ಮಂಗಳೂರು: ಇಲ್ಲಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಹಿಂದೂ ಯುವತಿಯೊಬ್ಬರು ತಮ್ಮನ್ನು ಹಣ ಮತ್ತು ಕೆಲಸದ ಆಮಿಷ ಒಡ್ಡಿ ಬಲವಂತವಾಗಿ ಮತಾಂತರಗೊಳಿಸಿರುವ ಬಗ್ಗೆ (Forced conversion) ದೂರು ದಾಖಲಿಸಿದ್ದರು. ಈಗ ತಮ್ಮನ್ನು ಯಾವ ರೀತಿಯಾಗಿ ಬಳಸಿಕೊಳ್ಳಲಾಯಿತು, ತೊಂದರೆ ಕೊಟ್ಟರು ಎಂಬ ಬಗ್ಗೆ ವಿವರಿಸಿದರು.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯುವತಿ ಶಿವಾನಿ ಅಲಿಯಾಸ್ ಆಯೇಷಾ, ಕೆಲಸದಲ್ಲಿ ಇದ್ದಾಗ ಖಲೀಲ್ ಪರಿಚಯವಾಗಿ ಅವರ ಸಂಬಂಧಿಕರ ಮನೆಗೆ ಹೋದಾಗ, ಅಲ್ಲಿ ನನಗೆ ನಮಾಜ್ ಕಲಿಸಿ ಕುರಾನ್ ಓದಲು ಕಲಿಸಿದ್ದರು. ಖಲೀಲ್ ಕುಟುಂಬದವರು ನನಗೆ ಆಯೇಷಾ ಎಂದು ಹೆಸರಿಟ್ಟು, ಬುರ್ಖಾ ಹಾಕಿಸಿದ್ದರು ಎಂದು ಮತಾಂತರದ ಕುರಿತು ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಇಲ್ಲಿಂದ ಕೇರಳದ ಒಂದು ಮನೆಗೆ ಕೆಲಸಕ್ಕೆ ಹೋಗಿದ್ದಾಗ, ಕೊರೊನಾ ಸಮಯದಲ್ಲಿ ಕೆಲಸ ಬಿಟ್ಟು ಮನೆಗೆ ವಾಪಸ್ ಆಗಿದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಡಾ.ಜಮೀಲಾ ಎಂಬುವವರ ಮನೆಯಲ್ಲಿ ಮೊದಲು ಕ್ಲೀನಿಂಗ್ ಕೆಲಸ ಎಂದು ಹೇಳಿ ನಂತರ ಅಡುಗೆ ಕೆಲಸ ಕೊಟ್ಟರು. ಆದರೆ, ಡಾ. ಜಮೀಲಾ ನನಗೆ ತೊಂದರೆ ಕೊಟ್ಟ ಕಾರಣಕ್ಕೆ ತಪ್ಪಿಸಿಕೊಂಡು ಹೊರಬಂದೆ. ಆದರೆ, ಇಲ್ಲಿಯೂ ಕೂಡ ಬುರ್ಖಾ ಹಾಕಿಸಿ, ಕುರಾನ್ ಪುಸ್ತಕ ಕೊಟ್ಟು ಓದಲು, ನಮಾಜ್ ಮಾಡಲು ಹೇಳುತ್ತಿದ್ದರು ಎಂದು ಆರೋಪಿಸಿದ್ದಾರೆ.
ಲೈಂಗಿಕ ಕಿರುಕುಳ
ಇಸ್ಲಾಮ್‌ಗೆ ಮತಾಂತರ ಮಾಡಿದ್ದಲ್ಲದೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಶಿವಾನಿ ದೂರು ದಾಖಲಿಸಿದ್ದಾರೆ. ಕುಲಶೇಖರದ ಮೊಬೈಲ್ ಅಂಗಡಿಯ ಖಲೀಲ್ ಹಾಗೂ ಭದ್ರಾವತಿಯ ಇಮಾಮ್ ವಿರುದ್ಧವೂ ಆರೋಪಿಸಲಾಗಿದೆ. ಮಂಗಳೂರಿನ ವೈದ್ಯೆ ಡಾ.ಜಮೀಲಾ ವಿರುದ್ಧ ಮತಾಂತರ ಆರೋಪ ಮಾಡಲಾಗಿದೆ. ಕುರಾನ್ ಓದಲು ಹೇಳಿ ನಮಾಜ್ ಮಾಡಿಸಿ ಬಲವಂತದ ಮತಾಂತರ ನಡೆಸಲಾಗಿದೆ ಎಂದು ದೂರು ದಾಖಲಾಗಿದೆ. ಡಾ.ಜಮೀಲಾ, ಖಲೀಲ್ ಮತ್ತು ಇಮಾಮ್ ವಿರುದ್ದ ಪೊಲೀಸರು ಐಪಿಸಿ 354, 354(ಎ), 506 ಹಾಗೂ ಮತಾಂತರ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ | ಟಿಪ್ಪು ವಿವಾದ | ಟಿಪ್ಪು ಮಾಡಿದ್ದು ಮತಾಂತರವಾದರೆ ರಾಮಾನುಜಾಚಾರ್ಯ, ಬಸವಣ್ಣ ಮಾಡಿದ್ದೇನು?: ಬಸವಲಿಂಗಯ್ಯ