Site icon Vistara News

Jog Falls : ಮೈದುಂಬಿದ ಜೋಗ; ಮುಸುಕಿದ ಮಬ್ಬಿನಲಿ ಕಾಣದ ವೈಭೋಗ!

Jog falls view

ಜೋಗ್ ಫಾಲ್ಸ್ (ಶಿವಮೊಗ್ಗ): ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ವಿಶ್ವವಿಖ್ಯಾತ ಜೋಗ ಜಲಪಾತ ಭೋರ್ಗರೆದು ಧುಮ್ಮುಕ್ಕುತ್ತಿದೆ. ಜೋಗ ಜಲಪಾತದ (Jog Falls) ಸನಿಹದಲ್ಲೇ ಇರುವ ಮಾವಿನಗುಂಡಿ ಜಲಪಾತವೂ (Mavinagundi Falls) ಸಹ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ವಾರಾಂತ್ಯದ ಶನಿವಾರ ಮತ್ತು ಭಾನುವಾರ ಸಾಗರೋಪಾದಿಯಲ್ಲಿ ಪ್ರವಾಸಿಗರು ಜಲಪಾತಕ್ಕೆ ಭೇಟಿ ನೀಡಿದ್ದಾರೆ. ಸುರಿಯುವ ಭಾರಿ ಮಳೆಯಲ್ಲಿಯೇ ಜಲಪಾತ ನೋಡಲು ಪ್ರವಾಸಿಗರು ಮುಗಿಬಿದ್ದರು. ಆದರೆ, ಗಂಟೆಗಟ್ಟಲೆ ಕಾದರೂ ಸಹ ಜಲಪಾತದ ವೈಭೋಗವನ್ನು ಸವಿಯಲು ಪ್ರವಾಸಿಗರಿಗೆ (Tourists) ಕಷ್ಟವಾಯಿತು. ಮಂಜಿನ ಪರದೆಯಲ್ಲಿ ಜೋಗದ ಸಿರಿ ಮುಚ್ಚಿ ಹೋಗಿದ್ದು, ಜೋರಾದ ಮಳೆ ಗಾಳಿ ಬಂದಾಗ ಕೆಲವೇ ಕೆಲವು ಸೆಕೆಂಡ್‌ಗಳಷ್ಟು ಮಾತ್ರ ಜಲಪಾತವು ಕಂಡಿದೆ.

ಇದನ್ನೂ ಓದಿ: Lok Sabha Election 2024 : ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಸಂಕಟ; ಮೈತ್ರಿಗೆ ದಳ ಶಾಸಕರ ಹೊಸ ದಾಳ!

ಜಲಪಾತ ಕಂಡ ಕೂಡಲೇ ಸೇರಿದಿದ್ದ ಸಾವಿರಾರು ಜನರು ಹರ್ಷೋದ್ಗಾರ ವ್ಯಕ್ತಪಡಿಸುತ್ತಿದ್ದರು. ಒಮ್ಮೆಲೆ ಘೋಷಗಳು ಮುಗಿಲುಮುಟ್ಟುತ್ತಿದ್ದವು. ಅಷ್ಟರ ಮಟ್ಟಿಗೆ ಎಲ್ಲರ ಕಣ್ಣು ಜಲಪಾತದತ್ತ ನೆಟ್ಟಿತ್ತು. ಇಡೀ ಭಾನುವಾರ ಪೂರ್ಣ ಪ್ರಮಾಣದಲ್ಲಿ ಜಲಪಾತ ಕಂಡು ಬರಲೇ ಇಲ್ಲ. ಕೇವಲ ರಾಕೆಟ್ ಮತ್ತು ರಾಣಿ ಜಲಪಾತಗಳು ಮಾತ್ರ ನಿಚ್ಚಳವಾಗಿ ಪ್ರವಾಸಿಗರಿಗೆ ಕಂಡುಬಂತು.

ಶಕ್ತಿ ಯೋಜನೆ ಎಫೆಕ್ಟ್!

ಶಕ್ತಿ ಯೋಜನೆಯನ್ನು (Shakti Scheme) ಸದುಪಯೋಗ ಮಾಡಿಕೊಂಡ ಸಾಕಷ್ಟು ಮಹಿಳೆಯರು ಜಲಪಾತ‌ ವೀಕ್ಷಣೆಗೆಂದು ಗುಂಪು ಗುಂಪಾಗಿ ಆಗಮಿಸಿದ್ದರು. ಸುರಿಯುವ ಮಳೆ, ಗಾಳಿಯಿಂದಾಗಿ ಚಳಿಯೂ ಆಗಿದ್ದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಒಂದು ರೀತಿಯ ಸುಗ್ಗಿಯಂತಾಗಿತ್ತು. ಬಿಸಿಬಿಸಿ ಜೋಳಗಳನ್ನು ಬಿಕರಿಯಾಗುತ್ತಿದ್ದವು. ಜನರು ಮುಗಿಬಿದ್ದು ಕೊಂಡು ತಿನ್ನುತ್ತಿದ್ದರು.

ಸರಿಯಾದ ಹೋಟೆಲ್‌ ಇಲ್ಲದ್ದಕ್ಕೆ ಬೇಸರ

ಜಲಪಾತದ ಸನಿಹದಲ್ಲಿ ಸಮರ್ಪಕವಾದ ಹೋಟೆಲ್ ವ್ಯವಸ್ಥೆ ಇಲ್ಲದ ಕಾರಣ ಪ್ರವಾಸಿಗರು ಊಟ, ತಿಂಡಿಗಾಗಿ ಪರದಾಡುತ್ತಿದ್ದರು. ಇಂಥ ವಿಶ್ವವಿಖ್ಯಾತ ಸ್ಥಳದಲ್ಲಿ ಸೂಕ್ತ ವ್ಯವಸ್ಥೆಯನ್ನು ಮಾಡಬೇಕು ಎಂಬ ಆಗ್ರಹವೂ ಕೇಳಿಬಂತು.

ಫೋಟೊ ಪ್ರಿಯರಿಗೆ ನಿರಾಸೆ

ಇಡೀ ದಿನ ಮಂಜು ಮುಸುಕಿದ್ದರಿಂದ ಫೋಟೊಪ್ರಿಯರಿಗೆ ಭಾರಿ ನಿರಾಸೆಯಾಯಿತು. ಜೋಗಕ್ಕೆ ಬಂದರೂ ಸರಿಯಾದ ಫೋಟೊ ಸಿಕ್ಕಲಿಲ್ಲವಲ್ಲ ಎಂದು ಬೇಸರಿಸಿಕೊಂಡರು. ಒಂದು ಚೆಂದದ ಸೆಲ್ಫೀ ಪಡೆಯಲಾಗಲಿಲ್ಲ ಎಂದು ಹಪಹಪಿಸಿದರು. ಜೋರು, ಗಾಳಿ ಮಳೆಯಾದರೂ ಬರಲಿ, ಜೋಗದ ವೈಭವವನ್ನು ಮುಚ್ಚಿಕೊಂಡಿದ್ದ ಮಂಜಿನ ಮರೆ ಸರಿಯಲಿ ಎಂದು ಹಲವಾರು ಬಾರಿ ಪ್ರಾರ್ಥಿಸಿದರೂ ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ:BK Hariprasad : ಸಿಎಂ ಇಳಿಸುವ ಮಾತು ಹರಿಪ್ರಸಾದ್‌ರದ್ದೋ, ಡಿಕೆಶಿಯದ್ದೋ? ಮಾಳವೀಯ ಪ್ರಶ್ನೆ

ಭಾರಿ ಸಂಖ್ಯೆಯಲ್ಲಿ ವಾಹನಗಳು ಆಗಮಿಸಿದ್ದವು. ಅವುಗಳಿಗೆ ಪಾರ್ಕಿಂಗ್‌ ವ್ಯವಸ್ಥೆಯನ್ನು ಪೊಲೀಸ್‌ ಇಲಾಖೆ ಅಚ್ಚುಕಟ್ಟಾಗಿ ಮಾಡಿತ್ತು. ಸಾಕಷ್ಟು ಪ್ರವಾಸಿಗರಿಗೆ ಜಲಪಾತ ದರ್ಶನ ಆಗದೆ ನಿರಾಸೆಯಿಂದ ಮರಳಿದ್ದಾರೆ.

Exit mobile version