ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವಲನಹಳ್ಳಿ ಗ್ರಾಮದಲ್ಲಿ ಕಳೆದ ಮಂಗಳವಾರ ಮಹಿಳೆಯೊಬ್ಬರನ್ನು ಮೆಕ್ಕೆಜೋಳದ ಜಮೀನಿನಲ್ಲಿ ಕೆಲಸ ಮಾಡುವಾಗ ದಾಳಿ ಮಾಡಿ ಕೊಂದು ಹಾಕಿದ ಚಿರತೆಗಾಗಿ ಅವಿರತ ಹುಡುಕಾಟ ನಡೆಯುತ್ತಿದೆ. ಆದರೆ, ಇನ್ನೂ ಫಲ ನೀಡಿಲ್ಲ.
ಸುಮಾರು ೧೦ ಜನ ಮಹಿಳೆಯರು ಮೆಕ್ಕೆಜೋಳದ ಜಮೀನಿನಲ್ಲಿ ಕಳೆ ತೆಗೆಯುತ್ತಿದ್ದಾಗ ಚಿರತೆ ದಾಳಿ ಮಾಡಿತ್ತು. ಕಮಲಾ ಬಾಯಿ ಎಂಬವರು ಗುಂಪಿನಿಂದ ಸ್ವಲ್ಪ ಹಿಂದೆ ಇದ್ದು ಕೆಲಸ ಮಾಡುತ್ತಿದ್ದಾಗ ಚಿರತೆ ಅವರ ಮೇಲೆ ಮುಗಿಬಿದ್ದಿದೆ. ನೇರವಾಗಿ ಅವರ ಕುತ್ತಿಗೆಗೆ ಬಾಯಿ ಹಾಕಿದ ಚಿರತೆ ಸುಮಾರು ೧೦೦ ಅಡಿ ದೂರಕ್ಕೆ ಎಳೆದುಕೊಂಡು ಹೋಗಿತ್ತು. ಅವರು ಅಲ್ಲೇ ಪ್ರಾಣ ಕಳೆದುಕೊಂಡಿದ್ದು, ಜನರು ಓಡಿ ಬಂದಾಗ ಚಿರತೆ ಶವವನ್ನು ಬಿಟ್ಟು ಓಡಿದೆ. ಇದಾದ ಬಳಿಕ ನರಹಂತಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.
ರಾತ್ರಿ ವೇಳೆ ಮನೆಯಿಂದ ಹೊರ ಬಂದಾಗ, ಜಮೀನುಗಳಿಗೆ ಹೋದಾಗ ಎಚ್ಚರಿಕೆ ವಹಿಸುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳು ಡಂಗುರ ಸಾರಿಸಿದ್ದಾರೆ. ಅರಣ್ಯಾಧಿಕಾರಿಗಳು ಐದು ಬೋನ್ ಗಳು, ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ.
ಅರಣ್ಯ ಸಿಬ್ಬಂದಿಗಳು ರಾತ್ರಿ ಮೆಕ್ಕೆಜೋಳದ ಹೊಲದ ಮೇಲೆ ನಿಗಾ ಇಟ್ಟಿದ್ದು, ಸಣ್ಣ ಕದಲಿಕೆ ಕಂಡರೂ ಒಳಗೆ ನುಗ್ಗಿ ಪರಿಶೀಲನೆ ನಡೆಸುತ್ತಿರುವುದು ಕಂಡುಬಂದಿದೆ. ಇದೀಗ ಇನ್ನಷ್ಟು ಸಿಬ್ಬಂದಿಯನ್ನು ಕರೆಸಿಕೊಳ್ಳಲು ಚಿಂತನೆ ನಡೆದಿದೆ.
ಹಿಂದಿನ ಸುದ್ದಿ | Leopard Attack | ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ದಾಳಿ; ಕೃಷಿ ಕಾರ್ಮಿಕ ಮಹಿಳೆ ಸಾವು