ಮಂಡ್ಯ/ತುಮಕೂರು: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬನಗಟ್ಟದ ವಿಸಿ ನಾಲೆ ಸೇತುವೆ ಬಳಿ ಕಾರೊಂದು ಬಿದ್ದು ಐವರು ದಾರುಣವಾಗಿ ನಿನ್ನೆ (ನ.7) ಮೃತಪಟ್ಟಿದ್ದರು. ಮೃತರೆಲ್ಲರೂ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೈದಾಳದ ಗ್ರಾಮದವರಾಗಿದ್ದು, ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಪಾಂಡವಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಭೇಟಿ ನೀಡಿ, ಮೃತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಪರಿಹಾರ ಘೋಷಣೆ ಮಾಡದ ಹೊರತು ಶವ ತೆಗೆದುಕೊಂಡು ಹೋಗಲ್ಲ ಎಂದು ಪಟ್ಟು ಹಿಡಿದರು. ಬಳಿಕ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಯಿತು. ಬಳಿಕ ಮೃತದೇಹಗಳನ್ನು ಕೈದಾಳಕ್ಕೆ ತೆಗೆದುಕೊಂಡರು.
ಇತ್ತ ಮೃತರ ಸ್ವಗ್ರಾಮ ಕೈದಾಳದಲ್ಲಿ ನೀರವ ಮೌನ ಆವರಿಸಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೈದಾಳ ಗ್ರಾಮದ ಐವರು ನಿನ್ನೆ ಮಂಗಳವಾರ ಮೈಸೂರಿಗೆ ಬೀಗರ ಊಟಕ್ಕೆ ಹೋಗಿ ವಾಪಾಸ್ ಬರುವಾಗ ಈ ದುರಂತ ನಡೆದಿದೆ. ಚಂದ್ರಪ್ಪ, ಕೃಷ್ಣಪ್ಪ, ಧನಂಜಯಯ್ಯ, ಬಾಬು ಹಾಗೂ ಜಯಣ್ಣ ಮೃತ ದುರ್ದೈವಿಗಳು. ಈಗಾಗಲೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.
ಇದನ್ನೂ ಓದಿ: Drowned In Canal : ವಿಸಿ ನಾಲೆ ದುರಂತ; ಉರುಳಿ ಬಿದ್ದ ಕಾರು, ನಾಲ್ವರು ಮುಳುಗಿರುವ ಶಂಕೆ!
ಶಾಸಕರ ಸ್ಥಳ ಪರಿಶೀಲನೆ ವೇಳೆ ತಪ್ಪಿದ ಮತ್ತೊಂದು ದುರಂತ
ಶಾಸಕ ದರ್ಶನ್ ಪುಟ್ಟಣಯ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸ್ಥಳ ಪರಿಶೀಲನೆ ವೇಳೆ ಮತ್ತೊಂದು ಅವಘಡವು ಕೂದಲೆಳೆ ಅಂತರದಲ್ಲಿ ತಪ್ಪಿದೆ. ರೈತ ಸ್ವಾಮಿಗೌಡ ಎಂಬುವವರು ಪಾಂಡವಪುರ ಕಡೆಯಿಂದ ಬೇವಿನ ಕುಪ್ಪೆ ಕಡೆಗೆ ಎತ್ತಿನ ಗಾಡಿ ಹೊಡೆದುಕೊಂಡು ಹೋಗುತ್ತಿದ್ದರು. ವಿಸಿ ನಾಲೆ ಸೇತುವೆ ಮೇಲೆ ಬರುತ್ತಿದ್ದಂತೆ ಏಕಾಏಕಿ ಜಾನುವಾರುಗಳು ಬೆದರಿತು. ಈ ವೇಳೆ ಗಾಡಿ ಸಮೇತ ನಾಲೆಗೆ ಬೀಳುತ್ತಿತ್ತು. ಗಾಬರಿಯಿಂದ ಬೆದರಿದ ಹಸುಗಳನ್ನು ನಿಯಂತ್ರಿಸಲು ರೈತ ಸ್ವಾಮಿಗೌಡ ಹರಸಾಹಸ ಪಟ್ಟರು. ಗಾಡಿಯಿಂದ ಬಿಚ್ಚುತ್ತಿದ್ದಂತೆ ಅಷ್ಟೇ ವೇಗವಾಗಿ ಹಸುಗಳು ಓಡಿದ್ದವು.
ಅಧಿಕಾರಿಗಳ ಜತೆಗೆ ಸ್ಥಳ ಪರಿಶೀಲನೆ ನಡೆಸುತ್ತಿದ್ದ ಶಾಸಕ ದರ್ಶನ್ ಪುಟ್ಟಣಯ್ಯ ಸಮೀಪವೇ ಹಸುಗಳು ಬೆದರಿ ಓಡಿವೆ. ಇತ್ತ ಓಡಿ ಹೋಗುತ್ತಿದ್ದ ಹಸುಗಳನ್ನು ಹಿಡಿಯಲು ಹೋಗಿ ಅಧಿಕಾರಿಯೊಬ್ಬರು ರಸ್ತೆಯಲ್ಲೇ ಬಿದ್ದರು. ಈ ಘಟನೆಯಿಂದಾಗಿ ಒಂದು ಕ್ಷಣ ಎಲ್ಲರೂ ವಿಲಿತರಾದರು.
ತಡೆಗೋಡೆ ಕಟ್ಟಿ ಇಲ್ಲದಿದ್ದರೆ ನಿಮ್ಮನ್ನೇ ಕಟ್ಟಿ ಹಾಕ್ತೇವೆ!
ವಿಸಿ ನಾಲೆಗೆ ಕಾರು ಬಿದ್ದು ಐವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಮಾಡಲು ಬಂದ ಅಧಿಕಾರಿಗಳನ್ನು ರೈತರು ಹಿಗ್ಗಾ ಮೊಗ್ಗ ತರಾಟೆಗೆ ತೆಗೆದುಕೊಂಡರು. ಇದೊಂದೇ ಜಾಗದಲ್ಲಿ ಹತ್ತಾರು ಅಪಘಾತಗಳಾಗಿವೆ. ಮಂಗಳವಾರ ಮತ್ತೆ ಐವರು ಜಲಸಮಾಧಿಯಾಗಿದ್ದಾರೆ. ರಸ್ತೆ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಬೇಕು. ಇವತ್ತೆ ರಸ್ತೆ ಉಬ್ಬು ಹಾಗೂ ತಡೆಗೋಡೆ ಕಟ್ಟುವ ಕೆಲಸ ಆರಂಭಿಸಬೇಕು. ಇಲ್ಲದಿದ್ದರೆ ನಿಮ್ಮನ್ನೇ ಕಟ್ಟಿ ಹಾಕ್ತೇವೆ. 5 ವರ್ಷದಿಂದ ಇತ್ತ ಯಾರೊಬ್ಬರು ತಲೆ ಹಾಕಿಲ್ಲ. ಈಗ ದುರಂತ ನಡೆದ ಮೇಲೆ ಬಂದಿದ್ದೀರಿ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಸ್ಥಳ ಪರಿಶೀಲನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ದರ್ಶನ್ ಪುಟ್ಟಣಯ್ಯ, ಅಪಘಾತ ನಡೆದ ಸ್ಥಳದಲ್ಲಿ ಮತ್ತೆ ಈ ರೀತಿ ದುರಂತ ಆಗದೆ ಇರುವ ಹಾಗೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಹೆಚ್ಚು ತಿರುವು ಇದೆ. ಇಲ್ಲಿ ತಿರುವು ಇರುವ ಬಗೆಗೆ ಸ್ಥಳೀಯರಿಗಷ್ಟೆ ತಿಳಿದಿದೆ. ಹೊರಗಿನಿಂದ ಬರುವವರಿಗೆ ಇದರ ಬಗೆಗೆ ಅರಿವೆ ಇಲ್ಲ. ವೇಗವಾಗಿ ಬಂದು ನಿಯಂತ್ರಣ ತಪ್ಪಿ ಕಾಲುವೆಗೆ ಬೀಳುತ್ತಿದ್ದಾರೆ. ಎರಡೂ ಕಡೆ ಹಂಪ್ಸ್‌ಗಳು ಹಾಗೂ ತಡೆಗೋಡೆಗಳನ್ನು ನಿರ್ಮಿಸುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು.
ಕಡಿದಾದ ತಿರುವುಗಳಿಂದ ಅನಾಹುತ
ಘಟನೆ ನಡೆದ ಸ್ಥಳದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದೇ ದುರಂತಕ್ಕೆ ಕಾರಣವಾಗಿದೆ. ಕಡಿದಾದ ತಿರುವು ಇದ್ದರೂ ಯಾವುದೇ ಸೂಚನಾ ಫಲಕ ಹಾಕಿಲ್ಲ. ಸ್ಥಳೀಯರಿಗೆ ಹೊರತು ಪಡಿಸಿದರೆ ಹೊರಗಿನವರಿಗೆ ಇಲ್ಲಿ ತಿರುವು ಇದೆ ಎಂಬುದು ತಿಳಿಯುವುದಿಲ್ಲ. ದುರಂತ ನಡೆದ ಸ್ಥಳದಲ್ಲಿ ಒಂದು ವಾರದ ಹಿಂದೆಯಷ್ಟೆ ಲಾರಿ ಉರುಳಿ ಬಿದ್ದಿತ್ತು. ಲಾರಿ ನಾಲೆಗೆ ಬಿದ್ದಿದ್ದರಿಂದ ತಡೆಗೋಡೆ ಮುರಿದು ಬಿದ್ದಿತ್ತು. ನಿನ್ನೆ ಬನಗಟ್ಟ ಬಳಿ ದುರಂತ ನಡೆದ ನಂತರ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು. ಹಳ್ಳಕ್ಕೆ ಮಣ್ಣು ಸುರಿದು ತಾತ್ಕಾಲಿಕ ಕ್ರಮ ಕೈಗೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ