ಬೆಂಗಳೂರು: ತಾಕತ್ತು ಇದ್ದರೆ ಸಚಿವ ಡಾ. ಸಿ.ಎನ್ಅ. ಶ್ವತ್ಥನಾರಾಯಣ ನನ್ನ ವಿರುದ್ಧ ದಾಖಲೆ ಬಿಡುಗಡೆ ಮಾಡಲಿ ಎಂಬ ಹೇಳಿಕೆ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇರ ಸವಾಲು ಹಾಕಿದ್ದಾರೆ.
ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ʼಜನತಾ ಜಲಧಾರೆʼ ಕಾರ್ಯಕ್ರಮದ ವೇಳೆ ಗವಿಗಂಗಾಧರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ನಾನು ಸಮ್ಮಿಶ್ರ ಸರ್ಕಾರದಲ್ಲಿ ಅವರ ರೀತಿ ಲೂಟಿ ಹೊಡೆದಿಲ್ಲ. ಲೂಟಿ ಮಾಡುತ್ತಿರುವವರು ಅವರು. ಅವರಿಗೆ ತಾಕತ್ತು ಇದ್ದರೆ ನಾಳೆ ಬೆಳಗ್ಗೆಯೇ ನನ್ನ ವಿರುದ್ಧದ ದಾಖಲೆ ಬಿಡುಗಡೆ ಮಾಡಲಿ ಸವಾಲು ಹಾಕಿದರು.
ಇದನ್ನೂ ಓದಿ : ಕೋಡಿಮಠ ಸ್ವಾಮೀಜಿ, ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲ ಒಂದೆ: ಯಾರ ಮಾತೂ ಗಂಭೀರವಲ್ಲ ಎಂದ ಪ್ರತಾಪ್ ಸಿಂಹ
“ಪ್ರಾಧ್ಯಾಪಕರ ನೇಮಕಾತಿಯಲ್ಲಿ ₹450 ಕೋಟಿ ಅಕ್ರಮ ಆಗಿದೆ. ನೀವು ನನ್ನ ಬಗ್ಗೆ ಮಾತನಾಡಿದರೆ ಹುಷಾರ್. ನನ್ನ ಬಳಿ ಇರುವ ದಾಖಲೆಗಳು ನಿಮ್ಮ ಬಳಿಯೂ ಇಲ್ಲ. ಮಾತನಾಡುವ ಮುನ್ನ ಎಚ್ಚರಿಕೆಯಿಂದ ಮಾತನಾಡಿ” ಎಂದು ಸಚಿವರಿಗೆ ಮಾಜಿ ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.
ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಎಚ್‌ಡಿಕೆ, ಧರ್ಮದ ಹೆಸರಿನಲ್ಲಿ ನಿಮ್ಮನ್ನು ದಾರಿ ತಪ್ಪಿಸಲಾಗುತ್ತಿದೆ. ನಿಮಗೆ ಧರ್ಮ ಬೇಕಾ? ಜೀವನ ಬೇಕಾ? ಧರ್ಮವನ್ನು ಮನೆಯಲ್ಲಿ ಇಟ್ಟುಕೊಳ್ಳೋಣ. ಬೀದಿಯಲ್ಲಿ ರಕ್ತದ ಓಕುಳಿ ಹರಿಸುವುದು ಬೇಡ.
ಸಮಾಜದಲ್ಲಿ ಆಗುವ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಡಬೇಕೇ ಹೊರತು ಸಮಾಜವನ್ನು ಒಡೆಯಲು ಅಲ್ಲ ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು. ಇಂಥ ಸಮಸ್ಯೆಗಳನ್ನು ಗಮನಿಸಿಯೇ ನಾನು ಪಂಚತಂತ್ರ ಕಾರ್ಯಕ್ರಮಗಳಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಯ ಬಗ್ಗೆ ಕಾರ್ಯಕ್ರಮ ರೂಪಿಸಿದ್ದೇನೆ. ಕೂಡಲೇ ಆ ಶಾಲೆಯ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದರು.
ಕೇಂದ್ರದ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ :
ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರೂ ಕೇಂದ್ರದ ನಿರ್ಲಕ್ಷ್ಯ ಧೋರಣೆಯಿಂದಾಗಿ ನಮ್ಮ ನೀರು ನಾವು ಪಡೆಯಲು ಆಗಲಿಲ್ಲ. ಭವಿಷ್ಯದಲ್ಲಿ ನೀರು ಪೂರೈಕೆ ಬಹಳ ಕಷ್ಟವಾಗಲಿದೆ. ಈಗಲೇ ನಾವು ಸಮಸ್ಯೆ ಪರಿಹರಿಸಿಕೊಳ್ಳದಿದ್ದರೆ ಮುಂದೆ ನೀರಿನ ಹಾಹಾಕಾರ ಎದುರಿಸಬೇಕಾಗಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್. ಡಿ. ದೇವೇಗೌಡರ ಕಳವಳ ವ್ಯಕ್ತ ಪಡಿಸಿದರು.
ರಾಜ್ಯದಿಂದ 25 ನಪುಂಸಕರ ಆಯ್ಕೆ:
ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, “ರಾಜ್ಯದಿಂದ ಲೋಕಸಭೆಗೆ ಇಪ್ಪತ್ತೈದು ಜನ ನಪುಂಸಕರನ್ನು ಆರಿಸಿ ಕಳಿಸಿದ್ದೀರಾ. ಅವರೆಲ್ಲಾ ಏನು ಮಾಡುತ್ತಿದಾರೆ? ಮೋದಿ ಮೋದಿ ಅಂತಾ ದಿನವಿಡೀ ಜಪ ಮಾಡುತ್ತಾ ಇದ್ದಾರೆ” ಎಂದು ವ್ಯಂಗ್ಯವಾಡಿದರು. ನಾವು ಪುಣ್ಯಕ್ಷೇತ್ರಗಳಿಂದ ನೀರು ತಂದಿದ್ದೇವೆ. ಇದಕ್ಕಿಂತ ಹಿಂದುತ್ವ ಏನು ಬೇಕು? ದೇವೇಗೌಡರು ಇದ್ದಾಗ ಎಲ್ಲಾ ಲಕ್ಷ್ಮಿಯರು ಇದ್ದರು. ಈಗ ಕೇವಲ ದರಿದ್ರ ಲಕ್ಷ್ಮಿ ಮಾತ್ರಾ ಇದಾಳೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : JDS ಜನತಾ ಜಲಧಾರೆಗೆ ಮೇ 13ರಂದು ತೆರೆ: ಬೆಂಗಳೂರಿನಲ್ಲಿ 5 ಲಕ್ಷ ಜನರ ಸಮಾವೇಶ