ಬೆಂಗಳೂರು: ಪ್ರಯಾಣಿಕರ ಸುರಕ್ಷತೆ ಹಾಗೂ ಅಪರಾಧಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮೋಟಾರ್ ವಾಹನ ಕಾಯಿದೆಗಳಿಗೆ ಕೇಂದ್ರ ಸರ್ಕಾರ ಕಾಲಕಾಲಕ್ಕೆ ಬದಲಾವಣೆ ತರುತ್ತಿದೆ. ಅಂತೆಯೇ ಇದೀಗ 2019ಕ್ಕಿಂತ ಹಿಂದೆ ಮಾರಾಟವಾಗಿರುವ ವಾಹನಗಳಿಗೆ ಹೊಸದಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸುವುದು ಕಡ್ಡಾಯವಾಗಿದೆ. ಇದೇ ವೇಳೆ ವಾಹನ ಚಲಾಯಿಸುವವರ ಮಾಹಿತಿಯು ಸುಲಭವಾಗಿ ದೊರೆಯುವಂತೆ ಮಾಡಲು ಮತ್ತು ಡ್ರೈವಿಂಗ್ ಲೈಸೆನ್ಸ್ನಲ್ಲಿ (Driving Licence) ಮಾಡಲಾಗುವ ಮೋಸವನ್ನು ತಪ್ಪಿಸಲು ಹೊಸ ಮಾದರಿಯ ಕಾರ್ಡನ್ನು ವಿತರಿಸಲು ಮುಂದಾಗಿದೆ. ಹೀಗಾಗಿ 2024ರಿಂದ ನೀಡಲಾಗುವ ಡಿಎಲ್ ಹಾಗೂ ಆರ್‌ಸಿ ಹಿಂದಿನಂತೆ ಇರುವುದಿಲ್ಲ. ಬದಲಾಗಿ ಕ್ಯೂ ಆರ್ ಕೋಡ್ನೊಂದಿಗೆ ಬರಲಿದೆ.
ನಮ್ಮ ಬಳಿ ಇರುವ ಲೈಸೆನ್ಸ್ ಹಾಗೂ ಆರ್ಸಿಗಳಲ್ಲಿ ಚಿಪ್ ಇರುವುದು ಎಲ್ಲರಿಗೂ ಗೊತ್ತಿದೆ. ಆದರೆ, ಅದನ್ನು ರೀಡ್ ಮಾಡಲು ವಿಶೇಷ ಸಾಧನವೇ ಬೇಕು. ಇಂಥ ಸಾಧನ ಇಲ್ಲದ ಪೊಲೀಸರಿಗೆ ಅದರ ಮಾಹಿತಿ ಪಡೆಯುವುದು ಸುಲಭವಲ್ಲ. ಹೀಗಾಗಿ ಕ್ಯೂ ಆರ್ ಕೋಡ್ ನಿಯಮ ಬರಲಿದೆ. ಮೊಬೈಲ್ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನರ್ ಬಳಸಿ ಮಾಹಿತಿಯನ್ನು ನೋಡಲು ಸಾಧ್ಯವಿದೆ. ಮೊದಲಾಗಿ ಇದರಿಂದ ನಕಲಿ ಲೈಸೆನ್ಸ್ ಹಾಗೂ ಆರ್ಸಿಗಳ ಹಾವಳಿ ಕೊನೆಯಾಗಲಿದೆ.
ಹೊಸ ಕಾರ್ಡ್ ಹೇಗಿರುತ್ತದೆ
ದೇಶಾದ್ಯಂತ ಒಂದೇ ಮಾದರಿಯ ಡಿಎಲ್ ಹಾಗೂ ಆರ್‌ಸಿ (ರಿಜಿಸ್ಟ್ರೇಷನ್ ಸರ್ಟಿಫಿಕೇಟ್) ಕಾರ್ಡ್‌ಗಳನ್ನು ವಿತರಿಸುವುದೇ ಇದರ ಮೂಲ ಉದ್ದೇಶ. ಎಲ್ಲಾ ರೀತಿಯ ಲೋಪಗಳ ನಿವಾರಣೆ ಸರ್ಕಾರದ ಯೋಜನೆಯಾಗಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೊಸ ಕಾರ್ಡ್ಗಳಿಗಾಗಿ ಒಂದಷ್ಟು ನಿಯಮಾವಳಿಗಳನ್ನು ರೂಪಿಸಿದೆ. ಅದರ ಪ್ರಕಾರವೇ ಹೊಸ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಹೊಸ ಡಿಎಲ್‌ನ ಮುಂಭಾಗದಲ್ಲಿ ಚಾಲಕನ ಹೆಸರು, ಫೋಟೋ, ಅಡ್ರೆಸ್, ಹುಟ್ಟಿದ ದಿನಾಂಕ, ಬ್ಲಡ್ ಗುಂಪು ಮತ್ತಿತರ ವಿವರಗಳು ಇರುತ್ತವೆ. ಹಿಂಭಾಗದಲ್ಲಿ ನಿಮ್ಮ ಮೊಬೈಲ್ ನಂಬರ್, ಯಾವೆಲ್ಲಾ ಮಾದರಿಯ ವಾಹನ ಚಲಾಯಿಸಲು ಅನುಮತಿ ಇದೆ ಎಂಬ ವಿವರ ಕೊಟ್ಟಿರಲಾಗುತ್ತದೆ. ಈ ವಿಷಯಗಳು ಚಿಪ್‌ಗಳಲ್ಲಿ ಇರುವ ಜೊತೆಯಲ್ಲೇ ಕ್ಯೂ ಆರ್ ಕೋಡ್‌ನಲ್ಲೂ ಇರಲಿದೆ. ಆದರೆ, ಅಪರಾಧಿಗಳು ಈ ಮಾಹಿತಿಯನ್ನು ತಿದ್ದಿ ಸಾಧನಗಳು ಇಲ್ಲದ ತನಿಖಾಧಿಕಾರಿಗಳಿಗೆ ಯಾಮಾರಿಸುತ್ತಾರೆ. ಹೀಗಾಗಿ ಕ್ಯೂಆರ್ ಕೋಡ್ ಕಡ್ಡಾಯ ಮಾಡಲಾಗಿದೆ.
ಹೊಸ ಮಾದರಿಯ ಕಾರ್ಡ್‌ಗಳಲ್ಲಿ ಕ್ಯೂ ಆರ್ ಕೋಡ್ ಪ್ರಮುಖ ಹೈಲೈಟ್ಸ್. ವಾಹನದ ದೃಢೀಕರಣ ಹಾಗೂ ವಾಹನ ಮಾಲೀಕರ ಮಾಹಿತಿಯನ್ನು ತಕ್ಷಣ ಪಡೆಯಲು ಈ ಕ್ಯು ಆರ್ ಕೋಡ್ ನೆರವಾಗಲಿದೆ. ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ಎಲ್ಲ ಮಾಹಿತಿ ತಕ್ಷಣದಲ್ಲೇ ಲಭ್ಯವಾಗುತ್ತದೆ.
ಎಲ್ಲರೂ ಮಾಡಿಸಬೇಕಾ?
ಸದ್ಯ ಎಲ್ಲ ವಾಹನ ಚಾಲಕರ ಬಳಿಯಲ್ಲೂ ಸ್ಮಾರ್ಟ್ ಕಾರ್ಡ್ ಇದೆ. ಆರ್‌ಸಿ ಸ್ಮಾರ್ಟ್ ಕಾರ್ಡ್ ಕೂಡಾ ಇರುತ್ತದೆ. ಹೊಸ ಪದ್ದತಿ ಜಾರಿಗೆ ಬಂದ ಕೂಡಲೇ ಎಲ್ಲರೂ ಹೊಸದಾಗಿ ಮತ್ತೊಮ್ಮೆ ಕಾರ್ಡ್ ಮಾಡಿಸಬೇಕಾ? ಬೇಡ. ಮುಂದಿನ ವರ್ಷ ಅಂದರೆ 2024ರ ಫೆಬ್ರವರಿ ನಂತರ ನೀಡುವ ಹೊಸ ಕಾರ್ಡ್‌ಗಳಲ್ಲಿ ಮಾತ್ರ ಕ್ಯೂ ಆರ್ ಕೋಡ್ ಅಳವಡಿಕೆ ಮಾಡಲಾಗುತ್ತದೆ. ಬಳಕೆಯಲ್ಲಿ ಇರುವ ಕಾರ್ಡ್‌ಗಳನ್ನ ಬದಲಾವಣೆ ಬೇಕಿಲ್ಲ. ಮುಂದೆ ನವೀಕರಣ ಮಾಡುವ ವೇಳೆ ಕ್ಯೂಆರ್ ಕೋಡ್ ಹಾಕಿ ಕೊಡುತ್ತಾರೆ.
ಸದ್ಯ ಚಿಪ್ ಅಳವಡಿಕೆ ಮಾಡಿರುವ ಸ್ಮಾರ್ಟ್ ಕಾರ್ಡ್‌ಗಳನ್ನ ಸಾರಿಗೆ ಇಲಾಖೆ ವಿತರಣೆ ಮಾಡ್ತಿದೆ. ಇದಕ್ಕಾಗಿ ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿತ್ತು. ಈ ಗುತ್ತಿಗೆ ಅವಧಿ 2024ರ ಫೆಬ್ರವರಿಗೆ ಅಂತ್ಯ ಆಗಲಿದೆ. ಆ ಬಳಿಕ ಹೊಸ ಗುತ್ತಿಗೆ ಶುರುವಾಗಲಿದ್ದು, ಹೊಸ ಸಂಸ್ಥೆ ನೀಡುವ ಸ್ಮಾರ್ಟ್ ಕಾರ್ಡ್‌ಗಳಲ್ಲಿ ಕ್ಯೂ ಆರ್ ಕೋಡ್ ಇರಲಿದೆ.
ಪ್ರಯೋಜನ ಏನು?
2009ಕ್ಕೂ ಮೊದಲು ಡಿಎಲ್ ಹಾಗೂ ಆರ್‌ಸಿ ಕೊಡುವಾಗ ಕಾಗದದ ರೂಪದಲ್ಲಿ ಕೊಡಲಾಗುತ್ತಿತ್ತು. ನಂತರ ಡಿಎಲ್ ಹಾಗೂ ಆರ್‌ಸಿ ಸ್ಮಾರ್ಟ್ ಕಾರ್ಡ್ ರೂಪಕ್ಕೆ ಬದಲಾಯ್ತು. ಸ್ಮಾರ್ಟ್ ಕಾರ್ಡ್‌ಗಳು ಜಾರಿಗೆ ಬಂದರೂ ಕೂಡಾ ಪೊಲೀಸರು ಅಥವಾ ಸಾರಿಗೆ ಇಲಾಖೆ ಅಧಿಕಾರಿಗಳು ಈ ಕಾರ್ಡ್ ಪರಿಶೀಲನೆ ಮಾಡೋಕೆ ಸಾಧ್ಯ ಆಗ್ತಿರಲಿಲ್ಲ. ಯಾಕಂದ್ರೆ, ಸ್ಮಾರ್ಟ್ ಕಾರ್ಡ್‌ನಲ್ಲಿ ಇರುವ ಚಿಪ್ ಪರಿಶೀಲನೆ ಮಾಡೋಕೆ ಸಾಧನಗಳೇ ಇರಲಿಲ್ಲ.
ಇದನ್ನೂ ಓದಿ : Ayodhya Ram Mandir: ಡಿ.30ರಂದು ಪ್ರಧಾನಿಯಿಂದ ಅಯೋಧ್ಯೆ ವಿಮಾನ ನಿಲ್ದಾಣ, ರೈಲು ನಿಲ್ದಾಣ ಉದ್ಘಾಟನೆ, ರೋಡ್ ಶೋ
2020ರ ನಂತರ ಡಿಜಿಲಾಕರ್ ಮತ್ತು ಎಂ ಪರಿವಾಹನ್ ಮೊಬೈಲ್ ಆ್ಯಪ್ಗಳು ಬಂದವು. ಅಲ್ಲಿ ಡಿಎಲ್ ಹಾಗೂ ಆರ್‌ಸಿ ಮಾಹಿತಿಯನ್ನ ಅಪ್‌ಡೇಟ್ ಮಾಡಬಹುದು. ಇಲ್ಲಿ ಕ್ಯೂಆರ್ ಕೂಡ ಇರುತ್ತದೆ.
ಹೊಸ ಕಾರ್ಡ್ ಅನಿವಾರ್ಯ
2024ರಿಂದ ಫೆಬ್ರವರಿಯಲ್ಲಿ ಕಾರ್ಡ್‌ಗಳು ಮತ್ತಷ್ಟು ಅಪ್‌ಡೇಟ್ ಆಗಲಿವೆ. ಪೊಲೀಸರು ಹಾಗೂ ಆರ್‌ಟಿಒ ಸಿಬ್ಬಂದಿ ತಪಾಸಣೆ ಮಾಡುವ ವೇಳೆ ಹೊಸ ಮಾದರಿಯ ಸ್ಮಾರ್ಟ್ ಕಾರ್ಡ್‌ನಲ್ಲಿ ಇರುವ ಕ್ಯು ಆರ್ ಕೋಡ್ ಅನ್ನು ತಮ್ಮ ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದ ಕೂಡಲೇ ಅವರಿಗೆ ಬೇಕಾದ ಎಲ್ಲಾ ಮಾಹಿತಿ ದೊರೆಯುತ್ತದೆ. ಸ್ಮಾರ್ಟ್ ಕಾರ್ಡ್‌ಗಳನ್ನು ನಿರಂತರವಾಗಿ ಬಳಸಿದಾಗ ಮಾಹಿತಿ ಅಳಿಸಿ ಹೋಗುತ್ತದೆ. ಅದಕ್ಕೆ ಪಿವಿಸಿ ಕಾರ್ಡ್ ಕಾರಣ. ಮುಂದಿನ ವರ್ಷದಿಂದ ಕೊಡುವ ಕಾರ್ಡ್‌ಗಳನ್ನು ಪಾಲಿ ಕಾರ್ಬೊನೇಟ್‌ನಿಂದ ತಯಾರು ಮಾಡಲಾಗುತ್ತದೆ. ಈ ಕಾರ್ಡ್‌ಗಳು ಮುರಿಯೋದಿಲ್ಲ. ಜೊತೆಗೆ ಅಕ್ಷರಗಳೂ ಕೂಡಾ ಅಳಿಸಿ ಹೋಗೋದಿಲ್ಲ.