ಮಡಿಕೇರಿ: ಪೊನ್ನಂಪೇಟೆಯಲ್ಲಿ ಕೇವಲ ೧೨ ಗಂಟೆ ಅವಧಿಯಲ್ಲಿ ಇಬ್ಬರನ್ನು ಕೊಂದು ಹಾಕಿದ ಹುಲಿಯನ್ನು ಹಿಡಿಯಲು (Operation Tiger) ಸರ್ಕಾರ ಆದೇಶ ನೀಡಿದ್ದು, ಇದರನ್ವಯ ಮಂಗಳವಾರ ಬೆಳಗ್ಗೆಯೇ ಅರಣ್ಯಾಧಿಕಾರಿಗಳು ಎಲ್ಲ ರೀತಿಯ ಸರಂಜಾಮುಗಳು ಮತ್ತು ಆನೆಗಳೊಂದಿಗೆ ಕಾಡಿನ ಪರಿಸರಕ್ಕೆ ಲಗ್ಗೆ ಇಟ್ಟಿದ್ದಾರೆ.
ಮೂಲತಃ ಮೈಸೂರು ಜಿಲ್ಲೆಯ ಕೊಳವಿಗೆ ಹಾಡಿಯ ನಿವಾಸಿಯಾದ ರಾಜು ಬಾಡಗ (೭೨) ಅವರು ಕುಟುಂಬದೊಂದಿಗೆ ಪೊನ್ನಂಪೇಟೆಗೆ ಕಾಫಿ ತೋಟದ ಕೆಲಸಕ್ಕೆ ಬಂದಿದ್ದರು. ಪೂಣಚ್ಚ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲೇ ಪಂಚವಳ್ಳಿಯ ಬಾಲಕ ಚೇತನ್ ಕೂಡಾ ಇದ್ದ. ಚೇತನ್(12) ಭಾನುವಾರ ಸಂಜೆ ಹೊತ್ತಿಗೆ ಕಾಫಿ ಬೀಜ ಹೆಕ್ಕುತ್ತಿದ್ದಾಗ ಹುಲಿ ದಾಳಿ ಮಾಡಿ ಸಾಯಿಸಿತ್ತು. ಇದಾದ ಒಂದು ದಿನದಲ್ಲಿ ಬಾಲಕನನ್ನು ಕೊಂದ ಜಾಗದ ಸಮೀಪವೇ ರಾಜು ಅವರನ್ನೂ ಹುಲಿ ಬಲಿ ಪಡೆದಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಸಾರ್ವಜನಿಕರು ಮೃತದೇಹದ ಅಂತ್ಯಕ್ರಿಯೆಗೂ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯ ವಿಧಾನಸಭೆಯಲ್ಲೂ ಹುಲಿ ದಾಳಿಯ ಬಗ್ಗೆ ಚರ್ಚೆ ನಡೆದಿತ್ತು. ಇದಾದ ಬಳಿಕ ನರಹಂತಕ ಚಿರತೆ ಸೆರೆಗೆ ಆದೇಶ ಹೊರಬಿದ್ದಿತ್ತು.
ಇದಾದ ಬಳಿಕ ಊರಿನವರು ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಿದರು. ರಾಜು ಮೃತದೇಹವನ್ನು ಕುಟ್ಟ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪೋಸ್ಟ್ ಮಾರ್ಟಂ ಬಳಿಕ ಕುಟುಂಬಕ್ಕೆ ಬಿಟ್ಟುಕೊಡಲಾಯಿತು. ರಾಜು ಕುಟುಂಬಕ್ಕೆ ಸದ್ಯ ಐದು ಲಕ್ಷ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ.
ಆಪರೇಷನ್ ಹುಲಿ ಶುರು
ಇದೀಗ ಮಂಗಳವಾರ ಮುಂಜಾನೆಯಿಂದಲೇ ಆಪರೇಷನ್ ಟೈಗರ್ ನಡೆಸಲು ಅರಣ್ಯ ಇಲಾಖೆ ಸಜ್ಜಾಗಿದೆ. ಮುಂಜಾನೆ 6 ಗಂಟೆಯಿಂದಲೇ ಅರಣ್ಯ ಇಲಾಖೆ ಕೂಮಿಂಗ್ ಆರಂಭಿಸಿದೆ.
ಹುಲಿ ಕಾರ್ಯಾಚರಣೆಯಲ್ಲಿ 150 ಸಿಬ್ಬಂದಿ ಹಾಗೂ 4 ಆನೆ ಬಳಕೆ ಮಾಡಲಾಗುತ್ತಿದೆ. ಎಂಟು ತಂಡಗಳಾಗಿ ಹುಡುಕಾಟ ನಡೆಸಲಾಗುತ್ತಿದೆ. ಹುಲಿ ಎಲ್ಲಿದೆ ಎನ್ನುವ ಬಗ್ಗೆ ಸ್ಥಳೀಯರಿಗೆ ಇರುವ ಮಾಹಿತಿಯನ್ನು ಆಧರಿಸಿಯೂ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿ ಚೂರಿಕಾಡು ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಯುತ್ತಿದೆ.
ಇದನ್ನೂ ಓದಿ : Tiger Safari: ಹುಲಿ ಎಂಬ ರೋಮಾಂಚನ: ಭಾರತದಲ್ಲಿ ಎಲ್ಲೆಲ್ಲಿ ಹುಲಿಯನ್ನು ನೋಡಬಹುದು!?