Site icon Vistara News

Flower politics : ಬೀದಿಗೂ ಬಂತು ಕಿವಿ ಮೇಲೆ ಹೂವು ಅಭಿಯಾನ; ಬಿಜೆಪಿ ಪೋಸ್ಟರ್‌ಗಳ ಮೇಲೆ ಕಾಂಗ್ರೆಸ್‌ ವ್ಯಂಗ್ಯದ ಚಿತ್ರ

BJP poster

#image_title

ಬೆಂಗಳೂರು: ಶುಕ್ರವಾರ (ಫೆ. ೧೭) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ ಮಂಡನೆ ಮಾಡುವಾಗ ಶಾಸಕರು ಕಿವಿ ಮೇಲೆ ಹೂವಿಟ್ಟುಕೊಂಡು ನಡೆಸಿದ ವಿಡಂಬನಾತ್ಮಕ ಪ್ರತಿಭಟನೆಯಿಂದ (Flower politics) ಉತ್ತೇಜಿತವಾಗಿರುವ ಕಾಂಗ್ರೆಸ್‌ ಈಗ ಇದನ್ನು ಬೀದಿ ಅಭಿಯಾನವಾಗಿ ಪರಿವರ್ತಿಸಿದೆ.

ಶನಿವಾರ ಬೆಳಗ್ಗೆ ರಸ್ತೆಗಳಲ್ಲಿ ಕಿವಿ ಮೇಲೆ ಹೂವು ಅಭಿಯಾನ ಮುಂದುವರಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ಬಿಜೆಪಿಯ ಪೋಸ್ಟರ್‌ಗಳ ಮೇಲೆ ತಮ್ಮ ಪೋಸ್ಟರ್‌ ಹಾಕುತ್ತಿದ್ದಾರೆ. ಇದು ಎರಡು ಪಕ್ಷಗಳ ನಡುವೆ ಸ್ವಲ್ಪ ಮಟ್ಟಿನ ಘರ್ಷಣೆಗೂ ಕಾರಣವಾಗುವ ಸಾಧ್ಯತೆ ಕಂಡುಬಂದಿದೆ.

ಬಿಜೆಪಿ ಪಕ್ಷದ ವತಿಯಿಂದ ನಗರದ ಹಲವು ಕಡೆಗಳಲ್ಲಿ ʻಬಿಜೆಪಿಯೇ ಭರವಸೆʼ ಎಂಬ ಪೋಸ್ಟರ್‌ಗಳನ್ನು ಹಾಕಿದೆ. ಅವುಗಳ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ʻಸಾಕಪ್ಪಾ ಸಾಕುʼ ಎಂದು ಬರೆದಿರುವ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದಾರೆ. ಇದರಲ್ಲಿ ಕಿವಿಯಲ್ಲಿ ಹೂವು ಇಟ್ಟುಕೊಂಡಿರುವ ಚಿತ್ರಗಳಿವೆ.

ಭರವಸೆ, ಭರವಸೆ ಬುರುಡೆ ಭರವಸೆ ಎಂದು ವ್ಯಂಗ್ಯ ಮಾಡಿರುವ ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ʻಸಾಕಪ್ಪ ಸಾಕು.. ಕಿವಿ ಮೇಲೆ ಹೂವʼʼ ಎಂದು ಬರೆಯಲಾಗಿದೆ. ಪೇ ಸಿಎಂ ಅಭಿಯಾನದ ಬಳಿಕ ಈಗ ಕಿವಿ ಮೇಲೆ ಹೂವ ಅಭಿಯಾನ ಜನಪ್ರಿಯತೆ ಪಡೆದಿದೆಯಾದರೂ ಬಿಜೆಪಿಯ ಪೋಸ್ಟರ್‌ಗಳ ಮೇಲೆಯೇ ಅಂಟಿಸಿರುವುದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗೆ ಕಾರಣವಾಗುವ ಸಾಧ್ಯತೆಯೂ ಕಂಡುಬಂದಿದೆ.

ಬಿಜೆಪಿ ತನ್ನ ಸಾಧನೆಗಳನ್ನು ಹೇಳಿಕೊಂಡ ಪೋಸ್ಟರ್‌ಗಳ ಮೇಲೆ ಈ ರೀತಿ ಮಸಿ ಬಳಿಯುವ ರೀತಿಯಲ್ಲಿ ಪೋಸ್ಟರ್‌ಗಳನ್ನು ಅಂಟಿಸಿರುವುದು ಬಿಜೆಪಿ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಜೆ.ಪಿ. ನಡ್ಡಾ ಮೊದಲಾದ ರಾಷ್ಟ್ರೀಯ ನಾಯಕರ ಮುಖದ ಮೇಲೆ ಪೋಸ್ಟರ್‌ ಅಂಟಿಸಿ ಲೇವಡಿ ಮಾಡಿರುವುದು ಕಿರಿಕಿರಿ ಉಂಟು ಮಾಡಿದೆ. ಇದರ ವಿರುದ್ಧ ದೂರು ನೀಡಲು ಬಿಜೆಪಿ ಚಿಂತನೆ ನಡೆಸಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದೇನು?

ಕಾಂಗ್ರೆಸ್‌ನ ಕಿವಿಗೆ ಹೂವು ಅಭಿಯಾನದ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಬಜೆಟ್‌ ಮಂಡನೆಯ ವೇಳೆಯೇ ಕಿಡಿ ಕಾರಿದ್ದರು. ಬಳಿಕ ಮಾತನಾಡಿದಾಗಲೂ ಇದೊಂದು ಕೀಳು ಅಭಿರುಚಿ ಎಂದರು.

ʻʻನಾನು ಬಜೆಟ್ ಮಂಡನೆ ಮಾಡುವಾಗ ಕಾಂಗ್ರೆಸ್ ಶಾಸಕರು ಕಿವಿಯಲ್ಲಿ ಹೂ ಇಟ್ಟುಕೊಂಡಿದ್ದು ನೋಡಿ ಅವರ ಬಗ್ಗೆ ಕನಿಕರ ಜತೆಗೆ ನಗು ಬಂತು. ವಿರೋಧ ಪಕ್ಷವಾಗಿ ಇಷ್ಟು ಕೀಳು ಮಟ್ಟದ ರಾಜಕಾರಣ ಮಾಡಬಾರದು. ಬಜೆಟ್ ಮೇಲೆ ಚರ್ಚೆಯಲ್ಲಿ ಭಾಗವಹಿಸಬಹುದಿತ್ತು.. ಅದರಲ್ಲಿ ತಪ್ಪು ಇದ್ರೆ ಹೇಳಬಹುದಿತ್ತು. ಆದರೆ ಪ್ರಚಾರಕ್ಕೆ ಈ ರೀತಿ ಮಾಡಿದ್ದಾರೆʼʼ ಎಂದು ಹೇಳಿದರು ಬೊಮ್ಮಾಯಿ.

ʻʻಸಿದ್ದರಾಮಯ್ಯ ಅಂಥ ರಾಜಕಾರಣಿ ಆ ರೀತಿ ನಡೆದುಕೊಳ್ಳಬಾರದಿತ್ತು. ಸಿದ್ದರಾಮಯ್ಯ ಅವರು ಬೇರೆ ಪಕ್ಷದಲ್ಲಿ ಇದ್ದರೂ ನನಗೆ ಅಭಿಮಾನ ಗೌರವವಿದೆ, ಆದ್ರೆ ಸಿದ್ದರಾಮಯ್ಯ ಅವರನ್ನು ಈ ಮಟ್ಟಕ್ಕೆ ಅವರ ನಾಯಕರು ಇಳಿಸಿದ್ದಾರೆ. ಸಿದ್ದರಾಮಯ್ಯ ಅಂತ ನಾಯಕ ಆ ರೀತಿ ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿದ್ದು ನಗು ಜತೆಗೆ ಅವರ ಮೇಲೆ ಕನಿಕರ ಬಂತು. ಅದಕ್ಕೆ ನಾನು ಹೇಳಿದೆ ನಿಮ್ಮ ಮಾತು ಕೇಳಿ ಜನ ನಿಮಗೆ ಹೂವು ಕೊಟ್ಟು ಕಳಿಸಿದ್ದಾರೆಂದು ಹೇಳಿದೆʼʼ ಎಂದು ಬೆಳಗ್ಗಿನ ಮಾತಿಗೆ ಸಮರ್ಥನೆ ನೀಡಿದರು.

ಇದನ್ನೂ ಓದಿ : Karnataka Budget 2023 : ಕಿವಿಗೆ ಹೂವಿಟ್ಟುಕೊಂಡು ಸದನಕ್ಕೆ ಬಂದ ಸಿದ್ದರಾಮಯ್ಯ, ಬಜೆಟ್‌ ಮಂಡನೆಗೆ ಅಡ್ಡಿ

Exit mobile version