ಶಿರಸಿ: ವಯಸ್ಸು ಆಯಿತೆಂದರೆ ಮರೆವು ಜಾಸ್ತಿ ಎಂದು ಹೇಳುತ್ತಾರೆ. ಆದರೆ, ಇಲ್ಲಿ ಒಬ್ಬ ವೃದ್ಧರು ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿದ್ದಾರೆ. 71 ರ ವಯಸ್ಸಿನಲ್ಲೂ ಮೂರು ವರ್ಷಗಳ ಕಾಲ ಡಿಪ್ಲೊಮಾ ಕಾಲೇಜಿಗೆ ತೆರಳಿ ಪಾಠ ಕೇಳಿ ಪರೀಕ್ಷೆ ಬರೆದಿರುವ ಇವರು ರಾಜ್ಯಕ್ಕೆ ಪ್ರಥಮ ರ‌್ಯಾಂಕ್ (First Rank) ಪಡೆದಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಪರದೆಯಲ್ಲಿ ತೆರೆಕಂಡ ‘ಕಾಲೇಜ್ ಕುಮಾರ’ ಎಂಬ ಚಿತ್ರವನ್ನು ನೆನಪಿಸುವ ವಿಶೇಷ ಸನ್ನಿವೇಶ ಇದಾಗಿದೆ. ಶಿರಸಿಯ ಆದರ್ಶ ನಗರದ ನಿವಾಸಿ ನಾರಾಯಣ ಭಟ್ (71) ಎಂಬುವವರೇ ಈ ಸಾಧನೆ ಮಾಡಿದವರು.
ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 1973ರಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಕೋರ್ಸ್ನಲ್ಲಿ ರಾಜ್ಯಕ್ಕೆ ದ್ವಿತೀಯ ಶ್ರೇಣಿ ಪಡೆದಿದ್ದರು. ನಂತರ ಕಾರವಾರದ ಬಿಣಗಾದ ಕಾಸ್ಟಿಕ್ ಸೋಡಾ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ಸುಮಾರು 1993ರವರೆಗೆ ಕರ್ತವ್ಯ ನಿರ್ವಹಿಸಿ, ಬಳಿಕ ಗುಜರಾತ್ನಲ್ಲಿ 2013ರವರೆಗೆ ಕಾರ್ಯನಿರ್ವಹಿಸಿ ನಿವೃತ್ತರಾದರು.
ಇದನ್ನೂ ಓದಿ | Home Tuition Class | ಮಂಡ್ಯ ಬಾಲಕಿ ಅತ್ಯಾಚಾರ ಬೆನ್ನಲ್ಲೇ ಅನಧಿಕೃತ ಟ್ಯೂಷನ್‌ಗೆ ಬ್ರೇಕ್; ಶಿಕ್ಷಣ ಇಲಾಖೆಯ ಹೊಸ ರೂಲ್ಸ್
೨೦೧೯ಕ್ಕೆ ಪಾಲಿಟೆಕ್ನಿಕ್ ಕಾಲೇಜಲ್ಲಿ ಪ್ರವೇಶ
ಈಗ ತಮ್ಮ ನಿವೃತ್ತಿ ಜೀವನವನ್ನು ಶಿರಸಿಗೆ ಬಂದು ಕಳೆಯುತ್ತಿದ್ದಾರೆ. ಇವರ ಮಕ್ಕಳು ಕೂಡ ಇಂಜಿನಿಯರ್ ಆಗಿ ಹೊರ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇವರಿಗೆ ಮನೆಯಲ್ಲಿ ಸುಮ್ಮನೆ ಕುಳಿತು ಸಮಯ ವ್ಯರ್ಥ ಮಾಡುವ ಬದಲು ಸಿವಿಲ್ ಡಿಪ್ಲೊಮಾ ಮಾಡಬೇಕೆಂಬ ಆಸೆ ಹುಟ್ಟಿದೆ. ಅದರಂತೆ ಮನೆಯವರ ಸಹಾಯದಿಂದ ಶಿರಸಿಯ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2019ರಲ್ಲಿ ಪ್ರವೇಶಾತಿ ಪಡೆದುಕೊಂಡಿದ್ದಾರೆ.
ಪ್ರಾರಂಭದಲ್ಲಿ ಅಕ್ಕಪಕ್ಕದವರ ಮಾತುಗಳಿಂದ ಕೊಂಚ ಇರಿಸು ಮುರಿಸುಗೊಂಡರೂ, ಅದನ್ನೇ ಪಾಸಿಟಿವ್ ಆಗಿ ತೆಗೆದುಕೊಂಡು ದಿನ ನಿತ್ಯ, ಕಾಲೇಜಿನ ಸಮವಸ್ತ್ರ ಧರಿಸಿ ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗುತ್ತಿದ್ದರು. ಅಷ್ಟೇ ಕಷ್ಟಪಟ್ಟು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡುತ್ತಿದ್ದರು.
ತಪ್ಪದೇ ಹೋಂ ವರ್ಕ್ ಮಾಡುತ್ತಿದ್ದರು
ಕಾಲೇಜಿನಲ್ಲಿ ಕೊಡುವ ನಿತ್ಯದ ಹೋಮ್ ವರ್ಕ್ ತಪ್ಪದೇ ಮಾಡಿಕೊಂಡು, ಯಾವುದೇ ತಪ್ಪಿಲ್ಲದ ಹಾಗೆ ಅಚ್ಚುಕಟ್ಟಾಗಿ ಅಭ್ಯಾಸ ಮಾಡಿಕೊಂಡು ಬರುವ ವಿದ್ಯಾರ್ಥಿಗಳ ಸಾಲಿನಲ್ಲಿ ಇವರು ಮುಂಚೂಣಿಲ್ಲಿದ್ದರು. ಜತೆಗೆ ಕಾಲೇಜಿನ ಆದರ್ಶ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದರು. ಮೂರು ವರ್ಷಗಳ ಸಿವಿಲ್ ಡಿಪ್ಲೊಮಾ ಕೋರ್ಸ್ಗೆ, ನಿತ್ಯ ತರಗತಿಗೆ ಹಾಜರಾಗಿ ಮೊದಲ ವರ್ಷದಲ್ಲಿ ಶೇ. 91 ಅಂಕ ಗಳಿಸಿ ಪ್ರಥಮ ಸ್ಥಾನಗಳಿಸಿದ್ದರು. ನಂತರ ಅಂತಿಮವಾಗಿ 94.88 ಪ್ರತಿಶತ ಫಲಿತಾಂಶವನ್ನು ದಾಖಲಿಸಿದ್ದಾರೆ.
ಇವರ ಬಗ್ಗೆ ಕಾಲೇಜಿನಲ್ಲಿ ಒಳ್ಳೆಯ ಅಭಿಪ್ರಾಯವಿದ್ದು, ಆದರ್ಶ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ಒಂದು ದಿನವೂ ತರಗತಿಗೆ ಗೈರಾಗದ ಇವರು, ಸಮವಸ್ತ್ರ ಇಲ್ಲದೆ ಹೋದವರೂ ಅಲ್ಲ. ವಿದ್ಯಾಭ್ಯಾಸದ ಜತೆಗೆ ಇತರೆ ಚಟುವಟಿಕೆಯಲ್ಲಿ ತೊಡಗಿ ಉತ್ತಮ ರೀತಿಯಲ್ಲಿ ಸಾಧನೆ ಮಾಡಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ಸಿವಿಲ್ ಡಿಪ್ಲೋಮಾ ಪೂರ್ಣಗೊಳಿಸಿ ರಾಜ್ಯದಲ್ಲೇ ಫಸ್ಟ್ ರ‌್ಯಾಂಕ್‌ನಲ್ಲಿ ತೇರ್ಗಡೆಯಾಗಿ ಮಾದರಿಯಾಗಿದ್ದಾರೆ. ನವೆಂವರ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡಿಪ್ಲೊಮಾ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ತಾಂತ್ರಿಕ ಶಿಕ್ಷಣ ಸಚಿವರು ಇವರನ್ನು ಗೌರವಿಸಲಿದ್ದಾರೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ | ಸಹಕಾರಿ ಸೊಸೈಟಿಗಳು ಇನ್ನು ಮುಂದೆ ಸರ್ಕಾರಿ ಇ-ಮಾರ್ಕೆಟ್‌ನಲ್ಲಿ ಖರೀದಿಸಬಹುದು