ಬೆಂಗಳೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಆಪರೇಷನ್ ಹಸ್ತದ (Operation Hasta) ಮೂಲಕ ವಿವಿಧ ಪಕ್ಷಗಳಿಂದ ಪ್ರಬಲ ನಾಯಕರನ್ನು ಪಕ್ಷಕ್ಕೆ ಕರೆತಲು ಪ್ಲ್ಯಾನ್ ಮಾಡಿಕೊಂಡಿದೆ. ಈ ನಡುವೆ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಬೆಂಬಲಿಗರು ಸೇರಿ ವಿವಿಧ ಪಕ್ಷಗಳ ಮುಖಂಡರು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿ ಇಂದಿರಾ ಗಾಂಧಿ ಭವನದ ಭಾರತ್ ಜೋಡೊ ಸಂಭಾಂಗಣದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಜನರ ಆಶೀರ್ವಾದದಿಂದ ಕಾಂಗ್ರೆಸ್‌ಗೆ 136 ಸ್ಥಾನ ಸಿಕ್ಕಿದೆ. ಚುನಾವಣೆಗೆ ಮುನ್ನ ಇಷ್ಟು ಸೀಟ್ ಬರುತ್ತದೆ ಎಂದು ನಾನು ಮೊದಲೇ ಹೇಳಿದ್ದೆ. ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಳ್ಳಬೇಡ ಎಂದು ಚುನಾವಣೆ ಸಮಯದಲ್ಲಿ ಎಸ್.ಟಿ. ಸೋಮಶೇಖರ್‌ಗೆ ಹೇಳಿದ್ದೆ. ಈಗ ಸಿಎಂ ಭೇಟಿಯಾಗಿ ಕ್ಷೇತ್ರದ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನನ್ನ ಬಳಿಯೂ ಮಾತನಾಡಿದ್ದಾರೆ. ನಿಮ್ಮ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೇಳಿದ್ದೇನೆ ಎಂದು ಹೇಳಿದರು.
ನೀವೆಲ್ಲಾ ಕಾಂಗ್ರೆಸ್ ಪಕ್ಷದ ದೇವಸ್ಥಾನಕ್ಕೆ ಬಂದಿದ್ದೀರಿ, ಒಬ್ಬೊಬ್ಬರು 10 ಜನರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿ, ದೊಡ್ಡ ದೊಡ್ಡವರ ಕಥೆ ನಾನು ನೋಡಿಕೊಳ್ಳುತ್ತೇನೆ ಎಂದ ಅವರು, ಸೋಮಶೇಖರ್ ಮತ್ತು ನಾನು ಸ್ನೇಹಿತರು. ಅವರು ಪಕ್ಷಕ್ಕ ಬರುವುದು ಅವರಿಗೆ ಬಿಟ್ಟಿದ್ದು, ವಿರೋಧ ಪಕ್ಷದವರು ಏನೋ ಒಂದು ಹೇಳುತ್ತಿರುತ್ತಾರೆ. ಏನು ಮಾತನಾಡುತ್ತಾರೋ ಮಾತನಾಡಲಿ. ಅವರ ಬಾಯಿಗೆ ಬೀಗ ಇಲ್ಲ. ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಾನು ತಪ್ಪು ಮಾಡಲ್ಲಾ, ರಾಜ್ಯದ ಅಭಿವೃದ್ಧಿಗೆ ಹೋರಾಟ ಮಾಡುತ್ತೇನೆ. ಎಲ್ಲರೂ ಹೆಚ್ಚಿನ ಜನರನ್ನು ಪಕ್ಷ ಸೇರ್ಪಡೆ ಮಾಡಿಸಲು ಒತ್ತು ಕೊಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ | Education Policy : ರಾಜ್ಯದಲ್ಲಿ NEP ರದ್ದು; ಹೊಸ ರಾಜ್ಯ ಶಿಕ್ಷಣ ನೀತಿ CBSE, ICSEಗೆ ಅನ್ವಯ ಆಗುತ್ತಾ?
ಇತ್ತೀಚೆಗೆ ಮುನಿರತ್ನ ಹಾಗೂ ಗೋಪಾಲಯ್ಯ ಪ್ರೆಸ್ ಮೀಟ್ ಮಾಡುತ್ತಿದ್ದರು. ಅಶೋಕ್ ಅವರಿಬ್ಬರ ಹೆಗಲ ಮೇಲೆ ಕೈ ಹಾಕಿ ಭಾಷಣ ಮಾಡಿಸುತ್ತಿದ್ದ. ಆದರೆ, ಇದೇ ಮುನಿರತ್ನ, ಗೋಪಾಲಯ್ಯ, ಸೋಮಶೇಖರ್ ಅವರೇ ಈ ಹಿಂದೆ ಸರ್ಕಾರಿ ಕ್ಯಾಂಟೀನ್‌ಗಳಿಗೆ ಇಂದಿರಾ ಕ್ಯಾಂಟೀನ್ ಅಂತ ಹೆಸರು ಇಡಬೇಕು ಅಂತ ಸಹಿ ಸಂಗ್ರಹ ಮಾಡಿದರು. ಮನೆಗಳಿಗೆ ಕಾಂಗ್ರೆಸ್ ಬಾವುಟದ ಕಲರ್ ಹೊಡೆಸಿದರು. ಈಗ ನೋಡಿ ಎಲ್ಲಾ ಕೇಸರಿ ಬಣ್ಣ ಹೊಡೆಸಿದ್ದಾರೆ.
ಬೀರಬಲ್ಲನ ಕಥೆ ಹೇಳಿದ ಡಿಕೆಶಿ
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅವರು ಬೀರಬಲ್ಲನ ಕತೆ ಹೇಳಿದರು. ಅಕ್ಬರ್ ಪದೇಪದೆ ಬೀರಬಲ್ಲನನ್ನು ಕರೆಯುತ್ತಿದ್ದ. ಅದಕ್ಕೆ ಬೇರೆ ಮಂತ್ರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಆಗ ಅಕ್ಬರ್ ಅಂಗೈಯಲ್ಲಿ ಯಾಕೆ ಕೂದಲು ಬೆಳೆದಿಲ್ಲ ಎಂದು ಕೇಳಿದರಂತೆ? ಇದಕ್ಕೆ ಒಬ್ಬರಿಗೊಬ್ಬರು ಮುಖ ನೋಡಿಕೊಂಡರಂತೆ. ಸ್ವಾಮಿ ನೀವು ದಾನ ಕೊಟ್ಟು ಕೊಟ್ಟು ಅಂಗೈ ಸವಿದು ಹೋಗಿದೆ ಸ್ವಾಮಿ ಎಂದದು ಬೀರಬಲ್ ಹೇಳಿದನಂತೆ.
ಆಗ ನಿನ್ನ ಕೈಯಲ್ಲಿ ಯಾಕೆ ಬೆಳೆದಿಲ್ಲ ಎಂದು ಅಕ್ಬರ್ ಕೇಳಿದ. ಆಗ ನಾನು ದಾನ ಇಸ್ಕೊಂಡು ಕೂದಲು ಸವಿದು ಹೋಗಿದೆ ಎಂದು ಬೀರಬಲ್ ಹೇಳಿದ. ಹಾಗಾದರೆ ಅಲ್ಲಿ ಕೂತವರ ಅಂಗೈಯಲ್ಲಿ ಯಾಕಿಲ್ಲ ಎಂದು ಅಕ್ಬರ್ ಕೇಳಿದ. ಆಗಲೂ ಬೇರೆಯವರು ಮುಖ ಮುಖ ನೋಡಿಕೊಳ್ಳುತ್ತಿದ್ದರು. ಈ ವೇಳೆ ನನಗೆ ಸಿಕ್ಕಿಲ್ಲವಲ್ಲ ಎಂದು ಕೈ ಹಿಸುಕಿಕೊಂಡು ಕೂದಲು ಸವಿದು ಹೋಗಿದೆ ಸ್ವಾಮಿ ಎಂದು ಬೀರಬಲ್ ಹೇಳಿದ ಎಂದು ಹೇಳುವ ಮೂಲಕ ನವರಂಗಿ ನಾರಾಯಣ, ಅಶೋಕ್, ಮುನಿರತ್ನ ಈಗ ಕೈ ಹಿಸುಕಿಕೊಳ್ತಾ ಇದ್ದಾರೆ, ಬಿಜೆಪಿ ಹಾಗೂ ಜೆಡಿಎಸ್ ಕೈ ಪರಿಚಿಕೊಳ್ತಾ ಇದ್ದಾರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.
ಕಾಂಗ್ರೆಸ್‌ಗೆ ಬರುವಂತೆ ಎಸ್.ಟಿ.ಸೋಮಶೇಖರ್‌ಗೆ ಆಹ್ವಾನ
ಮಾಜಿ ಪಾಲಿಕೆ ಸದಸ್ಯ ರಾಜಣ್ಣ ಮಾತನಾಡಿ, ಶಾಸಕ ಸೋಮಶೇಖರ್‌ಗೆ ಬಿಜೆಪಿಯಲ್ಲಿ ಇಲ್ಲಸಲ್ಲದ ಕಾಟ ಕೊಡುತ್ತಿದ್ದಾರೆ. ಹೀಗಾಗಿ ಸೋಮಶೇಖರ್ ಅವರು ಆದಷ್ಟು ಬೇಗ ಕಾಂಗ್ರೆಸ್‌ಗೆ ಬರಬೇಕು ಎಂದು ವೇದಿಕೆ ಮೇಲೆ ಸೋಮಶೇಖರ್‌ಗೆ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ನೀಡಿದರು.
ಆನೇಕಲ್ ಶಾಸಕ ಶಿವಣ್ಣ ಮಾತನಾಡಿ, ನಾನು ಮತ್ತು ಎಸ್‌ಟಿ ಸೋಮಶೇಖರ್ ಒಂದೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದೆವು. 2004ರಲ್ಲಿ ನಮಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ನಾವು ಎನ್‌ಎಸ್‌ಯುಐನಿಂದ ಬಂದವರು. ಎರಡು ಬಾರಿ ಸೋತರೂ ಮತ್ತೆ ಟಿಕೆಟ್ ನೀಡಿತ್ತು. ಇದರರ್ಥ ಕಾಂಗ್ರೆಸ್ ನಮ್ಮ ಕೈಬಿಡಲ್ಲ ಎಂದು ಅರಿವಾಯಿತು. ನಮ್ಮ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ನೀಡಲಾಗಿತ್ತು. ಕೆಲವೊಂದು ಕಾರಣಗಳಿಂದ ಸೋಮಶೇಖರ್ ಬಿಜೆಪಿಗೆ ಹೋಗಿದ್ದಾರೆ. ಅವರು ಹೋದರೂ ನಾನು ಕಾಂಗ್ರೆಸ್ ಬಿಟ್ಟು ಹೋಗಿಲ್ಲ ಎಂದರು.
ಇದನ್ನೂ ಓದಿ | BBMP Flex : ಅನಧಿಕೃತ ಫ್ಲೆಕ್ಸ್ ಅಳವಡಿಕೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ 50 ಸಾವಿರ ರೂ. ದಂಡ
ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಯಶವಂತಪುರ ಕ್ಷೇತ್ರ ಸೇರಿ ವಿವಿಧ ಕ್ಷೇತ್ರ, ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರ್ಪಡೆತಯಾದರು. ಎಸ್.ಟಿ ಸೋಮಶೇಖರ್ ಬೆಂಬಲಿಗರು, ಮಾಜಿ ಜಿಪಂ ತಾಪಂ ಸದಸ್ಯರು, ಹಾಲಿ ಗ್ರಾಮ ಪಂಚಾಯಿತಿ ಸದಸ್ಯರು, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಆರ್ಯ ಶ್ರೀನಿವಾಸ್, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರಾಜಣ್ಣ, ಮಾಜಿ ಜಿಪಂ ಸದಸ್ಯ ಶಿವಮಾದಯ್ಯ, ಮಾಜಿ ಜಿಪಂ ಸದಸ್ಯ ಹನುಮಂತೇಗೌಡ ಸೇರಿ ಹಲವರು ಕಾಂಗ್ರೆಸ್ ಸೇರ್ಪಡೆಯಾದರು.