೆ ರಸ್ತೆ ಕಾಮಗಾರಿಗೆ ಕೈಹಾಕಲು ಸಾಧ್ಯವಿರಲಿಲ್ಲ. ಆದರೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರ ಸಹಕಾರದಿಂದ ಕಾಮಗಾರಿಗೆ ಅವಕಾಶ ದೊರೆತಿದೆ, ಕಾಮಗಾರಿ ಕೂಡ ಭರದಿಂದ ಸಾಗುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ.

ಅಧಿಕಾರಿಗಳೊಂದಿಗೆ ಬೈಪಾಸ್ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸುಮಾರು 570 ಕೋಟಿ ವೆಚ್ಚದಲ್ಲಿ 31 ಕಿ.ಮೀ ದೂರದವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತವಾಗಿ ತಾರಿಹಾಳ ಕ್ರಾಸ್‌ನಿಂದ ಧಾರವಾಡದ ಕಲಘಟಗಿ ಕ್ರಾಸ್‌ವರೆಗೆ 16 ಕಿ.ಮೀ 6 ಲೈನ್ ರಸ್ತೆ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ | Narendra Modi: ವಿಶ್ವದ ಗೌರವಕ್ಕೆ ಮೋದಿ ಅರ್ಹ; ಸಾಗರೋತ್ತರ ಕಾಂಗ್ರೆಸ್‌ ನಾಯಕನಿಂದಲೇ ಬಂತು ಮೆಚ್ಚುಗೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕರಾದ ಜೈಸ್ವಾಲ್ ಅವರೊಂದಿಗೆ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಜೋಶಿ ಫಸ್ಟ್ ಫೇಸ್ ಕಾಮಗಾರಿ ಡಿಸೆಂಬರ್ ಒಳಗೆ ಪೂರ್ಣಗೊಳಿಸಿ, ಜನವರಿಯೊಳಗೆ ಸಾರ್ವಜನಿಕರ ಪ್ರಯಾಣಕ್ಕೆ ಅನುವು ಮಾಡಿಕೊಡುವಂತೆ ಸೂಚಿಸಿದರು. ಇದೇ ವೇಳೆ 2025ರ ಒಳಗಾಗಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಸಂಪೂರ್ಣಗೊಳ್ಳಲಿದ್ದು, ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಬಹುಕಾಲದ ಮಹತ್ತರವಾದ ಬೇಡಿಕೆಯೊಂದು ಈಡೇರುತ್ತಿದ್ದು, ಇದಕ್ಕೆ ಪೂರಕವಾಗಿ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಅವಳಿ ನಗರದ ಜನತೆಯ ಪರವಾಗಿ ಪ್ರಲ್ಹಾದ್ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.

Exit mobile version