ನವದೆಹಲಿ/ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸಿಲುಕಿ, ವಿದೇಶಕ್ಕೆ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣನ (Prajwal Revanna Case) ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ (Diplomatic Passport) ರದ್ದುಗೊಳಿಸಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದ ಬೆನ್ನಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್‌ಪೋರ್ಟ್ ರದ್ದತಿಯ ಪ್ರಕ್ರಿಯೆ ಆರಂಭಿಸಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು (Central Government) ಪ್ರಜ್ವಲ್ ರೇವಣ್ಣನಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ಅನ್ನು ರದ್ದುಗೊಳಿಸಬೇಕು ಎಂದು ಸಿದ್ದರಾಮಯ್ಯ ಅವರು ಎರಡು ಬಾರಿ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. ಇನ್ನು, ಇದರ ಭಾಗವಾಗಿಯೇ ಕೇಂದ್ರ ಸರ್ಕಾರವು ಪ್ರತಿಕ್ರಿಯೆ ಕೋರಿ ಪ್ರಜ್ವಲ್ ರೇವಣ್ಣಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಶೋಕಾಸ್ ನೋಟಿಸ್‌ಗೂ ಉತ್ತರ ನೀಡದಿದ್ದರೆ, ಕೇಂದ್ರ ಸರ್ಕಾರವು ಪಾಸ್‌ಪೋರ್ಟ್ ರದ್ದುಗೊಳಿಸಲಿದೆ. ಪಾಸ್‌ಪೋರ್ಟ್ ರದ್ದಾದರೆ, ಜರ್ಮನಿಯಲ್ಲಿಯೇ (ಅಲ್ಲೇ ಇದ್ದಾರೆ ಎಂಬ ವರದಿ ಇದೆ) ಅವರನ್ನು ಬಂಧಿಸಿ, ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಹೇಗೆ ರದ್ದಾಗುತ್ತದೆ ಪ್ರಜ್ವಲ್ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್?
ಭಾರತೀಯ ವಿದೇಶಾಂಗ ಇಲಾಖೆಗೆ ಎಸ್‌ಐಟಿ ಅಧಿಕಾರಿಗಳು ರಾಜ್ಯ ಗೃಹ ಇಲಾಖೆ ಮುಖಾಂತರ ಪತ್ರ ರವಾನಿಸಿದ್ದಾರೆ. ಈ ಹಿಂದೆ ಸಿಎಂ ಪತ್ರ ಬರೆದಿದ್ದ ವೇಳೆ ನ್ಯಾಯಾಲಯದ ಆದೇಶ ಬೇಕು ಎಂದು ಕೇಂದ್ರ ಗೃಹ ಇಲಾಖೆ ಹೇಳಿತ್ತು. ಹಾಗಾಗಿ ನ್ಯಾಯಾಲಯದಿಂದ ಅರೆಸ್ಟ್ ವಾರಂಟ್ ಪಡೆದು ಎಸ್‌ಐಟಿಯವರು ಪುನಃ ಪತ್ರ ಬರೆದಿದ್ದಾರೆ. ಹೀಗಾಗಿ ಭಾರತೀಯ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆಯನ್ನು ಆರಂಭ ಮಾಡಿದೆ.
ಪಾಸ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಭಾರತೀಯ ವಿದೇಶಾಂಗ ಇಲಾಖೆ ಅಡಿಯಲ್ಲಿ ಬರುತ್ತದೆ. ಎಸ್‌ಐಟಿಯಿಂದ ಬಂದಿರುವ ಪತ್ರವನ್ನು ದೃಢೀಕರಣಕ್ಕಾಗಿ ಕೇಂದ್ರ ಗೃಹ ಇಲಾಖೆಗೆ ರವಾನೆ ಮಾಡುತ್ತದೆ. ಕೇಂದ್ರ ಗೃಹ ಇಲಾಖೆ ಪರಿಶೀಲನೆ ನಡೆಸಿ ಸಮ್ಮತಿ ಸೂಚಿಸಿದರೆ ಭಾರತೀಯ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ಅನ್ನು ರದ್ದು ಮಾಡುತ್ತದೆ.
ಪಾಸ್‌ಪೋರ್ಟ್ ರದ್ದಾದರೆ ಮುಂದೇನು?
ಒಮ್ಮೆ ಪಾಸ್‌ಪೋರ್ಟ್ ರದ್ದಾದರೆ ಈ ಬಗ್ಗೆ ಎಲ್ಲ ದೇಶಗಳ ಇಮಿಗ್ರೇಷನ್‌ಗೂ ಮಾಹಿತಿಯನ್ನು ರವಾನೆ ಮಾಡಲಾಗುತ್ತದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇಲ್ಲವೇ ಐಡೆಂಟಿಟಿ ಬದಲಾಯಿಸಿ ತಲೆಮರೆಸಿಕೊಂಡು ಓಡಾಡಬೇಕು. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಶೀಘ್ರದಲ್ಲೇ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: Prajwal Revanna Case: ತಾಳ್ಮೆ ಪರೀಕ್ಷಿಸಬೇಡ, ಈಗಲೇ ಬಂದು ಶರಣಾಗು; ಪ್ರಜ್ವಲ್‌ಗೆ ದೇವೇಗೌಡರ ವಾರ್ನಿಂಗ್