Site icon Vistara News

Folk Museum: ಮೈಸೂರಿನ ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಜಾನಪದ ವಸ್ತುಸಂಗ್ರಹಾಲಯ ಸಂರಕ್ಷಣೆ; ಯು.ಎಸ್. ಮಿಷನ್‍ ಬೆಂಬಲ

Jayalakshmi Vilas Mansion

ಮೈಸೂರು: ಮೈಸೂರಿನಲ್ಲಿರುವ ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ (Jayalakshmi Vilas Mansion) ಜಾನಪದ ವಸ್ತುಸಂಗ್ರಹಾಲಯದ (Folk Museum) ರಕ್ಷಣೆಯ ಹೊಣೆಯನ್ನು ಭಾರತದಲ್ಲಿನ ಯು.ಎಸ್. ಮಿಷನ್ ಮತ್ತು ಅದರ ಅನುಷ್ಠಾನ ಪಾಲುದಾರತ್ವ ಹೊಂದಿದ ಮೈಸೂರು ವಿಶ್ವವಿದ್ಯಾನಿಲಯವು ವಹಿಸಿಕೊಂಡಿರುವುದಾಗಿ ಗುರುವಾರ (ಜ. 4) ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಈ ಯೋಜನೆಯು ಯು.ಎಸ್. ಸರ್ಕಾರದ ಅಂಬಾಸಿಡರ್ಸ್‌ ಫಂಡ್‌ ಫಾರ್‌ ಕಲ್ಚರಲ್‌ ಪ್ರಿಸರ್ವೇಶನ್‌ (AFCP) ಮೂಲಕ ಧನಸಹಾಯ ಪಡೆದಿದೆ. ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಜಾನಪದ ವಸ್ತುಸಂಗ್ರಹಾಲಯ ಕಟ್ಟಡದ ಪಶ್ಚಿಮ ವಿಭಾಗ ಮತ್ತು ಕರ್ನಾಟಕ ರಾಜ್ಯದಾದ್ಯಂತ ಸಂಗ್ರಹಿಸಲಾಗಿರುವ 6,500ಕ್ಕೂ ಹೆಚ್ಚು ಕಲಾಕೃತಿಗಳ ಸಂರಕ್ಷಣೆಗೆ ಈ ಅನುದಾನವನ್ನು ಬಳಸಲಾಗುತ್ತದೆ. ಮೈಸೂರು ವಿಶ್ವವಿದ್ಯಾನಿಲಯವು ಡೆಕ್ಕನ್ ಹೆರಿಟೇಜ್ ಫೌಂಡೇಶನ್‌ ಸಹಭಾಗಿತ್ವದಲ್ಲಿ ಪುನರುದ್ಧಾರ ಮತ್ತು ಸಂರಕ್ಷಣಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಇದು 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಎಎಫ್‌ಸಿಪಿ (AFCP) ಅನುದಾನವನ್ನು ಘೋಷಿಸಿದ ಯು.ಎಸ್. ಕಾನ್ಸಲ್ ಜನರಲ್ ಚೆನ್ನೈ ಕ್ರಿಸ್ಟೋಫರ್ ಡಬ್ಲ್ಯು. ಹಾಡ್ಜಸ್, “ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಜಾನಪದ ವಸ್ತುಸಂಗ್ರಹಾಲಯದ ಸಂರಕ್ಷಣಾ ಯೋಜನೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಭಾರತ ಮತ್ತು ಅದರ ನಾಗರಿಕರನ್ನೊಳಗೊಂಡಂತೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಕುರಿತಂತೆ ಅಮೆರಿಕವು ಹೊಂದಿರುವ ಸ್ನೇಹ ಮತ್ತು ಅಭಿಮಾನಕ್ಕೆ ಸಲ್ಲಿಸುತ್ತಿರುವ ಗೌರವ ಇದಾಗಿದೆ. ಈ ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಮತ್ತು ಜಾನಪದ ವಸ್ತುಸಂಗ್ರಹಾಲಯವು ಒಮ್ಮೆ ಪೂರ್ಣಗೊಂಡ ನಂತರ ಭಾರತೀಯರಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಹೇಳಿದರು.

ಸಮುದಾಯದ ಪಾಲ್ಗೊಳ್ಳುವಿಕೆಯು ನಮ್ಮ ಎಲ್ಲ AFCP ಯೋಜನೆಗಳ ಪ್ರಮುಖ ಭಾಗವಾಗಿದೆ. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಯು.ಎಸ್. ಮಿಷನ್ ಇಂಡಿಯಾದ AFCP ನೀಡಿರುವ $300,000 ಅನುದಾನವು ಕಳೆದ ಇಪ್ಪತ್ತು ವರ್ಷಗಳಲ್ಲಿ ಭಾರತದಲ್ಲಿ ನೀಡಲಾದ ಎರಡನೇ ಅತಿದೊಡ್ಡ AFCP ಅನುದಾನವಾಗಿದೆ. ಮೈಸೂರಿನಲ್ಲಿರುವ AFCP ಯೋಜನೆಯು ಕರ್ನಾಟಕದಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಮತ್ತು ಸಂರಕ್ಷಿಸುವ ಬಗ್ಗೆ ಕಳಕಳಿ ಹೊಂದಿರುವ- ಸಂರಕ್ಷಣೆ ಮತ್ತು ವಸ್ತುಸಂಗ್ರಹಾಲಯ ತಜ್ಞರು, ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕರು ಮತ್ತು ನುರಿತ ಕುಶಲಕರ್ಮಿಗಳನ್ನು ಒಟ್ಟುಗೂಡಿಸುತ್ತದೆ” ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಎನ್‌.ಕೆ. ಲೋಕನಾಥ್ ಮಾತನಾಡಿ, ಮೈಸೂರು ವಿಶ್ವವಿದ್ಯಾನಿಲಯವನ್ನು ಯು.ಎಸ್. ದೂತಾವಾಸವು ಅನುದಾನ ನೀಡಲು ಗುರುತಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ‌

“ಪುನರುಜ್ಜೀವನಗೊಂಡ ಜಯಲಕ್ಷ್ಮಿ ವಿಲಾಸ ಭವನದ ಜಾನಪದ ವಸ್ತುಸಂಗ್ರಹಾಲಯವು ಮೈಸೂರಿನ ಪ್ರವಾಸಿ ಆಕರ್ಷಣೆಗಳನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕರ್ನಾಟಕದ ಜನಾಂಗೀಯ ಸಂಪ್ರದಾಯಗಳ ಮೇಲೆ ಕೇಂದ್ರೀಕರಿಸಿದ ವಿದ್ವಾಂಸರಿಗೆ ಸಂಶೋಧನೆ ಮತ್ತು ಉನ್ನತ ಶಿಕ್ಷಣದ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ” ಎಂದು ಅವರು ಹೇಳಿದರು.

ಒಆರ್‌ಐ ಕಟ್ಟಡ ಉದ್ಘಾಟನೆ

ಮೈಸೂರು ವಿಶ್ವವಿದ್ಯಾನಿಲಯವು 2012ರಲ್ಲಿ ಯು.ಎಸ್. ಕಾನ್ಸುಲೇಟ್ ಜನರಲ್ ಚೆನ್ನೈನಿಂದ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‍ನ (ORI) ಸಂರಕ್ಷಣೆ ಮತ್ತು ಅದರ 40,000 ಪುರಾತನ ತಾಳೆಗರಿ ಹಸ್ತಪ್ರತಿಗಳು ಮತ್ತು ಪುಸ್ತಕಗಳ ಅಮೂಲ್ಯ ಸಂಗ್ರಹಕ್ಕಾಗಿ ಅನುದಾನವನ್ನು ಪಡೆದಿರುವುದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ಪುನರುಜ್ಜೀವನಗೊಂಡ ಒಆರ್‌ಐ (ORI) ಕಟ್ಟಡವನ್ನು ಭಾರತದ ಮಾಜಿ ಯು.ಎಸ್. ರಾಯಭಾರಿ ರಿಚರ್ಡ್ ವರ್ಮಾ ಉದ್ಘಾಟಿಸಿದರು.

ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಇಂಡಿಯಾದ ಅಧ್ಯಕ್ಷೆ ರಾಯಭಾರಿ ಲತಾ ರೆಡ್ಡಿ ಮಾತನಾಡಿ, “ಜಯಲಕ್ಷ್ಮಿ ವಿಲಾಸ ಭವನದಲ್ಲಿ ಪಾಲಿಸೆಮಿಕ್ ಮ್ಯೂಸಿಯಂ ಅನ್ನು ರಚಿಸಲು ಡಿಎಚ್‌ಎಸ್‌ ಮುಂದಾಗಲಾಗಿದೆ. ವಾಸ್ತುಶಿಲ್ಪದ ಪುನಾರಚನೆ ಮತ್ತು ವಸ್ತು ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.

ಏನಿದು ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌?

ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ ಅನ್ನು 1905ರಲ್ಲಿ ಮೈಸೂರು ಮಹಾರಾಜ 10ನೇ ಚಾಮರಾಜ ಒಡೆಯರ್ ಅವರು, ಹಿರಿಯ ಪುತ್ರಿ ಮಹಾರಾಜಕುಮಾರಿ ಜಯಲಕ್ಷಮ್ಮಣ್ಣಿಯವರಿಗೆ ನಿವಾಸವಾಗಿ ನಿರ್ಮಿಸಿದ್ದರು. ಈ ಭವ್ಯವಾದ ಕಟ್ಟಡವನ್ನು ಯುರೋಪಿಯನ್ ಶಾಸ್ತ್ರೀಯ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅದು ನಾಲ್ಕು ವಿಭಾಗಗಳನ್ನು ಹೊಂದಿದೆ. 1959 ರಲ್ಲಿ ಕೆ.ವಿ. ಪುಟ್ಟಪ್ಪ (ಕುವೆಂಪು) ರವರು ಉಪಕುಲಪತಿಯಾಗಿದ್ದ ಸಮಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಜಯಲಕ್ಷ್ಮಿ ವಿಲಾಸ ಭವನ ಮತ್ತು ಅದರ ಸುತ್ತಮುತ್ತಲಿನ ಭೂಮಿಯನ್ನು, ವಿಶಾಲವಾದ ಮಾನಸ ಗಂಗೋತ್ರಿ ಕ್ಯಾಂಪಸ್‌ನ ಭಾಗವಾಗಿಸಲು ಸ್ವಾಧೀನಪಡಿಸಿಕೊಂಡಿತು. ಡಾ.ಜವರೇಗೌಡ ರವರು 1969ರಲ್ಲಿ ಜಾನಪದ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದರು.

ಇದನ್ನೂ ಓದಿ: Yash Birthday: ಈ ಹುಟ್ಟುಹಬ್ಬಕ್ಕೂ ಇರಲ್ಲ ಯಶ್‌! ಪತ್ರ ಬರೆದ ರಾಕಿ ಭಾಯ್‌; ಅಭಿಮಾನಿಗಳಿಗೆ ಭಾರಿ ನಿರಾಸೆ

ಏನಿದು AFCP ನಿಧಿ?

ವಿದೇಶದಲ್ಲಿ ಸಾಂಸ್ಕೃತಿಕ ಸಂರಕ್ಷಣೆಗಾಗಿ ಇರುವ ಯು.ಎಸ್. ಸರ್ಕಾರದ ಅತ್ಯಂತ ಮಹತ್ವದ ಸಾಂಸ್ಕೃತಿಕ ಉಪಕ್ರಮಗಳಲ್ಲಿ ಅಂಬಾಸಿಡರ್ಸ್‌ ಫಂಡ್‌ ಫಾರ್‌ ಕಲ್ಚರಲ್‌ ಪ್ರಿಸರ್ವೇಶನ್‌ (AFCP) ನಿಧಿಯು ಒಂದಾಗಿದೆ. ಯುನೈಟೆಡ್ ಸ್ಟೇಟ್ಸ್ ಭಾರತದೊಂದಿಗೆ ಜತೆಯಾಗಿ ಕಳೆದ 20 ವರ್ಷಗಳಲ್ಲಿ, ಒಟ್ಟು $2.7 ಮಿಲಿಯನ್ ಮೊತ್ತದ 24 AFCP ಯೋಜನೆಗಳನ್ನು ಬೆಂಬಲಿಸಿದೆ. ಅವುಗಳಲ್ಲಿ ಪ್ರಸಿದ್ಧವಾದ ಸುಂದರ್‌ವಾಲಾ ಬುರ್ಜ್, ಬಟಾಶೆವಾಲಾ ಮೊಘಲ್ ಸಮಾಧಿ ಸಂಕೀರ್ಣ ಮತ್ತು ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾದ ಹೊಸದಿಲ್ಲಿಯಲ್ಲಿರುವ ಹುಮಾಯೂನ್ ಸಮಾಧಿಯೊಳಗಿರುವ ಅರಬ್ ಸೆರಾಯ್ ಕಾಂಪ್ಲೆಕ್ಸ್ ಗೇಟ್‍ವೇ – ಇವುಗಳ ಸಂರಕ್ಷಣೆ; ಪಶ್ಚಿಮ ರಾಜಸ್ಥಾನದ ಲಂಗಾ ಮತ್ತು ಮಂಗನಿಯಾರ್ ಸಮುದಾಯಗಳ ಅಳಿವಿನಂಚಿನಲ್ಲಿರುವ ಜಾನಪದ ಸಂಗೀತದ ರೆಕಾರ್ಡಿಂಗ್ ಮತ್ತು ಲಿಪ್ಯಂತರ; ಮತ್ತು ಬೆಂಗಳೂರಿನ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿರುವ ತಾಳೆಗರಿ ಹಸ್ತಪ್ರತಿಗಳು ಮತ್ತು ಅಪರೂಪದ ಪುಸ್ತಕಗಳ ಸಂರಕ್ಷಣೆ ಸೇರಿವೆ. AFCP ಮೂಲಕ, ಯುನೈಟೆಡ್ ಸ್ಟೇಟ್ಸ್ ಪ್ರಪಂಚದಾದ್ಯಂತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯಲ್ಲಿ ಅಮೆರಿಕನ್ ನಾಯಕತ್ವವನ್ನು ಪ್ರದರ್ಶಿಸುವುದರೊಂದಿಗೆ, ಇತರ ಸಂಸ್ಕೃತಿಗಳ ಬಗೆಗಿರುವ ಗೌರವವನ್ನು ತೋರಿಸುತ್ತದೆ.

Exit mobile version