ಆನೇಕಲ್: ಕೇಂದ್ರ ವಿದೇಶಾಂಗ ಸಚಿವರಾಗಿರುವ ಎಸ್. ಜೈಶಂಕರ್ ಅವರು ಶುಕ್ರವಾರ ಆನೇಕಲ್‌ನ ಹುಲ್ಲಹಳ್ಳಿಯ ಮನೆಯೊಂದಕ್ಕೆ ಭೇಟಿ ನೀಡಿದರು. ಬಿಜೆಪಿ ಕಾರ್ಯಕರ್ತ ಹುಲ್ಲಹಳ್ಳಿ ಶ್ರೀನಿವಾಸ್ ಅವರ ಆಹ್ವಾನದ ಮೇರೆಗೆ ಅವರ ಮನೆಗೆ ಬಂದಿದ್ದ ಅವರು ತೋರಿದ ಸಿಂಪಲ್ ನಡವಳಿಕೆಗಳು ಅವರ ಬಗ್ಗೆ ಇದ್ದ ಗೌರವವನ್ನು ಇನ್ನಷ್ಟು ಹೆಚ್ಚಿಸಿತು.
ಅವರು ಶ್ರೀನಿವಾಸ್ ಅವರ ಮನೆಯಲ್ಲಿ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಊಟ ಮಾಡಿದ್ದಲ್ಲದೆ, ಮನೆಗೆ ಬಂದ ಎಲ್ಲರ ಜತೆ ಯಾವುದೇ ಹಮ್ಮು ಬಿಮ್ಮಿಲ್ಲದೆ ಬೆರೆತರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿದರು.
ಜೈಶಂಕರ್ ಅವರು ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆಂದು ಬಂದಿದ್ದರು. ಹಾಗೆ ಬಂದಾಗ ತಮ್ಮ ಮನೆಗೇ ಬರಬೇಕು ಎಂದು ಶ್ರೀನಿವಾಸ್ ಅವರು ಸಂಘಟಕರಿಗೆ ಮನವಿ ಮಾಡಿದ್ದರು. ಜೈಶಂಕರ್ ಅವರು ಕೂಡಾ ಕಾರ್ಯಕರ್ತರೊಬ್ಬರ ಮನೆಗೆ ಹೋಗಲು ಬಯಸಿದ್ದರು. ಹಾಗಾಗಿ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯರಾಗಿರುವ ಶ್ರೀನಿವಾಸ್ ಅವರಿಗೆ ಸ್ವರ್ಗವೇ ಕೈಗೆ ಬಂದಂತಾಗಿತ್ತು.
ಶುಕ್ರವಾರ ಜೈಶಂಕರ್ ಅವರು ಊರಿಗೆ ಆಗಮಿಸುತ್ತಿದ್ದಂತೆಯೇ ಅವರನ್ನು ಊರಿನ ಜನರು ಮತ್ತು ಮನೆಯವರು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ಅವರಿಗೆ ಆರತಿ ಎತ್ತಿ ಕರೆಸಿಕೊಳ್ಳಲಾಯಿತು. ರಾಖಿ ಕಟ್ಟಿ ಆದರ ಭಾವ ತೋರಲಾಯಿತು. ಬಳಿಕ ಜೈಶಂಕರ್ ಅವರು ಗೋಪೂಜೆಯನ್ನೂ ನೆರವೇರಿಸಿ ಖುಷಿಪಟ್ಟರು.
ನೆಲದಲ್ಲೇ ಕುಳಿತು ಊಟ
ಎಲ್ಲರೊಂದಿಗೆ ನೆಲದಲ್ಲೇ ಕುಳಿತು ಊಟ ಮಾಡುತ್ತೇನೆ. ಸ್ಥಳೀಯವಾದ ಬಾಳೆ ಎಲೆ ಊಟವೇ ಇರಲಿ ಎಂಬ ಜೈಶಂಕರ್ ಕೋರಿಕೆಯಂತೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಜೈಶಂಕರ್ ಅವರು ಸಾಮಾನ್ಯ ವ್ಯಕ್ತಿಯಂತೆಯೇ ಬಂದು ಊಟಕ್ಕೆ ಚಕ್ಕಳಮಕ್ಕಳ ಕುಳಿತರು. ಪ್ರತಿಯೊಂದು ಆಹಾರವನ್ನೂ ಸವಿದು ಸವಿದು ತಿಂದರು. ಅದೇನು ಇದೇನು ಎಂದು ಕೇಳಿ ಖುಷಿಪಟ್ಟರು.
ಮೆನುವಿನಲ್ಲಿ ಏನೇನಿತ್ತು?
ಬೇಳೆ ಒಬ್ಬಟ್ಟು, ತುಪ್ಪ ಹಾಲು, ಬೆಲ್ಲದ ಪಾಯಸ, ಮುದ್ದೆ ಕಾಳು ಹುಳಿ, ಪುಲ್ಕಾ ಬೇಳೆ ಕುರ್ಮಾ, ಚಿತ್ರಾನ್ನ, ಚಟ್ನಿ, ಪುಳಿಯೋಗರೆ, ಮಸಾಲ ವಡೆ, ಹಪ್ಪಳ, ಉಪ್ಪಿನಕಾಯಿ, ಚಪ್ಪರ ಅವರೆಕಾಯಿ ಪಲ್ಯ, ಸೌತೆಕಾಯಿ ಕೋಸಂಬರಿ, ಅನ್ನ, ತಿಳಿ ಸಾರು, ಮೊಸರು, ಬಾಳೆ ಹಣ್ಣು ಇವೆಲ್ಲವೂ ಮೆನುವಿಲ್ಲಿದ್ದವು.
ಖುಷಿಯಾಯಿತು ಎಂದ ಜೈಶಂಕರ್
ಕಾರ್ಯಕರ್ತ ಶ್ರೀನಿವಾಸ್ ಅವರ ಕರೆಯ ಮೇರೆಗೆ ಮನೆಗೆ ಬಂದು ಅವರ ಜೊತೆ ಸಮಯ ಕಳೆದಿದ್ದು ಖುಷಿಯಾಗಿದೆ ಎಂದು ಜೈಶಂಕರ್ ಮಾಧ್ಯಮದ ಮುಂದೆ ಹೇಳಿದರು.
ವಿದೇಶಾಂಗ ಮಂತ್ರಿಯಾಗಿರುವ ನಾನು ಪ್ರಪಂಚ ಸುತ್ತುವುದು ಮಾತ್ರವಲ್ಲ, ಭಾರತದಲ್ಲೂ ಸುತ್ತಾಡುತ್ತೇನೆ. ಇಲ್ಲಿನ ವಿಚಾರಗಳನ್ನು ತಿಳಿದುಕೊಳ್ಳುವ, ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಭದ್ರತೆ ನೋ ಕಾಂಪ್ರಮೈಸ್
ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನೋ ಕಾಂಪ್ರಮೈಸ್ ಎಂದು ಹೇಳಿದ ಅವರು, ಮೋದಿ ಸರಕಾರದ ಧ್ಯೇಯವೇ ಇದು ಎಂದರು. ಜತೆಗೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಭದ್ರತೆ ಒದಗಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ಎಂದರು.
ಇದನ್ನೂ ಓದಿ| ಭಾರತಕ್ಕೆ ಸಮಸ್ಯೆ ಆದಾಗ ನೀವೆಲ್ಲಿದ್ದಿರಿ? ಯುರೋಪ್‌ಗೆ ಪಾಠ ಮಾಡಿದ ಜೈಶಂಕರ್