Site icon Vistara News

DK Shivakumar: ಎತ್ತಿನಹೊಳೆ ಕಾಮಗಾರಿಗೆ 500 ಎಕರೆ ನೀಡಲು ಅರಣ್ಯ ಇಲಾಖೆ ಒಪ್ಪಿಗೆ

Forest department agrees to give 500 acres for yEttina hole project work says DCM DK Shivakumar

ಬೆಂಗಳೂರು: ಎತ್ತಿನಹೊಳೆ ಕಾಮಗಾರಿಗೆ ಅಡಚಣೆ ಉಂಟುಮಾಡಿರುವ 500 ಎಕರೆ ಜಾಗವನ್ನು ಹಸ್ತಾಂತರಿಸಲು ಅರಣ್ಯ ಇಲಾಖೆ ಒಪ್ಪಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ಈ ಯೋಜನೆ ಸಂಬಂಧ ವಿಕಾಸಸೌಧದಲ್ಲಿ ಗುರುವಾರ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಅರಣ್ಯ ಸಚಿವ ಈಶ್ವರ ಖಂಡ್ರೆ, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಹಾಗೂ ಸಂಬಂಧಪಟ್ಟ ಇಲಾಖೆಗಳ ಪ್ರಮುಖ ಅಧಿಕಾರಿಗಳ ಜತೆ ಸಭೆ ನಡೆಸಿದರು.

ಇದನ್ನೂ ಓದಿ: Maruti Suzuki: ಮಾರುತಿ ಸುಜುಕಿ ಸಿಎನ್‌ಜಿ ವಾಹನದ ಟೀಸರ್ ಔಟ್‌; ಹಲವು ವೈಶಿಷ್ಟ್ಯಗಳ ನಿರೀಕ್ಷೆ

ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿ.ಕೆ. ಶಿವಕುಮಾರ್, ಎತ್ತಿನಹೊಳೆ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಕೆಲಸ ತ್ವರಿತ ಗತಿಯಲ್ಲಿ ನಡೆಸಲು ಅರಣ್ಯ ಸಚಿವ ಈಶ್ವರ ಖಂಡ್ರೆ, ದೆಹಲಿ ಪ್ರತಿನಿಧಿ ಟಿ.ಬಿ ಜಯಚಂದ್ರ, ಕಂದಾಯ, ಅರಣ್ಯ, ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಇಂದು ಚರ್ಚೆ ಮಾಡಿದ್ದೇವೆ ಎಂದರು.

ಈ ಯೋಜನೆಗೆ ಅಗತ್ಯವಿರುವ ಜಾಗವನ್ನು ಅರಣ್ಯ ಇಲಾಖೆ ನೀಡುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ 500 ಎಕರೆ ಜಾಗ ನೀಡಲಿದೆ. ಈ ಪ್ರಕ್ರಿಯೆಯನ್ನು ಕಾನೂನು ಚೌಕಟ್ಟಿನಲ್ಲಿ ಪೂರ್ಣಗೊಳಿಸುತ್ತೇವೆ ಎಂದ ಅವರು, ಈ ಯೋಜನೆಗಳ ಕಾಮಗಾರಿಗೆ ಎದುರಾಗಿರುವ ಸಮಸ್ಯೆಗಳನ್ನು ಅಧಿಕಾರಿಗಳು ಗುರುತಿಸಿದ್ದು, ಅವುಗಳಿಗೆ ಪರಿಹಾರ ಹುಡುಕಲು ಸಭೆಯಲ್ಲಿ ಚರ್ಚಿಸಿದ್ದೇವೆ ಎಂದು ತಿಳಿಸಿದರು.

260 ಕಿ.ಮೀ ಉದ್ಧದ 20 ಸ್ಥಳಗಳಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಇವೆ. ಈ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಅಗತ್ಯವಿದ್ದ ಕಾರಣ ನಮ್ಮ ಅರಣ್ಯ ಸಚಿವರು ಹಾಗೂ ಇಲಾಖೆ ಸಚಿವರ ಜತೆ ಚರ್ಚೆ ಮಾಡಿದ್ದೇವೆ. ಈ ವಿಚಾರವಾಗಿ ಕಂದಾಯ, ನೀರಾವರಿ ಹಾಗೂ ಅರಣ್ಯ ಇಲಾಖೆ ಸೇರಿ ಒಟ್ಟಾಗಿ ಜಂಟಿ ಸರ್ವೇ ಮಾಡುತ್ತಿದ್ದೇವೆ. ಅರಣ್ಯ ಇಲಾಖೆಗೆ ಬದಲಿ ಜಮೀನು ನೀಡಲು ಕಂದಾಯ ಇಲಾಖೆ ಒಪ್ಪಿದೆ. ಕೂಡಲೇ ಈ ಕಾಮಗಾರಿ ನಡೆಸಲು ಮನವಿ ಮಾಡಿದ್ದೇವೆ ಎಂದು ಹೇಳಿದರು.

ಈ ಮಧ್ಯೆ ಕೆಲವು ಜಾಗದಲ್ಲಿ ರೈತರಿಗೆ 51 ಕೋಟಿ ನೀಡಬೇಕಾಗಿದೆ. ಈ ಪೈಕಿ 10 ಕೋಟಿ ಹಣ ನೀಡಲಾಗಿದ್ದು, 41 ಕೋಟಿ ಬಾಕಿ ಇದೆ. ಈ ಜಾಗದ ವಿಚಾರವಾಗಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಡುವೆ ಗೊಂದಲವಿದೆ. ಹೀಗಾಗಿ ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದರು.

ಇದನ್ನೂ ಓದಿ: Namma Clinic: ಬಸ್‌ ನಿಲ್ದಾಣ ಸೇರಿದಂತೆ 254 ಕಡೆ ʼನಮ್ಮ ಕ್ಲಿನಿಕ್‌ʼ ಸ್ಥಾಪನೆ

ಇನ್ನು ದೊಡ್ಡಬಳ್ಳಾಪುರದ ಲಕ್ಕೇನಹಳ್ಳಿಯಲ್ಲಿ ಸಮತೋಲಿತ ಜಲಾನಯನ ಯೋಜನೆ ಬಾಕಿ ಇದ್ದು ಇದರ ಕಾಮಗಾರಿ ಆರಂಭಿಸಲು ತಯಾರಿ ಮಾಡಲಾಗಿದೆ. ಮುಂದಿನ ತಿಂಗಳ ಒಳಗಾಗಿ ನೀರನ್ನು ಹೊರತರಲು ನಿರ್ದೇಶನ ನೀಡಲಾಗಿದೆ. ಮೊದಲ ಹಂತದಲ್ಲಿ 48 ಕಿ.ಮೀ ನೀರು ಹರಿಸುವಂತೆ ಸೂಚನೆ ನೀಡಲಾಗಿದೆ. ಈ ಯೋಜನೆಯಿಂದ ಮತ್ತಷ್ಟು ಪ್ರಯೋಜನ ಪಡೆಯುವ ಉದ್ದೇಶದೊಂದಿಗೆ ಇದರ ಜತೆಗೆ ಸಮುದ್ರಕ್ಕೆ ಸೇರುತ್ತಿರುವ ನೀರನ್ನು ಹೇಗೆ ಎಲ್ಲೆಲ್ಲಿ ನಾವು ಹಿಡಿದಿಟ್ಟು ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸಲು ಉನ್ನತ ಮಟ್ಟದ ತಾಂತ್ರಿಕ ಸಮಿತಿ ರಚಿಸಲಿದ್ದೇವೆ ಎಂದು ತಿಳಿಸಿದರು.

ಯಡಿಯೂರಪ್ಪ ಪ್ರಕರಣದ ಮಾಹಿತಿ ಇಲ್ಲ:

ಪೋಕ್ಸೋ ಪ್ರಕರಣದಡಿ ಮಾಜಿ ಸಿಎಂ ಯಡಿಯೂರಪ್ಪ ಅವರ ಬಂಧನಕ್ಕೆ ಕೋರ್ಟ್ ವಾರೆಂಟ್ ಜಾರಿ ಮಾಡಿರುವ ಬಗ್ಗೆ ಕೇಳಿದಾಗ, ನಾನು ಸಭೆಯಲ್ಲಿದ್ದ ಕಾರಣ, ನನಗೆ ಹೆಚ್ಚಿನ ಮಾಹಿತಿ ಇಲ್ಲ. ಗೃಹ ಸಚಿವಾಲಯ ಈ ವಿಚಾರವನ್ನು ನಿಭಾಯಿಸಲಿದೆ ಎಂದರು.

ದರ್ಶನ್‌ ಪ್ರಕರಣ ಮುಚ್ಚಿಹಾಕಲು ಯಾರೂ ಸಂಪರ್ಕಿಸಿಲ್ಲ:

ದರ್ಶನ್ ಪ್ರಕರಣದಲ್ಲಿ ಪೊಲೀಸ್ ಠಾಣೆಯನ್ನು ಶಾಮಿಯಾನ ಮೂಲಕ ಮುಚ್ಚಲಾಗಿದೆ. ಈ ಪ್ರಕರಣದಲ್ಲಿ ಸತ್ಯಾಂಶ ಮರೆಮಾಚುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ, ನನ್ನ ಪ್ರಕರಣದ ಅನುಭವದಲ್ಲೇ ಹೇಳುವುದಾದರೆ, ಅಧಿಕಾರಿಗಳು ನನ್ನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವಾಗ ಜನರಿಗೆ ಮರೆಮಾಚಿ ಕರೆದುಕೊಂಡು ಹೋಗುವರು. ಕೆಲವು ಬಾರಿ ಅಭಿಮಾನಿಗಳು ಅಡ್ಡಬರುವುದು, ಜೈಕಾರ ಕೂಗುವುದು ಅಥವಾ ಯಾರಾದರೂ ಕಲ್ಲು ಎಸೆಯಬಹುದು ಎಂಬ ಕಾರಣಕ್ಕೆ ಪೊಲೀಸ್ ಅಧಿಕಾರಿಗಳು ಆ ರೀತಿ ಮಾಡುತ್ತಾರೆ. ಈ ಪ್ರಕರಣದಲ್ಲಿ ಪೊಲೀಸರು ಇದೇ ರೀತಿ ಮುನ್ನಚ್ಚರಿಕೆ ಕ್ರಮ ತೆಗೆದುಕೊಂಡಿರಬಹುದು. ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

ದರ್ಶನ್‌ ಪ್ರಕರಣ ಮುಚ್ಚಿಹಾಕಲು ನಿಮ್ಮ ಸಚಿವರು ಯಾರಾದರೂ ಒತ್ತಡ ಹಾಕಿದ್ದಾರಾ ಎಂಬ ಪ್ರಶ್ನೆಗೆ “ಈ ವಿಚಾರವಾಗಿ ನನ್ನ ಬಳಿ ಯಾರೂ ಮಾತನಾಡಿಲ್ಲ. ನನಗೆ ಅಷ್ಟಾಗಿ ಸಂಪರ್ಕವಿಲ್ಲ. ಸಚಿವರ ಪ್ರಯತ್ನದ ಬಗ್ಗೆ ನಿಮ್ಮಿಂದ ಮಾಹಿತಿ ಬಂದಿದೆ. ಈ ಬಗ್ಗೆ ವಿಚಾರಿಸುತ್ತೇನೆ ಎಂದರು.

ಇದನ್ನೂ ಓದಿ: ATM Cash Withdrawal Fee: ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕ 21 ರೂ.ಗೆ ಏರಿಕೆ?

ಈ ಪ್ರಕರಣ ರಾಜ್ಯ ಸರ್ಕಾರ ಮುಚ್ಚಿಹಾಕಲು ಪ್ರಯತ್ನಿಸಿದರೆ ನಾನು ಮಧ್ಯಪ್ರವೇಶಿಸಬೇಕಾಗುತ್ತದೆ ಎಂಬ ಕುಮಾರಸ್ವಾಮಿ ಅವರ ಎಚ್ಚರಿಕೆ ಬಗ್ಗೆ ಮಾಧ್ಯಮದವರು ಕೇಳಿದಾಗ, ಈಗಲೂ ಅವರು ಮಧ್ಯಪ್ರವೇಶಿಸಲಿ. ಯಾರು ಬೇಕಾದರೂ ಮಧ್ಯಪ್ರವೇಶ ಮಾಡಲಿ ಎಂದರು.

Exit mobile version