ತುಮಕೂರು: ಇಲ್ಲಿನ ಶೆಟ್ಟಪ್ಪನಹಳ್ಳಿಯಲ್ಲಿ ಆಹಾರ ಸೇವಿಸಿದ 28ಕ್ಕೂ ಹೆಚ್ಚು ಮಂದಿ (Food Poisoning) ಅಸ್ವಸ್ಥಗೊಂಡಿದ್ದಾರೆ. ಭಾನುವಾರ (ಸೆ.24) ಗಣೇಶ ವಿಸರ್ಜನೆ ಸಮಯದಲ್ಲಿ ಪ್ರಸಾದ ಸೇವಿಸಿದ್ದರೂ ಜತೆಗೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿರುವ ಶಂಕೆ ವ್ಯಕ್ತವಾಗಿದೆ.
6 ಮಂದಿ ಆರೋಗ್ಯವು ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಯಲಕ್ಷ್ಮಿ (35), ಬೋರಮ್ಮ (68), ಬೈರಪ್ಪ(80), ಗಂಗಮ್ಮ (70), ನಂಜಮ್ಮ(85) ಎಂಬುವವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 20ಕ್ಕೂ ಹೆಚ್ಚು ಜನರಿಗೆ ಗೂಳೂರು ಪ್ರಾಥಮಿಕ ವೈದ್ಯರಿಂದ ಗ್ರಾಮದಲ್ಲೇ ಚಿಕಿತ್ಸೆ ಮುಂದುವರಿದಿದೆ.
ತುಮಕೂರು ತಾಲೂಕಿನ ಶೆಟ್ಟಪ್ಪನಹಳ್ಳಿ ಗ್ರಾಮದಲ್ಲಿ ಸುಮಾರು 54 ಮನೆಗಳಿದ್ದು, ಕಳೆದ ಭಾನುವಾರ ಗ್ರಾಮದ ಓರ್ವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ನಿನ್ನೆ ಬೆಳಗ್ಗೆ (ಸೆ.25) 10 ಗಂಟೆ ಸುಮಾರಿಗೆ 6 ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಅಸ್ವಸ್ಥರು ಗೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ವೇಳೆ ಎಚ್ಚತ್ತ ಆರೋಗ್ಯ ಅಧಿಕಾರಿಗಳು ವೈದ್ಯರ ತಂಡ ಸಮೇತ ಶೆಟ್ಟಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಇದುವರೆಗೆ ಸುಮಾರು 28ಮಂದಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಗ್ರಾಮದಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಅಸ್ವಸ್ಥಗೊಂಡಿರುವವರ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಅಸ್ವಸ್ಥಗೊಂಡಿದ್ದ 28 ಜನರಲ್ಲಿ 24 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.
ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದಾರೆ. ಅಣಬೆ ಸೇವಿಸಿದ್ದ ಬಗ್ಗೆಯೂ ಶಂಕೆ ಇದೆ. ಮೇಲ್ನೋಟಕ್ಕೆ ಕುಡಿಯುವ ನೀರು ಕಲುಷಿತಗೊಂಡಿರಬಹುದು, ಆಹಾರದಲ್ಲಿ ವ್ಯತ್ಯಾಸಗೊಂಡಿರಬಹುದೆಂದು ಅಂದಾಜಿಸಲಾಗಿದೆ. ಕುಡಿಯುವ ನೀರನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಬಳಿಕ ಪ್ರಕರಣದ ಸತ್ಯಸಂಗತಿ ಹೊರಬರಲಿದೆ. ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗದ ಆತಂಕವು ಹೆಚ್ಚಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ