Site icon Vistara News

Rain News : 9 ಜಿಲ್ಲೆಗಳಲ್ಲಿ ಪ್ರವಾಹ ಆತಂಕ; ಮೂವರ ಸಾವು, 11 ಜಿಲ್ಲೆ ಶಾಲೆಗಳಿಗೆ ರಜೆ!

Kumta Rainfall Effect captured in drone

ಬೆಂಗಳೂರು: ಮುಂಗಾರು ಆರ್ಭಟಕ್ಕೆ (Rain News) ರಾಜ್ಯದ 9 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. 11 ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪಿಯ ಬೈಂದೂರಿನಲ್ಲಿ ಸೆಲ್ಫಿ ಗೀಳಿಗೆ ಬಿದ್ದ ಯುವಕ ಜಲಪಾತದಲ್ಲಿ ಜಲಸಮಾಧಿಯಾಗಿದ್ದರೆ, ಕಾಲೇಜಿಗೆ ರಜೆಯಿದ್ದ ಹಿನ್ನೆಲೆಯಲ್ಲಿ ಈಜಲು ಹೋಗಿದ್ದ ಯುವಕ ಸಹ ನೀರುಪಾಲಾಗಿದ್ದಾನೆ. ಇನ್ನು ಜೇವರ್ಗಿ ತಾಲೂಕಿನ ಬಿರಾಳ್ ಬಿ ಗ್ರಾಮದಲ್ಲಿ ಮನೆಯ ಮಣ್ಣಿನ ಗೋಡೆ ಕುಸಿದು ಮಹಿಳೆಯೊಬ್ಬರು ಕೊನೆಯುಸಿರೆಳೆದಿದ್ದಾರೆ.

ಈಜಲು ತೆರಳಿದ್ದ ಯುವಕ ನೀರು ಪಾಲು

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ರಾಮತೀರ್ಥಕ್ಕೆ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ. ಮಣಿಕಂಠ ಮಂಜುನಾಥ ನಾಯ್ಕ (17) ಮೃತಪಟ್ಟ ವಿದ್ಯಾರ್ಥಿ. ಪಟ್ಟಣದ ರಾಯಲಕೇರಿ ನಿವಾಸಿಯಾಗಿದ್ದಾನೆ. ಈತನು ಪಟ್ಟಣದ ಸರ್ಕಾರಿ ಮೋಹನ ಕೆ. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಸೋಮವಾರ ಮಳೆಯ ಕಾರಣದಿಂದ ಕಾಲೇಜಿಗೆ ರಜೆ ಇರುವುದರಿಂದ ಈಜಲು ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಗೋಡೆ ಕುಸಿದು ಮಹಿಳೆ ಸಾವು

ಮಳೆಗೆ ಮನೆ ಗೋಡೆ ಕುಸಿದು ಮಹಿಳೆ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ್ ಬಿ ಗ್ರಾಮದಲ್ಲಿ ನಡೆದಿದೆ. ಬಸಮ್ಮ (40) ಮೃತ ಮಹಿಳೆ. ಮಳೆಯಿಂದ ಮನೆಯ ಮಣ್ಣಿನ ಗೋಡೆ ಕುಸಿದು ಬಿದ್ದಿದ್ದರಿಂದ ಮಹಿಳೆ ಕೊನೆಯುಸಿರೆಳೆದಿದ್ದಾರೆ.

ಜಲಪಾತ ನೋಡಲು ಹೋಗಿ ಕಾಲು ಜಾರಿ ಬಿದ್ದು ಸಾವು

ಉಡುಪಿ ಜಿಲ್ಲೆಯ ಅರಶಿನಗುಂಡಿ ಜಲಪಾತ (Arashinagundi falls) ವೀಕ್ಷಣೆಗೆ ತೆರಳಿದ್ದ ಯುವಕನೊಬ್ಬ ಇದ್ದಕ್ಕಿದ್ದಂತೆ ಕಾಲು ಜಾರಿ ಬಿದ್ದು ಉಕ್ಕಿ ಹರಿಯುತ್ತಿದ್ದ ಜಲಪಾತದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಯುವಕ ಜಲಪಾತದಲ್ಲಿ ಬೀಳುತ್ತಿರುವ ದೃಶ್ಯ ಮತ್ತೊಬ್ಬ ಯುವಕನ ಮೊಬೈಲ್‌ನಲ್ಲಿ (Tragedy video) ಸೆರೆಯಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ಈ ದುರ್ಘಟನೆ ನಡೆದಿದೆ.

ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ. ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆ ತೆರಳಿದ್ದ.

ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಎಲ್ಲ ಕಡೆ ಭಾರೀ ಮಳೆಯಾಗುತ್ತಿದೆ. ಹೀಗಾಗಿ ನದಿಗಳು ಹಾಗೂ ಜಲಪಾತಗಳು ತುಂಬಿ ಹರಿಯುತ್ತಿವೆ. ಜಲಪಾತಗಳ ಬಳಿಗೆ ತೆರಳಬೇಕಿದ್ದರೆ ಎಚ್ಚರಿಕೆಯಿಂದಿರಿ. ಸೆಲ್ಫಿ ತೆಗೆದುಕೊಳ್ಳುವುದು, ಜಲಪಾತದ ತೀರ ಸಮೀಪಕ್ಕೆ ಹೋಗುವುದು, ನೀರು ಬಿದ್ದು ಜಾರುತ್ತಿರುವ ಕಡೆಗಳಲ್ಲಿ ಕಾಲಿಡುವುದು ಮುಂತಾದ ಹುಚ್ಚಾಟಗಳು ಬೇಡ ಎಂದು ಪೊಲೀಸ್‌ ಇಲಾಖೆ ಹಾಗೂ ಅರಣ್ಯ ಇಲಾಖೆ ಎಚ್ಚರಿಸುತ್ತಿದೆ. ಆದರೂ ಮೈಮರೆವಿನಿಂದ ಇಂಥ ಅನಾಹುತಗಳು ಸಂಭವಿಸುತ್ತಿವೆ.

ಇದನ್ನೂ ಓದಿ: Viral Video: ಫೋನ್‌ನಲ್ಲೇ ಮುಳುಗಿರಬೇಡ ಎಂದು ಪೋಷಕರು ಬೈದಿದ್ದಕ್ಕೆ ಜಲಪಾತಕ್ಕೆ ಜಿಗಿದ ಯುವತಿ

ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತವಾಗಿ ಅಡ್ಡಲಾಗಿ ಬಿದ್ದ ಮರ

Rain Effect in mulki

ಕೊಡಗು ಜಿಲ್ಲೆಯಲ್ಲಿಯೂ ಮಳೆಯ ಅಡ್ಡಪರಿಣಾಮ ಬೀರಿದೆ. ಮರ ಬಿದ್ದ ಪರಿಣಾಮ ಮಡಿಕೇರಿ-ಮಂಗಳೂರು ರಾಷ್ಠ್ರೀಯ ಹೆದ್ದಾರಿ 275 ಸಂಚಾರ ಬಂದ್ ಆಗಿದೆ. ಮದೆನಾಡು ಸಮೀಪ ಕರ್ತೋಜೆಯಲ್ಲಿ ಭೂ ಕುಸಿತವಾಗಿ ಮರ ಬಿದ್ದಿದ್ದರಿಂದ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯಾಯಿತು. ಇದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಸ್ತೆಯ ಒಂದು ಬದಿ ಮಣ್ಣು ಕುಸಿದು ಮರ ಬಿದ್ದಿದ್ದರಿಂದ ತೆರವಿಗೆ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಹರಸಾಹಸ ಪಟ್ಟರು. ಭಾರಿ ಮಳೆಯ ನಡುವೆ ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಹಾಸನ ಜಿಲ್ಲೆಯ ಐದು ತಾಲೂಕುಗಳಲ್ಲಿ ರಜೆ

ಭಾರಿ ಮಳೆ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಹಾಗೂ ಹಾಸನ ತಾಲೂಕಿನಲ್ಲಿ ಜುಲೈ 25ರಂದು ಅಂಗನವಾಡಿ ಸೇರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆ‌ಯಿಂದ ಸೋಮವಾರವೂ ರಜೆ ನೀಡಲಾಗಿತ್ತು.

ಇದನ್ನೂ ಓದಿ | Rain News : ಮುಂಗಾರಿಗೆ ರಾಜ್ಯದಲ್ಲಿ 27 ಬಲಿ; ಹೈ ಅಲರ್ಟ್‌ ಇರಲು ಡಿಸಿಗಳಿಗೆ ಸೂಚಿಸಿದ ಕೃಷ್ಣ ಭೈರೇಗೌಡ

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 25 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡದಲ್ಲಿ ಎಲ್ಲ ಅಂಗನವಾಡಿ, ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಸೋಮವಾರದಿಂದ ಧಾರಾಕಾರ ಮಳೆಗೆ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ರಜೆ ಘೋಷಿಸಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿಯಿಂದ ಪದವಿ‌ ಕಾಲೇಜುಗಳವರೆಗೆ ರಜೆ ಘೋಷಿಸಿ ದ‌ಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ಕೂಡ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು ತತ್ತರ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಾಲಕರ ವಿದ್ಯಾರ್ಥಿ ನಿಲಯದ ಕಾಂಪೌಂಡ್ ದಿಢೀರ್ ಕುಸಿದಿದೆ. ಕೊಪ್ಪ ತಾಲೂಕಿನ ಬಸರಿಕಟ್ಟೆ ಗ್ರಾಮದಲ್ಲಿರುವ ಕಾಂಪೌಂಡ್ ಕುಸಿದಿದೆ. ಈ ದೃಶ್ಯವನ್ನು ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಹಾಸ್ಟೆಲ್‌ ಕಾಂಪೌಂಡ್‌ ಕುಸಿತ

ಇತ್ತ ಕೊಪ್ಪ ತಾಲೂಕಿನ ಕೊಳೂರು ಬಳಿ ಶೃಂಗೇರಿ ಜಯಪುರ ರಸ್ತೆ ಕುಸಿಯುವ ಹಂತ ತಲುಪಿದೆ. ಜಯಪುರ ಶೃಂಗೇರಿ ರಸ್ತೆಯ ಕಿರು ಸೇತುವೆಗೆ ಹಾನಿ ಆಗಿದೆ. ತೀವ್ರ ಮಳೆಯಿಂದಾಗಿ ಸೇತುವೆ ಕುಸಿಯುವ ಭೀತಿ ಇದ್ದು, ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕ್ಯಾಡ್ ಅಳವಡಿಸಿದ್ದಾರೆ.

ಗಾಳಿ-ಮಳೆಗೆ ಶಾರ್ಟ್‌ ಸರ್ಕ್ಯೂಟ್

ಕಾಫಿನಾಡು ಮಲೆನಾಡು ಭಾಗದಲ್ಲಿ ಗಾಳಿ-ಮಳೆ ಅಬ್ಬರ ಮುಂದುವರಿದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ತಂತಿ ಬೆಂಕಿ ಹೊತ್ತಿದೆ. ಬೆಂಕಿ ಹತ್ತಿ ಭದ್ರಾ ನದಿಗೆ ತುಂಡಾಗಿ ವಿದ್ಯುತ್ ತಂತಿ ಬಿದ್ದಿದೆ. ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಬಳಿ ಭದ್ರಾ ನದಿಗೆ ವಿದ್ಯುತ್ ತಂತಿ ಬಿದ್ದಿದೆ. ಇದರಿಂದಾಗಿ ಹೊರನಾಡು, ಬಲಿಗೆ ಸೇರಿದಂತೆ ಹತ್ತಾರು ಹಳ್ಳಿಗಳು ಕರೆಂಟ್‌ ಇಲ್ಲದಂತಾಗಿದೆ. ಭಾರೀ ಗಾಳಿ ಮಳೆ ಮಧ್ಯೆ ದುರಸ್ತಿ ಕೂಡ ಕಷ್ಟವಾಗಿದೆ.

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌

ಶಿವಮೊಗ್ಗದಲ್ಲಿ ಮದರಸದ ಗೋಡೆ ಕುಸಿತ

ಶಿವಮೊಗ್ಗದಲ್ಲೂ ಭಾರಿ ಮಳೆ-ಗಾಳಿಗೆ ಮದರಸದ ಗೋಡೆ ಮೇಲ್ಚಾವಣಿ ಕುಸಿದಿದೆ. ಚುಂಚನಾಲ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗಾಳಿಬೈಲು ಗ್ರಾಮದ ಐತಿಹಾಸಿಕ ಹಿನ್ನೆಲೆ ಇರುವ ಮದರಸದ ಶಾಲೆಯ ಮೇಲ್ಚಾವಣಿ ಕಳಚಿದೆ. ಭಾನುವಾರ ಸುರಿದ ಭಾರಿ ಮಳೆಗೆ ಈ ದುರ್ಘಟನೆ ನಡೆದಿದ್ದು, ಮಕ್ಕಳಿಗೆ ರಜೆ ಕಾರಣಕ್ಕೆ ಅಪಾಯ ತಪ್ಪಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ, ಸೊರಬ ಭದ್ರಾವತಿ ತಾಲೂಕಿನ ಗ್ರಾಮಗಳಲ್ಲಿ ಮನೆಗಳು ಕುಸಿದಿದೆ. ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯಲ್ಲಿ ಜಮೀನು ಜಲಾವೃತಗೊಂಡಿದೆ. ಬರೂರು ಗ್ರಾಮದಲ್ಲಿ ಕಾಲುವೆ ಒಡೆದು ನೀರೆಲ್ಲವೂ ಜಮೀನುಗಳಿಗೆ ನುಗ್ಗಿದೆ. ಕೃಷಿ ಮಾಡಲಾಗದೇ ರೈತರು ಹೈರಾಣಾಗಿದ್ದಾರೆ. ಜಮೀನುಗಳು ಕೆರೆಯಂತೆ ಮಾರ್ಪಾಟಾಗಿದೆ.

ಶಿವಮೊಗ್ಗದಲ್ಲಿ ತುಂಗಾ ಜಲಾಶಯದಿಂದ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಕೋರ್ಪಲಯ್ಯ ಛತ್ರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಶರಾವತಿ ಹಿನ್ನೀರಿನ ಕಣಿವೆ ಪ್ರದೇಶದಲ್ಲಿ ನಿರಂತರ ಮಳೆಗೆ ಹೊಲ-ಗದ್ದೆಗಳೆಲ್ಲ ಜಲಾವೃತಗೊಂಡಿದೆ. ಬಿತ್ತನೆ ಮಾಡಿದ ಸಸಿಯ ಮಡಿಗಳೆಲ್ಲ ನೀರು ಪಾಲಾಗಿದೆ. ಅಲ್ಲಲ್ಲಿ ಧರೆ ಕುಸಿತ, ವಿದ್ಯುತ್ ಕಂಬಗಳು ಉರುಳಿದೆ. ಇದರಿಂದಾಗಿ ಕರೂರು ಹೋಬಳಿಯ ಹಿನ್ನೀರು ಪ್ರದೇಶ ಕಗ್ಗತ್ತಲೆಯಲ್ಲಿದೆ.

ಚಿಕ್ಕೋಡಿಯ ಪಂಚಗಂಗಾ ನದಿಯ ರುದ್ರ ನರ್ತನ

ಅಪಾಯದ ಮಟ್ಟ ಮೀರಿ ಪಂಚಗಂಗಾ ನದಿ ಹರಿಯುತ್ತಿದೆ. ಪಂಚಗಂಗಾ ನದಿಯ ರುದ್ರ‌ನರ್ತನ ಡ್ರೋನ್ ಕಣ್ಣಲ್ಲಿ ಸೆರೆಯಾಗಿದೆ. ಕೃಷ್ಣಾ ನದಿಯ ಉಪನದಿಯಾಗಿರುವ ಪಂಚಗಂಗಾ ನದಿಯಲ್ಲಿ ನೀರು ಹೆಚ್ಚಳವಾಗುತ್ತಿರುವುದರಿಂದ ಕೊಲ್ಹಾಪುರದ 80ಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡಿವೆ. ಕೊಲ್ಹಾಪುರ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಬೆಳಗಾವಿ ಜಿಲ್ಲೆಯ ‌ಮೂಡಲಗಿ ತಾಲೂಕಿನ ಮತ್ತೆರಡು ಸೇತುವೆಗಳು ಮುಳುಗಡೆ ಆಗಿವೆ. ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅವರಾದಿ ನಂದಗಾಂವ್ ಹಾಗೂ ಸುಣಧೋಳಿ ಮೂಡಲಗಿ ಸೇತುವೆಗಳು ಮುಳುಗಡೆ ಆಗಿದೆ. ಸೇತುವೆ ಮುಳುಗಡೆಯಿಂದ ನಾಲ್ಕು ಹಳ್ಳಿಗಳ ಸಂಚಾರವು ಬಂದ್‌ ಆಗಿದೆ. ಅನ್ಯ ಮಾರ್ಗವನ್ನು ಬಳಸಿ ಸವಾರರು ಪ್ರಯಾಣಿಸುತ್ತಿದ್ದಾರೆ.

ದಾವಣಗೆರೆಯಲ್ಲಿ ಅಂಗಡಿಗಳು ಮುಳುಗಡೆ

ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ತುಂಗಾ ಭದ್ರಾ ನದಿ ತುಂಬಿ ಹರಿಯುತ್ತಿದೆ. ಇತ್ತ ದಾವಣಗೆರೆಯ ಉಕ್ಕಡಗಾತ್ರಿ ದೇವಸ್ಥಾನದ ಸಮೀಪ ಹೊಳೆ ನೀರು ಬಂದಿದೆ. ಇದರಿಂದಾಗಿ ದೇವಸ್ಥಾನದ ಆವರಣದಲ್ಲಿದ್ದ 20ಕ್ಕೂ ಹೆಚ್ಚು ಅಂಗಡಿಗಳು ಮುಳುಗಡೆಯಾಗಿದೆ. ನೀರಿನ ಪ್ರಮಾಣ ಇನ್ನು ಹೆಚ್ಚಾದರೆ ಉಕ್ಕಡಗಾತ್ರಿ ಸಂಪರ್ಕ ರಸ್ತೆ ಕೂಡ ಕಡಿತವಾಗುವ ಸಾಧ್ಯತೆ ಇದೆ. ಯಾರು ಕೂಡ ಸ್ನಾನಕ್ಕೆ ನದಿಯೊಳಗೆ ಇಳಿಯದಂತೆ ದೇವಸ್ಥಾನ ಅಡಳಿತ ಮಂಡಳಿ ಸೂಚ‌ನೆಯನ್ನು ನೀಡಿದೆ.

ಸೇತುವೆ ನೀರಿನಿಂದ ಜಲಾವೃತ

ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಹಿನ್ನೆಲೆಯಿಂದಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಜಲಾಶಯದಿಂದ ಅಂದಾಜು ಒಂದು ಲಕ್ಷ ಕ್ಯೂಸೆಕ್ಸ್ ನೀರಿನ ಒಳ ಹರಿವಿದ್ದರಿಂದ ಚಿಕ್ಕಪಡಸಲಗಿ ಸೇತುವೆ ಜಲಾವೃತಗೊಂಡಿದೆ. ನದಿ ಪಾತ್ರದ ಗ್ರಾಮಗಳಲ್ಲಿ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಬಾಗಲಕೋಟೆ ಜಿಲ್ಲಾಡಳಿತ ಡಂಗೂರ ಬಾರಿಸಿ ಸಂದೇಶ ಸಾರಿವೆ. ಬೆಳಗಾವಿಯ ವಡಗಾವಿಯ ರಾಘವೇಂದ್ರ ಕಾಲೋನಿಗೆ ಮಳೆ ನೀರು ನುಗ್ಗಿದೆ. ನೀರು ಹೊರಹಾಕಲು ಆಗದೆ 20ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಪರದಾಡಿದ್ದಾರೆ. ಮನೆಗೆ ನೀರು ನುಗ್ಗಿದ್ದರಿಂದ ವೃದ್ಧರು ಟೆರೆಸ್ ಮೇಲೆ ನಿಂತರೆ, ಮಕ್ಕಳನ್ನು ಕಂಕಳಲ್ಲಿ ಕಟ್ಟಿಕೊಂಡು ರಾತ್ರಿಯೆಲ್ಲ ಜಾಗರಣೆ ಮಾಡುವಂತಾಗಿದೆ.

ಧಾರವಾಡದಲ್ಲಿ ಮಳೆಗೆ 24 ಮನೆಗಳು ಕುಸಿತ

ಧಾರವಾಡದಲ್ಲಿ ನಿರಂತರ ಮಳೆಗೆ ಶಿಥಿಲಾವಸ್ಥೆಯಲ್ಲಿರುವ ಮನೆಗಳು ಕುಸಿಯುತ್ತಿವೆ. ಈವರೆಗೆ 24 ಮನೆಗಳು ಭಾಗಶಃ ಕುಸಿದು ಹೋಗಿದೆ. ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಮನೆ ಬಿದ್ದು ಜಾನುವಾರಗಳು ಪ್ರಾಣ ಬಿಟ್ಟಿವೆ. ಧಾರವಾಡ ಜಿಲ್ಲೆಯ ಹೊನ್ನಾಪುರ ಗ್ರಾಮದಲ್ಲಿ ದನದ ಕೊಟ್ಟಿಗೆ ಕುಸಿದು ಸಿದ್ದಪ್ಪ ಭೀಮಪ್ಪ ಎಂಬವರಿಗೆ ಸೇರಿದ ಎಮ್ಮೆ ಮೃತಪಟ್ಟಿದೆ. ನಿರಂತರ ಮಳೆಯಿಂದಾಗಿ ಮತ್ತಷ್ಟು ಮನೆಗಳು ಕುಸಿಯುವ ಹಂತದಲ್ಲಿದೆ.

ಕೊಪ್ಪಳದಲ್ಲಿ ಹೊಂಡವಾಯ್ತು ಅಂಡರ್‌ಪಾಸ್‌

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ಅಂಡರ್ ಪಾಸ್ ಮಳೆ ಬಂದರೆ ಹೊಂಡದಂತಾಗುತ್ತದೆ. ಹೆದ್ದಾರಿಯ ಬೃಹತ್ ಮೇಲ್ಸೆತುವೆಯ ಕೆಳಗೆ ಇರುವ ಅಂಡರ್ ಪಾಸ್ ಹನುಮಸಾಗರ- ಟೆಂಗುಟಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಲಘು ವಾಹನ ಓಡಾಟಕ್ಕಾಗಿ ಅಂಡರ್ ಪಾಸ್ ನಿರ್ಮಿಸಿದ್ದು, ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಜನರು ಕಿಡಿಕಾರಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಐಗೂರು ಹೊಳೆ ನೀರು ಸೇತುವೆ ಮೇಲೆ ಉಕ್ಕಿ ಹರಿಯುತ್ತಿದ್ದು, ಕುಂಭರಹಳ್ಳಿ- ಐಗೂರು-ಹೆತ್ತೂರು ರಸ್ತೆ ಸಂಪರ್ಕವು ಕಡಿತಗೊಂಡಿದೆ. ಸಕಲೇಶಪುರ, ಹೆತ್ತೂರು ಕಡೆ ಸಾಗಲು ಪರ್ಯಾಯ ಯಸಳೂರು, ಶುಕ್ರವಾರಸಂತೆ ಮಾರ್ಗದಲ್ಲಿ ಸವಾರರು ಪ್ರಯಾಣಿಸುತ್ತಿದ್ದಾರೆ.

ತ್ರಿವೇಣಿ ಸಂಗಮ ಮುಳುಗಡೆ

ಪಶ್ಚಿಮ‌ ಘಟ್ಟ ಪ್ರದೇಶದ ಬ್ರಹ್ಮಗಿರಿ ತಪ್ಪಲಿನಲ್ಲಿ ಭಾರೀ ಮಳೆ ಹಿನ್ನೆಲೆ ಕಾವೇರಿ, ಕನ್ನಿಕೆ, ಸುಜೋತಿ ನದಿಗಳು ಉಕ್ಕಿ ಹರಿಯುತ್ತಿದೆ. ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿದೆ. ಭಾಗಮಂಡಲದ ತಲಕಾವೇರಿ ನಾಪೋಕ್ಲು ರಸ್ತೆ ಸಂಚಾರ ಬಂದ್ ಆಗಿದೆ. ಭಗಂಡೇಶ್ವರ ದೇವಾಲಯದ ಮೆಟ್ಟಿಲವರೆಗೆ ನೀರು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ಸಿಬ್ಬಂದಿ, ಬೋಟ್ ಸನ್ನದ್ಧವಾಗಿದೆ.

ಅತಿಯಾದ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿಳಗಿ ಬಳಿ ಗುಡ್ಡ ಕುಸಿದಿದೆ. ಕುಮಟಾ-ಕೊಡಮಡಗಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಕಳೆದ ಎರಡು ವಾರಗಳಿಂದ ಸಿದ್ದಾಪುರ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿ ಸಂಪೂರ್ಣ ತೇವಗೊಂಡಿದೆ. ಪರಿಣಾಮ ಧರೆ ಕುಸಿದು ರಸ್ತೆಗೆ ಮಗುಚಿದ ಪರಿಣಾಮ ಸುಮಾರು ಐದು ಗಂಟೆಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿದ್ದಾರೆ.

ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ

ನದಿ ತೀರಕ್ಕೆ ತೆರಳದಂತೆ ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಎಚ್ಚರಿಕೆ ನೀಡಿದ್ದಾರೆ. ಯಾದಗಿರಿಯಲ್ಲಿ ಮಳೆಯೊಂದಿಗೆ ಕೃಷ್ಣಾ ಹಾಗೂ ಭೀಮಾನದಿಗೆ ಹೆಚ್ಚಿನ ಪ್ರಮಾಣದ ನೀರು ಬರುತ್ತಿದೆ. ಭೀಮಾನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರು ಯಾರು ನದಿ ತೀರಕ್ಕೆ ತೆರಳಬಾರದು. ರೈತರು ನದಿ ತೀರದಲ್ಲಿರುವ ಪಂಪ್ ಸೆಟ್ ತೆಗೆದು ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಯಾರು ಜಮೀನು ಕೆಲಸಕ್ಕೆಂದು ನದಿ ದಾಟುವ ಕೆಲಸ ಮಾಡಬಾರದು. ಒಂದು ವೇಳೆ ಹೆಚ್ಚು ನೀರು ಬಂದರೆ ಪ್ರವಾಹ ಪರಿಸ್ಥಿತಿ ಎದುರಾದರೆ ಅಗತ್ಯ ಮುಂಜಾಗ್ರತೆ ವಹಿಸಲಾಗುತ್ತದೆ. ಜನರು ನದಿಯಿಂದ ದೂರವಿದ್ದು ಸುರಕ್ಷಿತವಾಗಿ ಇರಲು ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಸೂಚನೆ ನೀಡಿದ್ದಾರೆ.

ಮನೆಗಳಿಗೆ ನುಗ್ಗಿದ ನೀರು

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮಸ್ಥರು ನಲುಗಿ ಹೋಗಿದ್ದಾರೆ. ಮನೆಗಳಿಗೆ ನೀರು ನುಗ್ಗಿದ್ದು, ರಾತ್ರಿ ಇಡೀ ನಿದ್ದೆ ಇಲ್ಲದೆ ಪರದಾಡಿದ್ದಾರೆ. ಮಳೆ ನೀರು ಹೊರಹಾಕಲು ಜನರು ಹರಸಾಹಸಪಟ್ಟಿದ್ದಾರೆ.

ಇತ್ತ ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ನೂರಾರು ಎಕರೆ ಭತ್ತದ ಗದ್ದೆಗಳು ನೀರು ಪಾಲಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಐಗೂರು ಸಮೀಪದಲ್ಲಿ ಬಿತ್ತನೆಗೆ ಸಿದ್ದವಿದ್ದ ಭತ್ತದ ಗದ್ದೆಗಳು ಮುಳುಗಡೆಯಾಗಿದೆ. ಮಳೆ ಮತ್ತಷ್ಟು ಹೆಚ್ಚಾದರೆ ಸಕಲೇಶಪುರ ತಾಲೂಕಿನ ಹೆತ್ತೂರು ಹಾಗು ಕೊಡ್ಲಿಪೇಟೆ ನಡುವಿನ ರಸ್ತೆ ನೀರು ಹರಿಯುವ ಆತಂಕ ಇದೆ.

ಮೈದುಂಬಿದ ಗಂಗಾವಳಿ ನದಿ

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಧಾರಾಕಾರ ಮಳೆಯಿಂದ ಗಂಗಾವಳಿ ನದಿ ಮೈದುಂಬಿ ಹರಿಯುತ್ತಿದೆ. ಪರಿಣಾಮ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಬಿಳಿಹೊಂಯ್ಗಿ ಗ್ರಾಮದ 30ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ. ರಸ್ತೆಯ ಮೇಲೂ ನೀರು ನಿಂತು ಓಡಾಟಕ್ಕೂ ಅವ್ಯವಸ್ಥೆ ಆಗಿದೆ. ಸೊಂಟದವರೆಗೂ ನೀರು ನಿಂತಿದ್ದು, ಜನರಲ್ಲೂ ಆ ನೆರೆಯಲ್ಲೇ ನಡೆದಾಡುತ್ತಿದ್ದಾರೆ. ಮತ್ತೆ ಮಳೆ ಹೆಚ್ಚಾದಲ್ಲಿ ಮನೆಯೊಳಗೆ ನೀರು ನುಗ್ಗುವ ಆತಂಕ ಇದೆ.

ಉರುಳಿ ಬಿದ್ದ ತೆಂಗಿನ ಮರ
ತೆಂಗಿನ ಮರ ಬಿದ್ದು ಕಾರು ಡ್ಯಾಮೇಜ್‌

ವಿಶ್ವನಾಥ ಎಂಬುವವರ ವಾಸದ ಮನೆ ಹಿಂಭಾಗದ ಕಾರು ಶೆಡ್ ಹಾಳಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ. ವಿದ್ಯುತ್ ತಂತಿಯ ಮೇಲೂ ಮರ ಬಿದ್ದಿದ್ದು, ಆನೆ‌ಮುಡಿಕೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ‌ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಸೇತುವೆ ಮೇಲೆ ಕೆಟ್ಟು ನಿಂತ ಬೈಕ್‌

ಹಾಸನದಲ್ಲಿ ಕುಸಿದು ಬಿದ್ದ ಮನೆ

ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಮನೆಯೊಂದು ಕುಸಿದು ಬಿದ್ದಿದೆ. ಬೇಲೂರು ತಾಲೂಕಿನ ಪಡುವಳಲು ಗ್ರಾಮದಲ್ಲಿ ಮಹೇಶ್ ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ಕಳೆದ ಎರಡು ದಿನಗಳಿಂದ ಭಾರೀ ಗಾಳಿ ಮಳೆಯಿಂದ ಇಂದು (ಜು.24) ಬೆಳಗ್ಗೆ 4 ಗಂಟೆಗೆ ಕುಸಿದಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಹಾನಿಯಾಗಿದೆ. ಮನೆ ಬೀಳುವ ಭೀತಿಯಿಂದ ಕುಟುಂಬದ ಸದಸ್ಯರು ನಿನ್ನೆ ಭಾನುವಾರವೇ ಕೊಟ್ಟಿಗೆಗೆ ಶಿಫ್ಟ್ ಆಗಿದ್ದರು.ಹೀಗಾಗಿ ಸಂಭವಿಸದಬಹುದಾದ ಅನಾಹುತ ತಪ್ಪಿದೆ.

ಮಳೆಗೆ ಕುಸಿದು ಬಿದ್ದ ಮನೆ

ಇದನ್ನೂ ಓದಿ: Rain News : ಮಳೆಗೆ ಮುಳುಗಿದ ಕಡಬ; ಒದ್ದೆ ಮೈಯಲ್ಲಿ ನಡುಗುತ್ತಲೇ ಪರೀಕ್ಷೆ ಬರೆದರು!

ವರದಾ ನದಿ ಅಬ್ಬರಕ್ಕೆ ನಲುಗಿದ ಹಾವೇರಿ

ಹಾವೇರಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದರೆ ಮತ್ತೊಂದು ಕಡೆ ವರದಾ ನದಿ ಉಕ್ಕಿ ಹರಿಯುತ್ತಿದೆ. ವರದಾ ನದಿ ಅಬ್ಬರಕ್ಕೆ ನೂರಾರು ಎಕರೆ ಬೆಳೆ ನಾಶವಾಗಿದೆ. ರೈತರು ಬೆಳೆದಿದ್ದ, ಗೋಬಿನಜೋಳ, ಹತ್ತಿ, ಶೇಂಗಾ ಬೆಳೆಯು ನೀರಿನಲ್ಲಿ ಮುಳುಗಡೆಯಾಗಿದೆ. ಮಳೆಯಿಂದ ಬೆಳೆ ಹಾನಿಯಾದರೂ ಅಧಿಕಾರಿಗಳು ಪರಿಶೀಲನೆಗೆ ಬಾರದ್ದಕ್ಕೆ ರೈತರು ಆಕ್ರೋಶ ಹೊರಹಾಕಿದ್ದಾರೆ.

ಜಮೀನಿಗೆ ನುಗ್ಗಿದ ನೀರು

ಇತ್ತ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಬೆಡ್ತಿಹಳ್ಳ ಉಕ್ಕಿ ಹರಿಯುತ್ತಿದ್ದು, ಹೊಲಗಳಿಗೆ ನೀರು ನುಗ್ಗಿ ಬೆಳೆಗಳು ಜಲಾವೃತಗೊಂಡಿದೆ. ಮಳೆಯ ಹೊಡೆತಕ್ಕೆ ನೀರಲ್ಲಿ ಕಬ್ಬು, ಮೆಕ್ಕೆಜೋಳ ಬೆಳೆಗಳಿಗೆ ಹಾನಿಯಾಗಿದೆ.

ಹಾಸನದಲ್ಲಿ ಭೂ ಕುಸಿತ

ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿಯುವ ಆತಂಕ ಇದೆ. ಸಕಲೇಶಪುರ ಪಟ್ಟಣದ ಸಮೀಪದ ಗುಡ್ಡ ಕುಸಿಯುತ್ತಿದೆ. ಒಂದೊಂದಾಗೇ ಮರಗಳು ಉರುಳುತ್ತಿದೆ. ಮೇಲ್ಬಾಗದಲ್ಲಿರುವ ಮನೆಗಳೂ ಕೂಡಾ ಬೀಳುವ ಆತಂಕದಲ್ಲಿದ್ದು, ಹತ್ತಾರು ಕುಟುಂಬಗಳು ಭಯದಲ್ಲೇ ದಿನದೂಡುವಂತಾಗಿದೆ. ಮಂಗಳೂರು – ಬೆಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡ ಕುಸಿಯುತ್ತಿದೆ ಎಂದು ಆರೋಪಿಸಲಾಗಿದೆ.

ಮಳೆ ಹೊಡೆತಕ್ಕೆ ಗುಡ್ಡಕುಸಿತ; ಸಕಲೇಶಪುರ, ಬಿಸಿಲೆ- ಸುಬ್ರಹ್ಮಣ್ಯ ರೋಡ್‌ ಬ್ಲಾಕ್‌

ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆ ಅಪಾಯದಲ್ಲಿದೆ

ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಆತಂಕ ಎದುರಾಗಿದೆ. ಸಕಲೇಶಪುರ ಪಟ್ಟಣದ ಸಮೀಪದಲ್ಲಿ ಗುಡ್ಡದಲ್ಲಿ ಒಂದೊಂದೇ ಮರಗಳು ರಸ್ತೆಗೆ ಬೀಳುತ್ತಿದೆ. ಎತ್ತರ ಪ್ರದೇಶದಲ್ಲಿರುವ ತೆಂಗಿನಮರ, ಸಿಲ್ವರ್ ಸೇರಿ ಅನೇಕ ಮರಗಳು ರಸ್ತೆಗೆ ಉರುಳಿಬಿದ್ದಿವೆ.

ಗುಡ್ಡ ಕುಸಿತದಿಂದ ಸಕಲೇಪುರ ಬಳಿ ರಸ್ತೆ ಸಂಚಾರಕ್ಕೆ ಅಡಚಣೆ

ಮಂಗಳೂರು – ಬೆಂಗಳೂರು ಸಂಪರ್ಕ ಕಲ್ಪಿಸೋ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡ ಕುಸಿಯುತ್ತಿದೆ ಎಂಬ ಆರೋಪವಿದೆ. ಸಕಲೇಶಪುರ ಪಟ್ಟಣದಲ್ಲಿ ಬೈಪಾಸ್ ರಸ್ತೆ‌ಗಾಗಿ ಈ ಕಾಮಗಾರಿ ನಡೆಯುತ್ತಿದೆ. ಗುಡ್ಡದ ಮೇಲ್ಬಾಗದಲ್ಲಿ ವಾಸವಾಗಿರುವ ಹತ್ತಾರು ಕೂಲಿ ಕಾರ್ಮಿಕರು ಇದರಿಂದ ಆತಂಕಿತರಾಗಿದ್ದು ಯಾವಾಗ ತಮ್ಮ ಮನೆ ಬೀಳುತ್ತದೋ ಎಂಬ ಭಯದಲ್ಲಿದ್ದಾರೆ.

ಬಿಸಿಲೆ-ಸುಬ್ರಹ್ಮಣ್ಯ ರಸ್ತೆ ಸಂಪೂರ್ಣ ಬಂದ್‌

ಬಿಸಿಲೆ ಘಾಟಿ ರಸ್ತೆಯಲ್ಲಿ ಅಯೋಮಯ ಪರಿಸ್ಥಿತಿ

ಸಕಲೇಶಪುರ ತಾಲೂಕಿನ ಬಿಸಿಲೆ ಮಾರ್ಗದ ಮೂಲಕ ತೆರಳುವ ಸುಬ್ರಹ್ಮಣ್ಯ ರಸ್ತೆ ಸಂಪೂರ್ಣ ಬಂದ್ ಆಗಿದೆ. ಬಿಸಿಲೆ‌ ಸಮೀಪದಲ್ಲಿ ರಸ್ತೆಗೆ ಭಾರಿ ಪ್ರಮಾಣದ ಮಣ್ಣು ಕುಸಿದು ಬಿದ್ದಿದೆ. ಈ ಭಾಗದಲ್ಲಿ ಬೆಳಗ್ಗೆ ಮರ ಬಿದ್ದು ಕೆಲ ಗಂಟೆ ಸ್ಥಗಿತವಾಗಿತ್ತು. ನಂತರ ಗುಡ್ಡ ಕುಸಿದು ಮತ್ತೆ ಸಂಪರ್ಕ ಸಂಪೂರ್ಣ ಸ್ಥಗಿತವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ

Rain Effect in mulki

ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿ ಬೇಡ್ತಿ ಹಳ್ಳ ತುಂಬಿ ಹರಿಯುತ್ತಿದ್ದು, ಹಿರೇಹೊನ್ನಳ್ಳಿ ಮತ್ತು ಬೇಗೂರು ಮಧ್ಯದ ಸೇತುವೆ ಮುಳುಗಡೆಯಾಗಿದೆ. ರಸ್ತೆ ಸೇತುವೆ ಮೇಲೆ ಉಕ್ಕಿ ಹರಿಯುತ್ತಿರುವುದರಿಂದ ಹಿರೇಹೊನ್ನಳ್ಳಿ – ಬೇಗೂರು ಮಧ್ಯದ ಬಸ್, ವಾಹನ ಸಂಚಾರ ಸ್ಥಗಿತವಾಗಿದೆ.

ಸಿದ್ದಾಪುರ ತಾಲೂಕಿನ ಬಿಳಗಿ ಬಳಿ ಗುಡ್ಡ ಕುಸಿತ

Rain Effect in mulki

ಉ.ಕ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಸಿದ್ದಾಪುರ ತಾಲೂಕಿನ ಬಿಳಗಿ ಬಳಿ ಗುಡ್ಡ ಕುಸಿತವಾಗಿದೆ. ಇದರಿಂದ ಕುಮಟಾ-ಕೊಡಮಡಗಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ.

ತಾಲೂಕಿನಲ್ಲಿ ಕಳೆದ ಎರಡು ವಾರಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿ ಸಂಪೂರ್ಣ ತೇವಗೊಂಡ ಪರಿಣಾಮ ಧರೆ ಕುಸಿತವಾಗಿದೆ. ಸುಮಾರು ಐದು ಗಂಟೆಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡಲಾಗಿದೆ.

ಬೆಳಗಾವಿಯಲ್ಲಿ ಎರಡು ಸೇತುವೆ ಮುಳುಗಡೆ

Rain Effect in mulki

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸೇತುವೆಗಳು ಘಟಪ್ರಭಾ ನದಿಯ ಅಬ್ಬರಕ್ಕೆ ಮುಳುಗಿವೆ. ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅವರಾದಿ ನಂದಗಾಂವ್ ಮತ್ತು ಸುಣಧೋಳಿ ಮೂಡಲಗಿ ಸೇತುವೆಗಳು ಮುಳುಗಿವೆ. ಸೇತುವೆ ಮುಳುಗಡೆಯಾಗಿದ್ದರಿಂದ ನಾಲ್ಕು ಹಳ್ಳಿಗಳ ಸಂಚಾರ ಸ್ಥಗಿತವಾಗಿದೆ. ಹೀಗಾಗಿ ಜನರು ಅನ್ಯ ಮಾರ್ಗವನ್ನು ಬಳಸಿ ಸುತ್ತುವರೆದು ಸಾಗುತ್ತಿದ್ದಾರೆ.

ಬೈಂದೂರಿನಲ್ಲಿ ಸಂಪರ್ಕ ರಸ್ತೆ ನೀರುಪಾಲು

ಸಂಪೂರ್ಣ ಕೊಚ್ಚಿ ಹೋದ ಸಂಪರ್ಕ ರಸ್ತೆ

ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಗ್ಗರ್ಸೆ ನಿರೋಡಿಯಲ್ಲಿ ಮಳೆಯ ಆರ್ಭಟಕ್ಕೆ ಭಾನುವಾರ ಅಪಾಯದ ಸ್ಥಿತಿಯಲ್ಲಿದ್ದ ರಸ್ತೆ ಸೋಮವಾರದ ಹೊತ್ತಿಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. 3 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿದ್ದ ಕಿರು ಸೇತುವೆ ಇದಾಗಿದ್ದು ಪೂರ್ತಿ ನಾಶವಾಗಿದೆ. ಸಂಪರ್ಕ ರಸ್ತೆಯಲ್ಲಿ ಹರಿಯುತ್ತಿದ್ದ ಕಿರು ಹೊಳೆಗೆ ಅಡ್ಡಲಾಗಿ ಮಾಡಲಾಗಿದ್ದ ಕಾಮಗಾರಿ ಇದು.

ಕೊಡಗು ಜಿಲ್ಲೆ ಭಾಗಮಂಡಲ ಸಂಪೂರ್ಣ ಜಲಾವೃತ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ (kukke subramanya) ಮೊಣಕಾಲು ಮಟ್ಟಕ್ಕೆ ನೀರು ಬಂದು ಮೈಪೂರಾ ಒದ್ದೆಯಾದರೂ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಸತತ ಒಂದು ವಾರದಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ರಸ್ತೆಗಳೆಲ್ಲವೂ ಜಲಾವೃತಗೊಂಡಿದೆ.

ನೆರೆ ನೀರಿನಲ್ಲೇ ನಡೆದುಹೋದ ವಿದ್ಯಾರ್ಥಿಗಳು

ಈ ನೆರೆ ನೀರಿನಲ್ಲೇ ವಿದ್ಯಾರ್ಥಿಗಳು ನಡೆದುಕೊಂಡು ಹೋಗಿದ್ದಾರೆ. ಅಪಾಯವನ್ನು ಲೆಕ್ಕಿಸದೇ ವಿದ್ಯಾರ್ಥಿಗಳು ಈ ರೀತಿ ಹೋಗುತ್ತಿರುವುದಕ್ಕೆ ಪೋಷಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಆತಂಕದಲ್ಲೇ ದಿನದೂಡುವಂತಾಗಿದೆ.

ಮೊಣಕಾಲಷ್ಟು ನೀರಲ್ಲೇ ವಿದ್ಯಾರ್ಥಿಗಳ ನಡಿಗೆ

ಭಾರಿ ಮಳೆಗೆ ಕುಸಿದ ಮನೆ, ಆರು ಮಂದಿ ಪವಾಡ ಸದೃಶ ಪಾರು

ಮುಲ್ಕಿಯಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆಯೊಂದು ಕುಸಿದಿದೆ. ಕೆಎಸ್‌ರಾವ್ ನಗರದ ಲಿಂಗಪ್ಪಯ್ಯ ಕಾಡು ವಿಜಯಪುರ ಕಾಲೋನಿಯ ಮಲ್ಲಿಕಾರ್ಜುನ ಮಠದ ಬಳಿಯ ನಿವಾಸಿ ಲಕ್ಷ್ಮಿ ಪಕೀರಪ್ಪ ಎಂಬುವರ ಮನೆ ಸಂಪೂರ್ಣ ಕುಸಿದು ಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ರಾತ್ರಿ ಹೊತ್ತು ಮಳೆ ಸುರಿದಿದ್ದು, ಮನೆಯ ಮೇಲ್ಭಾಗದಲ್ಲಿ ಭಾರಿ ಶಬ್ಧ ಉಂಟಾಗಿದೆ. ಈ ವೇಳೆ ಮನೆಯೊಳಗಿದ್ದ ಲಕ್ಷ್ಮಿ ಪಕೀರಪ್ಪ ಸಹಿತ ಆರು ಮಂದಿ ಹೊರಗೆ ಓಡಿ ಬಂದಿದ್ದಾರೆ. ಕ್ಷಣಾರ್ಧದಲ್ಲಿ ಮನೆ ಪೂರಾ ಕುಸಿದು ಬಿದ್ದಿದ್ದು, ಮನೆಮಂದಿ ಪವಾಡ ಸದೃಶ ಪಾರಾಗಿದ್ದಾರೆ. ಘಟನೆಯಿಂದ ಮನೆಯೊಳಗಿನ ವಸ್ತುಗಳು ನಾಶವಾಗಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಲಕ್ಷ್ಮಿ ಪಕೀರಪ್ಪ ತಿಳಿಸಿದ್ದಾರೆ.

ಮಳೆಗೆ ಧರೆಗುರುಳಿದ ಮನೆಗಳು

ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ಪಕ್ಷಿಕೆರೆ, ಹಳೆಯಂಗಡಿ, ಅತಿಕಾರಿ ಬೆಟ್ಟು, ಕೊಳಚಿ ಕಂಬಳ ಪರಿಸರದಲ್ಲಿ ಮಳೆಗೆ ಭಾರೀ ಹಾನಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಗೆ ಹೊಳೆಗಳು ತುಂಬಿ ಹರಿಯುತ್ತಿದೆ. ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿ ಹೊಳೆಗಳ ಹರಿವು ಹೆಚ್ಚಳವಾಗಿದೆ. ಇದರಿಂದಾಗಿ ಸುಬ್ರಹ್ಮಣ್ಯ ರಸ್ತೆಯ ಬೊಳ್ಮಲೆ, ಬಸ್ತಿಕಾಡು ಭಾಗದಲ್ಲಿ ಜನರಿಗೆ ಸಂಕಷ್ಟ ಎದುರಾಗಿದೆ. ಭಾರೀ ಮಳೆಗೆ ಬಸ್ತಿಕಾಡುವಿನ ಕಿಂಡಿ ಅಣೆಕಟ್ಟು, ಸೇತುವೆ ಮುಳುಗಡೆ ಆಗಿದೆ. ಅಣೆಕಟ್ಟು ಸೇತುವೆ ಮುಳುಗಡೆಯಿಂದ 15ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತವಾಗಿದೆ. ವಾಹನ ಸಂಚಾರ, ಕಾಲುದಾರಿಯೂ ಮುಳುಗಡೆಯಾಗಿ ಗ್ರಾಮಸ್ಥರು ಅತಂತ್ರರಾಗಿದ್ದಾರೆ.

ಹೊಳೆಯಲ್ಲಿ ಮರದ ದಿಮ್ಮಿಗಳು ಉರುಳಿ ಬಂದು ಕಿಂಡಿ ಅಣೆಕಟ್ಟಿಗೆ ಡ್ಯಾಮೇಜ್ ಮಾಡುತ್ತಿದೆ. ಅಣೆಕಟ್ಟಿನ ಪಕ್ಕದ ತೋಟ, ಕೃಷಿ ಭೂಮಿಗೆ ನೀರು‌ ನುಗ್ಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರಾಕಾರ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು, ಅಂಕೋಲಾದ ಬಿಳಿಹೊಂಯ್ಗಿಯಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version