ಶಿವಮೊಗ್ಗ: ನೀವು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿಸುತ್ತೇವೆ ಎಂದು ಭರವಸೆ ನೀಡಿದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿವಮೊಗ್ಗಕ್ಕೆ ಕರೆಸುತ್ತೇನೆ. ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪ್ರಧಾನಿ ಮೋದಿ ಅವರು ಗುರಿ ನೀಡಿದ್ದಾರೆ. ಆ ನಿಟ್ಟಿನಲ್ಲಿ ನಮ್ಮ ಕೆಲಸ ಸಾಗಲಿದೆ. ಅಂತಹ ಮಹಾನ್ ನಾಯಕರನ್ನು ಕರೆಸುವುದು ನಮ್ಮ ಅದೃಷ್ಟ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಪೆಸಿಟ್ ಕಾಲೇಜಿನ ಪ್ರೇರಣಾ ಕನ್ವೆನ್ಷನ್ ಹಾಲ್‌ನಲ್ಲಿ ಜಿಲ್ಲಾಡಳಿತ, ವಿವಿಧ ಇಲಾಖೆಗಳು ಹಾಗೂ ಅಭಿವೃದ್ಧಿ ನಿಗಮಗಳ ಆಶ್ರಯದಲ್ಲಿ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಅಂತ್ಯೋದಯ ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲರಿಗೂ ಸರ್ಕಾರದ ಯೋಜನೆಗಳ ಸೌಲಭ್ಯ ದೊರೆಯುತ್ತಿದೆ. ಶಿವಮೊಗ್ಗದಲ್ಲಿ ಯಾವುದೇ ಸರ್ಕಾರಿ ಸವಲತ್ತು ಸಿಗದ ಒಂದೇ ಒಂದು ಮನೆಯಿದ್ದರೆ ತೋರಿಸಿ ಎಂದು ಸವಾಲೆಸೆದರು.
ಇದನ್ನೂ ಓದಿ | ಇ-ವೋಟಿಂಗ್ ವಿಧಾನ ಅಳವಡಿಕೆಗೆ ರಾಜ್ಯ ಚುನಾವಣಾ ಆಯೋಗ ಚಿಂತನೆ
ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡಿದ ಮುಖ್ಯಮಂತ್ರಿಗಳನ್ನು ನಾನು ಕಂಡಿದ್ದೇನೆ. ಆದರೆ, ಸಮಾಜಮುಖಿ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ಮುಖ್ಯಮಂತ್ರಿ ಎಂದರೆ ಅದು ಯಡಿಯೂರಪ್ಪ ಎಂದು ಬಣ್ಣಿಸಿದರು. ಅರಿವು ಯೋಜನೆಯನ್ನು ಮತ್ತೆ ಜಾರಿಗೆ ತರಲಾಗಿದೆ. ಪ್ರಜಾಪ್ರಭುತ್ವದಲ್ಲಿ ಟೀಕೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಕೋಟ ಶ್ರೀನಿವಾಸ್ ಪಡೆದಿದ್ದಾನೆ ಎಂದು ಯಾರಾದರೂ ರುಜುವಾತು ಮಾಡಿದರೆ ನಾನೂ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುತ್ತೇನೆ. ನಮ್ಮ ಇಲಾಖೆಯಿಂದ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಉಸ್ತುವಾರಿ ಸಚಿವ ನಾರಾಯಣ ಗೌಡ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದರು. ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಅಶೋಕ್ ನಾಯಕ್, ಆಯನೂರು ಮಂಜುನಾಥ್, ರುದ್ರೇಗೌಡ, ಡಿ.ಎಸ್.ಅರುಣ್, ಶಿವಮೊಗ್ಗ ಮೇಯರ್ ಸುನಿತಾ ಅಣ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ | Congress Politics | ಚುನಾವಣಾ ವರ್ಷದಲ್ಲಿ ದಲಿತೋತ್ಸವಕ್ಕೆ ಕಾಂಗ್ರೆಸ್ ಪ್ಲ್ಯಾನ್