Site icon Vistara News

ನೋಂದಣಿಯಾಗದ ಆಹಾರ ಬ್ರ್ಯಾಂಡ್‌ಗಳಿಗೆ ಜಿಎಸ್‌ಟಿ ವಿನಾಯಿತಿ; ಕೇಂದ್ರ ವಿತ್ತ ಸಚಿವೆಗೆ FKCCI ಪತ್ರ

ಎಫ್‌ಕೆಸಿಸಿಐ

ಬೆಂಗಳೂರು: ನೋಂದಣಿಯಾಗದ ಆಹಾರ ಪದಾರ್ಥಗಳ ಬ್ರ್ಯಾಂಡ್‌ಗಳ ಮೇಲಿನ ಜಿಎಸ್‌ಟಿ ವಿನಾಯಿತಿಯನ್ನು ಯಥಾಸ್ಥಿತಿ ಮುಂದುವರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(FKCCI) ಅಧ್ಯಕ್ಷ ಡಾ. ಐ.ಎಸ್. ಪ್ರಸಾದ್‌ ಮನವಿ ಮಾಡಿದ್ದಾರೆ.

ಜಿಎಸ್‌ಟಿ ವಿನಾಯಿತಿ ಕೋರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿರುವ ಅವರು, ಇತ್ತೀಚೆಗೆ ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಪರಿಷ್ಕರಣೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರ ಸಮಿತಿ ರಚಿಸಲಾಗಿದೆ. ಪ್ರಮುಖವಾಗಿ ಸೂಕ್ಷ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉತ್ಪಾದಿಸುವ ಮತ್ತು ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸುವ ನೋಂದಾಯಿಸದ ಆಹಾರ ಪದಾರ್ಥಗಳ ಬ್ರ್ಯಾಂಡ್‌ಗಳ ಮೇಲಿನ ವಿನಾಯಿತಿಯನ್ನು ತೆಗೆದುಹಾಕಲು ಸಚಿವರ ಸಮಿತಿ ಚಿಂತನೆ ನಡೆಸುತ್ತಿದೆ ಎಂಬ ವಿಷಯ ಮಾಧ್ಯಮಗಳ ಮೂಲಕ ತಿಳಿದುಬಂದಿದೆ.

ದೇಶದಲ್ಲಿ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ, ಹೀಗಾಗಿ ಗ್ರಾಹಕರಲ್ಲಿ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ನೋಂದಣಿಯಾಗದ ಆಹಾರ ಬ್ರ್ಯಾಂಡ್‌ಗಳ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಿದರೆ ಉತ್ಪಾದಕರು, ವ್ಯಾಪಾರಿಗಳು ನಷ್ಟ ಅನುಭವಿಸುವ ಜತೆಗೆ ಗ್ರಾಹಕರಿಗೂ ಹೊರೆಯಾಗಲಿದೆ. ಹೀಗಾಗಿ ಜಿಎಸ್‌ಟಿ ವಿನಾಯಿತಿಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ.

ಎಫ್‌ಕೆಸಿಸಿಐ ರಾಷ್ಟ್ರ ನಿರ್ಮಾಣಕ್ಕಾಗಿ ಜಿಎಎಸ್‌ಟಿ ಅನುಷ್ಠಾನ ಪೂರ್ವ ಹಾಗೂ ನಂತರದ ಸಮಯದಲ್ಲಿ ಕೇಂದ್ರ ಸರ್ಕಾರದ ನೀತಿ ನಿಯಮಗಳಿಗೆ ಬೆಂಬಲ ವ್ಯಕ್ತಪಡಿಸುತ್ತಾ ಬಂದಿದೆ. ಜಿಎಸ್‌ಟಿ ಅನುಷ್ಠಾನವಾಗಿ ಯಶಸ್ವಿಯಾಗಿ ಐದು ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ತೆರಿಗೆ ವ್ಯವಸ್ಥೆಯಲ್ಲಿ ಕಾನೂನಿನಡಿ ಅಗತ್ಯ ಬದಲಾವಣೆಗಳನ್ನು ತರಲು ಸರ್ಕಾರ ಪ್ರಯತ್ನಿಸುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವವರೆಗೆ ಜಿಎಎಸ್‌ಟಿ ಪರಿಷ್ಕರಿಸಲು ಸಚಿವರ ಸಮಿತಿ ಪ್ರಸ್ತಾವನೆಯನ್ನು ಮುಂದೂಡಬೇಕು ಹಾಗೂ ಈ ನಿಟ್ಟಿನಲ್ಲಿ ತಜ್ಞರು, ಉದ್ದಿಮೆದಾರರು ಮತ್ತು ಗ್ರಾಹಕರ ಅಭಿಪ್ರಾಯವನ್ನು ಪಡೆಯಬೇಕು ಎಂದು ಕೋರಿದ್ದಾರೆ.

ಇದನ್ನೂ ಓದಿ | ಜಿಎಸ್‌ಟಿ ಕಾನೂನು ರಚಿಸಲು ಕೇಂದ್ರ, ರಾಜ್ಯ ಸರಕಾರಗಳಿಗೆ ಸಮಾನ ಅಧಿಕಾರ

Exit mobile version