ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ʼಆಪರೇಷನ್ ಹಸ್ತʼ (Operation Hasta) ಆರಂಭಿಸಿದೆ. ಈಗಾಗಲೇ ಹಲವು ನಾಯಕರು, ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೀಗ ಹಿರಿಯೂರು ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಬಿಜೆಪಿ ತೊರೆದು, ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದೆ.
ಸಿಎಂ ಸಿದ್ದರಾಮಯ್ಯ ಅವರನ್ನು ಭಾನುವಾರ ಭೇಟಿಯಾಗಿ ಅವರು ಚರ್ಚೆ ನಡೆಸಿದ್ದು, ಅ.20 ರಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಸಿಎಂ ಜತೆಗೆ ಚರ್ಚೆ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಸಿ. ಸುಧಾಕರ್, ಬೈರತಿ ಸುರೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ | V Somanna: ಬಿಜೆಪಿಗೆ ಬಂದ್ಮೇಲೆ 4 ಬಾರಿ ಸೋತೆ, ಅದಕ್ಕೂ ಮುಂಚೆ ಸೋತೇ ಇರಲಿಲ್ಲ: ಮಾಜಿ ಸಚಿವ ವಿ.ಸೋಮಣ್ಣ ಬೇಸರ
ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರು ಮಾಜಿ ಶಾಸಕಿ ನಿವಾಸಕ್ಕೆ ಭೇಟಿ ನೀಡಿದ್ದಾಗ, ಆ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದರು. ಇದೀಗ ಅವರು ಬಿಜೆಪಿ ತೊರೆಯುವುದು ಬಹುತೇಕ ಖಚಿತವಾಗಿದ್ದು, ಈ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಲೋಕಸಭಾ ಚುನಾವಣೆ ಗೆಲ್ಲಲು ಆಪರೇಷನ್ ಹಸ್ತಕ್ಕೆ ಕೈ ಹಾಕುತ್ತಿದ್ದಂತೆ ಹಲವು ರೀತಿಯಲ್ಲಿ ಲೆಕ್ಕಾಚಾರಗಳನ್ನು ಕಾಂಗ್ರೆಸ್ ಹಾಕಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಿಕ್ಕ ಸಿಕ್ಕವರಿಗೆ ಕಾಂಗ್ರೆಸ್ ಪಡೆ ಗಾಳ ಹಾಕುತ್ತಿಲ್ಲ. ಕ್ಷೇತ್ರದ ಮಾಸ್ ಲೀಡರ್‌ಗಳನ್ನು ನೋಡಿ ಟಾರ್ಗೆಟ್ ಮಾಡುತ್ತಿದೆ. ಈ ಎಲ್ಲದರ ಹಿಂದೆ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ವರ್ಕ್ ಆಗುತ್ತಿದೆ. ಇನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿದವರನ್ನು ನೋಡಲಾಗುತ್ತಿದೆ. ಅಂದರೆ, ಯಾವ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಇಲ್ಲವೋ ಅಂತಹ ಕ್ಷೇತ್ರಗಳಲ್ಲಿ ಹೆಚ್ಚು ಆಪರೇಷನ್ ಹಸ್ತ ನಡೆಸುವುದು. ಆಗ ವೈಯಕ್ತಿಕ ವರ್ಚಸ್ಸು ಹೊಂದಿದವರು ಪಕ್ಷಕ್ಕೆ ಸೇರ್ಪಡೆಯಾದರೆ ಲಾಭ ಆಗುತ್ತದೆ.
ಒಂದೆಡೆ ಪಕ್ಷದ ವರ್ಚಸ್ಸು, ಮತ್ತೊಂದೆಡೆ ವೈಯಕ್ತಿಕ ವರ್ಚಸ್ಸು ಸೇರಿದಾಗ ಲೋಕಸಭೆಯಲ್ಲಿ ಗೆಲುವಿನ ಹಾದಿಯನ್ನು ಸುಗಮ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ಹೊಂದಿದೆ. ಹೀಗಾಗಿ ಹಾಲಿ ಶಾಸಕರ ಜತೆ ಜತೆಗೆ ಮಾಜಿಗಳಿಗೂ ಗಾಳ ಹಾಕಲಾಗಿದೆ. ಹೀಗಾಗಿ ಪೂರ್ಣಿಮಾ ಶ್ರೀನಿವಾಸ್ ಜತೆ ಈ ಹಿಂದೆಯೇ ಸ್ಥಳೀಯ ಕಾಂಗ್ರೆಸ್ ನಾಯಕರ ಮೂಲಕ ಮಾತುಕತೆ ನಡೆಸಿ, ಪಕ್ಷಕ್ಕೆ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ.