ಶಿವಮೊಗ್ಗ: ʻರಾಜ್ಯದಲ್ಲಿ ಈ ಹಿಂದೆ ಅಮಿತ್ ಶಾ ನೇತೃತ್ವದಲ್ಲಿಯೇ ಶಾಸಕರ ಖರೀದಿ ನಡೆದಿತ್ತು. ಅಂದಿನ ಪರಿಸ್ಥಿತಿ ದುರುಪಯೋಗ ಕೆಲ ಕಾಂಗ್ರೆಸ್ಸಿಗರ ಸಹಕಾರದಲ್ಲಿಯೇ ನಡೆದಿತ್ತು. ಅಂದು ಕರ್ನಾಟಕ ಟು ಮುಂಬೈ, ಇವತ್ತು ಮುಂಬೈನಿಂದ ಸೂರತ್, ಅಲ್ಲಿಂದ ಗುವಾಹಟಿ. ಅಷ್ಟೇ ವ್ಯತ್ಯಾಸ ಇರೋದುʼ ಎಂದು ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರ ಬಂಡಾಯದ ಬಗ್ಗೆ ಮಾಜಿ ಸಿ.ಎಂ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾವು ಶಾಂತಿಪ್ರಿಯರು. ಹೀಗಾಗಿ ಅಂದು ಯಾವುದೇ ಗಲಾಟೆಗೆ ಆಸ್ಪದ ಕೊಟ್ಟಿರಲಿಲ್ಲ. ರಾಜ್ಯದಲ್ಲಿ ಅಂದು ಸರ್ಕಾರ ಮಾಡಲೇಬೇಕೆಂದು ಏಳೆಂಟು ತಿಂಗಳಿಂದ ಪರಿಶ್ರಮ ಪಟ್ಟು ಬಿಜೆಪಿಯವರು ಯಶಸ್ಸು ಕಂಡಿದ್ದರು. ಮುಂಬೈನಲ್ಲೂ ಕಳೆದ ಒಂದೂವರೆ ತಿಂಗಳಿಂದ ಪ್ರಯತ್ನ ನಡೆಯುತ್ತಲೇ ಇತ್ತು. ಆದರೆ ಕರ್ನಾಟಕದ ಪರಿಸ್ಥಿತಿಯೇ ಬೇರೆ, ಮಹಾರಾಷ್ಟ್ರದ ಪರಿಸ್ಥಿತಿಯೇ ಬೇರೆ, ಈಗಾಗಲೇ ಶಿವಸೇನೆಯ ಕಾರ್ಯಕರ್ತರು ಗಲಾಟೆ, ಗದ್ದಲ ಆರಂಭಿಸಿದ್ದಾರೆ. ಅದು ಎಲ್ಲಿಯವರೆಗೆ ಹೋಗುತ್ತೋ ಗೊತ್ತಿಲ್ಲ. ದೇಶಕ್ಕೇ ಉಪದೇಶ ಮಾಡುವ ಬಿಜೆಪಿ ನಾಯಕರು, ಅದನ್ನು ಪೋಷಿಸುವ ಸಂಘ ಸಂಸ್ಥೆಗಳ ಮುಖಂಡರು ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಿ ಅವರೇ ಅಧಿಕಾರ ಹಿಡಿಯಬೇಕೆಂಬ ತೀರ್ಮಾನ ಮಾಡಿದ್ದಾರೆ. ಇದು 2008ರಲ್ಲಿಯೇ ಕರ್ನಾಟಕದಿಂದ ಆರಂಭವಾಗಿತ್ತು, ಇದೀಗ ದೇಶಾದ್ಯಂತ ವ್ಯಾಪಿಸಿದೆ ಎಂದರು.
ಇದನ್ನೂ ಓದಿ | Bypoll Results: ಅಖಿಲೇಶ್ ಯಾದವ್ ಪಕ್ಷದ ಕೈಯಲ್ಲಿದ್ದ ಎರಡೂ ಲೋಕಸಭಾ ಕ್ಷೇತ್ರಗಳು ಬಿಜೆಪಿ ಮಡಿಲಿಗೆ
ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ : ಈಶ್ವರಪ್ಪ ಹೇಳಿಕೆ
ರಾಜ್ಯದಲ್ಲಿ ಒಂದೇ ಸಿಎಂ ಕುರ್ಚಿ ಇರುವುದು. ಮುಂದಿನ ದಿನಗಳಲ್ಲಿ ನಾವೇ ಅಧಿಕಾರ ಹಿಡಿಯುತ್ತೇವೆ. ಮುಖ್ಯಮಂತ್ರಿ ಆಗುವುದು ಮಾತ್ರ ಬಿಜೆಪಿಯವರೇ. ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಈಶ್ವರಪ್ಪ ಮುಖ್ಯಮಂತ್ರಿ ಆಗಲು ಪ್ರಯತ್ನಿಸುತ್ತಿದ್ದಾರೆ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ನಗರದಲ್ಲಿ ಭಾನುವಾರ ಪ್ರತಿಕ್ರಿಯಿಸಿದರು. ಬಿಜೆಪಿಯವರಿಗೆ ಬೇರೆ ಪಕ್ಷದವರು ಅಧಿಕಾರದಲ್ಲಿ ಇರುವುದು ಇಷ್ಟವಿಲ್ಲ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ನಿಮ್ಮ ಮನೆ ಮಕ್ಕಳನ್ನು ಸರಿಯಾಗಿ ಇಟ್ಟುಕೊಂಡರೆ ಅವರು ಏಕೆ ಬೇರೆ ಮನೆಗೆ ಹೋಗುತ್ತಾರೆ. ನಿಮ್ಮ ಶಾಸಕರನ್ನು ನೀವು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಿ, ಅಧಿಕಾರಕ್ಕೆ ಬರುವುದನ್ನು ಜನರು ತೀರ್ಮಾನ ಮಾಡುತ್ತಾರೆ ಎಂದರು.
ಆರ್‌ಎಸ್‌ಎಸ್ ಬೈದರೆ ಸ್ವರ್ಗಕ್ಕೆ ಹೋಗುತ್ತೇವೆ ಎಂದುಕೊಂಡಿದ್ದಾರೆ: ಆರ್‌ಎಸ್‌ಎಸ್ ಅವರಿಗೂ ಪರ್ಸೆಂಟೇಜ್ ಹೋಗುತ್ತದೆ ಎಂಬ ಎಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಆರ್‌ಎಸ್ಎಸ್ ಅನ್ನು ಬೈಯ್ಯದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಮೊದಲು ಸಿದ್ದರಾಮಯ್ಯ ಆರ್‌ಎಸ್‌ಎಸ್ ಬೈಯುತ್ತಿದ್ದರು. ಈಗ ಕುಮಾರಸ್ವಾಮಿ ಅವರಿಗೂ ಆ ಚಾಳಿ ಬಂದಿದೆ. ಆರ್‌ಎಸ್‌ಎಸ್ ಬೈದರೆ ಸ್ವರ್ಗಕ್ಕೆ ಹೋಗುತ್ತೇವೆ ಎಂದುಕೊಂಡಿದ್ದಾರೆ, ಅವರು ಬೈಯಲಿ, ಅವರು ಹಾಗೆ ಸ್ವರ್ಗಕ್ಕೆ ಹೋಗಲಿ. ಆರ್‌ಎಸ್‌ಎಸ್ ಟೀಕಿಸಿದರೆ ಮುಸಲ್ಮಾನರ ಓಟು ಬರುತ್ತದೆ ಅಂದುಕೊಂಡಿದ್ದಾರೆ. ನೀವು ಮುಸಲ್ಮಾನರ ಓಟು ತೆಗೆದುಕೊಳ್ಳಿ, ಬೇಡ ಎನ್ನುವುದಿಲ್ಲ. ನನಗಂತೂ ಮುಸಲ್ಮಾನರ ಓಟು ಬೇಡ, ನಾನು ಅವರನ್ನು ಕೇಳುವುದೂ ಇಲ್ಲ. ಆದರೂ ಮುಸಲ್ಮಾನರು ಕ್ರಮೇಣ ಬದಲಾಗುತ್ತಿದ್ದಾರೆ, ಅವರಿಗೆ ನಮ್ಮ ಮೇಲೆ ನಂಬಿಕೆ ಬರುತ್ತಿದೆ ಎಂದರು.
ಇದನ್ನೂ ಓದಿ | ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡಿ ಅಚ್ಚರಿ ಮೂಡಿಸಿದ ಕುಮಾರಸ್ವಾಮಿ