ಪಿಂಕ್ ಸಿಟಿ ಅಂದ ಕೂಡಲೇ ನೆನಪಾಗುವುದು ರಾಜಸ್ಥಾನದ ಜೈಪುರ. ಆದರೆ, ನಮ್ಮ ಬೆಂಗಳೂರೆಂಬ ಉದ್ಯಾನ ನಗರಿಯೂ ಚಳಿಗಾಲದ ಕೊನೆಯಲ್ಲಿ ಒಮ್ಮಿಂದೊಮ್ಮೆಗೇ ಪಿಂಕ್ ಸಿಟಿಯಾಗಿ ಬದಲಾಗುತ್ತದೆ. ನಗರದ ಮರಗಳೆಲ್ಲ ಎಲೆಯುದುರಿ ಬೆತ್ತಲಾಗಿ ಚಿಗುರಿ ಮೊಗ್ಗರಳಿ ಹೂವಾಗಿ ನಗರಕ್ಕೆ ನಗರವೇ ಪಿಂಕಾಗಿ ಬದಲಾಗುತ್ತದೆ.
ರಸ್ತೆಯಿಡೀ ಪಿಂಕ್ ಬಣ್ಣದ ಹೂವರಳುವುದು ಎಂದಾಗ ನೆನಪಾಗುವುದು ಜಪಾನ್. ಯಾಕೆಂದರೆ ಜಪಾನ್‌ನಲ್ಲಿ ಸಕುರಾ ಹೂವರಳುವ ಕಾಲ ವಿಶ್ವವಿಖ್ಯಾತಿ ಪಡೆದಿದೆ. ಇದು ಬಿಟ್ಟರೆ ಪ್ರಪಂಚದಲ್ಲಿ ಹಲವು ನಗರಗಳಿಗೆ ಪ್ರವಾಸಪ್ರಿಯರು ಈ ಚೆರ್ರಿ ಬ್ಲಾಸಂ ದಿನಗಳಿಗಾಗಿಯೇ ಪ್ರವಾಸ ಮಾಡಲಿಚ್ಛಿಸುತ್ತಾರೆ. ಕೆನಡಾ, ಯುಎಸ್, ಸ್ಪೈನ್, ಜರ್ಮನಿ, ಡೆನ್ಮಾರ್ಕ್ ಮತ್ತಿತರ ದೇಶಗಳ ಪ್ರಮುಖ ನಗರಗಳೆಲ್ಲ ಈ ಕಾಲದಲ್ಲಿ ಹೂವರಳಿ ತಾಜಾ ಆಗಿ ಕಣ್ಮನ ಸೆಳೆಯುತ್ತದೆ. ನಮ್ಮ ದೇಶದಲ್ಲೂ ಮೇಘಾಲಯ ಇದಕ್ಕಾಗಿ ಹೆಸರುವಾಸಿ. ಮೇಘಾಲಯ ಹಿಮಾಲಯನ್ ಚೆರ್ರಿ ಬ್ಲಾಸಂ ಉತ್ಸವಗಳನ್ನೂ ನಡೆಸುತ್ತದೆ. ಈ ಮೋಡಗಳ ನಗರಿ ಬೆಳ್ಮೋಡಕ್ಕೇ ಸ್ಪರ್ಧೆಯೊಡ್ಡುವಂತೆ ಪಿಂಕಾಗಿ ಬದಲಾಗುತ್ತದೆ. ಇವನ್ನೆಲ್ಲ ನೋಡಲಾಗದಿದ್ದರೇನಂತೆ, ನಮ್ಮ ಬೆಂಗಳೂರು ಇವಕ್ಕೆ ಯಾವುದರಲ್ಲೂ ಕಮ್ಮಿ ಇಲ್ಲ. ಯಾಕೆಂದರೆ, ಬೆಂಗಳೂರಿಗೆ ಬೆಂಗಳೂರೇ ಪಿಂಕಾಗಿ ಬದಲಾಗುವ ಚಂದವನ್ನು ಸವಿಯಲೂ ಮನಸ್ಸು, ಸಮಯ ಬೇಕು!
ನಿಧಾನವಾಗಿ ಬೆಳಗ್ಗೆದ್ದು ಮೈಮುರಿದು ಆಫೀಸಿಗೆ ಹೊರಡುವ ಗಡಿಬಿಡಿಯಲ್ಲಿ ಬೆಂಗಳೂರಿನ ಚಂದ ಎಷ್ಟೋ ಬಾರಿ ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ. ಅವಸರದ ಬದುಕಿನಲ್ಲಿ ಬೆಂಗಳೂರು ಇದ್ದಕ್ಕಿದ್ದಂತೆ ಒಂದು ಋತುವಿನಲ್ಲಿ ಬದಲಾಗುವ ಚಂದವನ್ನು ಸವಿಯಬೇಕಾದರೆ ಕೊಂಚ ಪುರುಸೊತ್ತು ಮಾಡಿ ಕೆಲವು ಏರಿಯಾಗಳನ್ನಾದರೂ ಸುತ್ತಾಡಬೇಕು. ಒಂದಿಷ್ಟು ಪಾರ್ಕುಗಳಲ್ಲಿ ಮುಂಜಾವಿನ ವ್ಯಾಯಾಮಕ್ಕಾದರೂ ಹೋಗಿ ಬರಬೇಕು. ಒಂದಿಷ್ಟು ಹೊಸ ಏರಿಯಾಗಳಿಗೊಮ್ಮೆ ಆಗಾಗ ಹೋಗಿ ಬರಬೇಕು. ನಮ್ಮದೇ ಬೆಂಗಳೂರಿನ ಹಲವು ಕೋನಗಳು ನಮಗೇ ಗೊತ್ತಿರುವುದಿಲ್ಲ ಎಂದು ಆಗ ಅರ್ಥವಾಗುತ್ತದೆ.
ಪಿಂಕ್ ಟ್ರಂಪೆಟ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಹೂವು ಇನ್ನೇನು ಬೆಂಗಳೂರಿಗೆ ಬೆಂಗಳೂರನ್ನೇ ಆಳತೊಡಗುತ್ತದೆ. ಜನವರಿಯಿಂದ ಮಾರ್ಚ್‌ವರೆಗೆ ಈ ಪಿಂಕ್ ಬಿನ್ನಾಣಗಿತ್ತಿಯರದ್ದೇ ಕಾರುಬಾರು. ರಸ್ತೆ ಮೇಲೆಲ್ಲ ಪಕಳೆಗಳನ್ನು ಚೆಲ್ಲಿ, ಹಸಿರೇ ಮುಚ್ಚಿ ಹೋಗುವಂತೆ ಪಿಂಕ್ ಮೈತಳೆದು ನಿಲ್ಲುತ್ತದೆ. ಆವರೆಗೆ ಹಸಿರಿದ್ದ ಬೆಂಗಳೂರು ಪಿಂಕ್ ಹೊದಿಕೆ ಹೊದ್ದು ಬೆಚ್ಚಗಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲೆಲ್ಲ ಪಿಂಕ್ ಚಿತ್ರಗಳು ನದಿಯಾಗಿ ಹರಿದು ಸೆನ್ಸೇಶನ್ ಮಾಡುತ್ತವೆ. ಅರೆರೆ ನಮ್ಮ ಬೆಂಗಳೂರು ಇಷ್ಟು ಚಂದ ಎಂದು ನಾವೇ ಕಣ್ ಬಿಟ್ಟು ಚಿವುಟಿಕೊಂಡು ನೋಡುತ್ತೇವೆ.
ಇದನ್ನೂ ಓದಿ | Lalbagh Flower Show 2023 | ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ; ಉದ್ಯಾನ ನಗರಿಯ ಗತ ವೈಭವ ಮರುಸೃಷ್ಟಿಗೆ ಕ್ರಮ
ಬ್ರಿಟೀಷರ ಕಾಲದಲ್ಲಿ ಅಂದಿನ ಖ್ಯಾತ ಸಸ್ಯಶಾಸ್ತ್ರಜ್ಞರುಗಳಾದ ಜಾನ್ ಕ್ಯಾಮರಾನ್ ಹಾಗೂ ಗುಸ್ತವ್ ಹರ್ಮಾನ್ ಅಂದಿನ ಮೈಸೂರು ಸಂಸ್ಥಾನಕ್ಕೆ ಸೇರಿದ ಲಾಲ್‌ಬಾಗ್‌ನಲ್ಲಿ ಈ ಹೂವಿನ ಮರಗಳ ಮೊದಲ ಬೀಜಗಳನ್ನು ಹಾಕುವ ಮೂಲಕ ಭಾರತಕ್ಕೆ ಮೊದಲ ಬಾರಿಗೆ ಪರಿಚಯಿಸಲಾಯಿತಂತೆ. ಇದಾದ ಮೇಲೆ ಭಾರತದ ಹಲವು ನಗರಗಳಲ್ಲೂ ಇದೇ ಸಮಯದಲ್ಲಿ ಈ ಗಿಡಗಳನ್ನು ನೆಡಲಾಗಿತ್ತು. ಇಂದು ಇಂದು ಬೆಂಗಳೂರಿನ ಬಹುತೇಕ ಹಲವು ಏರಿಯಾಗಳಲ್ಲಿ ಸಾಲು ಮರಗಳಾಗಿ ತಿಂಗಳುಗಳ ಮಟ್ಟಿಗೆ ಬೆಂಗಳೂರಿನ ಚೆಹರೆಯನ್ನೇ ಬದಲಾಯಿಸಿಬಿಡುತ್ತದೆ.
ಹಾಗಾದರೆ ಬೆಂಗಳೂರಿಗರಾಗಿದ್ದೂ ಪಿಂಕ್ ಸಿಟಿಯಾಗಿ ಬದಲಾಗುವ ಬೆಂಗಳೂರನ್ನು ನೋಡಬೇಕಿದ್ದರೆ ಒಮ್ಮೆ ಕಬ್ಬನ್ ಪಾರ್ಕ್‌ನಲ್ಲೊಮ್ಮೆ ಸುತ್ತಾಡಿ ಬರಬಹುದು. ಇತ್ತೀಚೆಗಷ್ಟೇ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಂಚಿಕೊಂಡ ವೈಟ್‌ಫೀಲ್ಡ್‌ನ ಎಇಸಿಎಸ್ ಲೇಔಟ್ ಕಡೆ ಒಂದು ರೈಡ್ ಹೋಗಿ ಬರಬಹುದು. ಅಯ್ಯೋ ಅದು ಸಿಕ್ಕಾಪಟ್ಟೆ ದೂರ ಅಂತನಿಸಿತಾದರೆ, ಜಯನಗರದಲ್ಲೊಮ್ಮೆ ಸುತ್ತು ಹಾಕಿ ಬರಬಹುದು. ಅಗರ ಲೇಕ್ ಸುತ್ತಮುತ್ತ ತಿರುಗಾಡಿ ಬರಬಹುದು. ಸಿಲ್ಕ್ ಬೋರ್ಡ್ ಕಡೆಗೂ ಒಂದು ಭಾನುವಾರದ ಹದವಾದ ಮದ್ಯಾಹ್ನದಲ್ಲೊಮ್ಮೆ ಡ್ರೈವ್ ಮಾಡಿ ಬರಬಹುದು. ಯಲಹಂಕ ಹತ್ತಿರ ಎಂದಾದರೆ ಅಲ್ಲೇ ಸುತ್ತಾಡಿ ಬರಬಹುದು. ಒಟ್ಟಾರೆ, ಬೆಂಗಳೂರಿನಲ್ಲಿ ಈ ಪಿಂಕ್ ಸುಂದರಿಯರನ್ನು ನೋಡಲು ಇಂಥದ್ದೇ ರಸ್ತೆಗೆ ಹೋಗಬೇಕಿಲ್ಲ. ನಿಮ್ಮ ಹೃದಯ, ಕಣ್ಣು ಸೌಂದರ್ಯವನ್ನು ಆಸ್ವಾದಿಸುವ ಮನಸ್ಥಿತಿಯದ್ದಾಗಿದ್ದರೆ, ಗಲ್ಲಿಗಲ್ಲಿಯೂ ಪಿಂಕಾಗಿಯೇ ಕಾಣುತ್ತದೆ. ಯಾವ ನಗರಕ್ಕೂ ನಮ್ಮ ಬೆಂಗಳೂರು ಕಮ್ಮಿಯಿಲ್ಲ ಅನಿಸುತ್ತದೆ. ಆಹಾ ನಮ್ಮ ಬೆಂಗಳೂರು ಎಷ್ಟು ಚಂದ ಅನಿಸದಿದ್ದರೆ ಕೇಳಿ!
ಇದನ್ನೂ ಓದಿ | Lalbagh Flower Show 2023 | ಫಲಪುಷ್ಪ ಪ್ರದರ್ಶನದಲ್ಲಿ ಆಗುತ್ತಿದೆ ಬೆಂಗಳೂರು ದರ್ಶನ