Site icon Vistara News

ಹತ್ಯೆಗೊಳಗಾದ ಮೂವರ ಮನೆಗೂ ಎಚ್‌ಡಿಕೆ ಭೇಟಿ, ತಲಾ 5 ಲಕ್ಷ ರೂ. ಪರಿಹಾರ,  ಕುಟುಂಬಗಳಿಗೆ ಸಾಂತ್ವನ

HDK PRAVEEN

ಮಂಗಳೂರು: ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಸೋಮವಾರ ಕರಾವಳಿಗೆ ಭೇಟಿ ನೀಡಿದ್ದಾರೆ. ಹತ್ತು ದಿನಗಳ ಅವಧಿಯಲ್ಲಿ ಕರಾವಳಿಯಲ್ಲಿ ನಡೆದ ಮೂರು ಕೊಲೆಗಳಲ್ಲಿ ತಮ್ಮವರನ್ನು ಕಳೆದುಕೊಂಡ ಮೂರೂ ಕುಟುಂಬಗಳಿಗೆ ಅವರು ಸಾಂತ್ವನ ಹೇಳಿದರು ಮತ್ತು ಮೂರೂ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರವನ್ನು ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇವಲ ಪ್ರವೀಣ್‌ ಮನೆಗೆ ಮಾತ್ರ ಭೇಟಿ ನೀಡಿದ್ದಾರೆ. ಉಳಿದಿಬ್ಬರ ಮನೆಯವರಿಗೆ ಸಾಂತ್ವನ ಹೇಳುವ ಸೌಜನ್ಯ ತೋರಲಿಲ್ಲ ಎನ್ನುವ ಆಕ್ಷೇಪಗಳ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ಈ ನಡೆ ಗಮನ ಸೆಳೆದಿದೆ.

ಮೊದಲು ಮಸೂದ್‌ ಮನೆಗೆ ಭೇಟಿ
ಸೋಮವಾರ ಕರಾವಳಿಗೆ ಆಗಮಿಸಿದ ಎಚ್‌.ಡಿ ಕುಮಾರಸ್ವಾಮಿ ಅವರು ಮೊದಲು ಭೇಟಿ ನೀಡಿದ್ದು ಜುಲೈ 19ರಂದು ಕೊಲೆಯಾದ ಕಳಂಜದ ಮಸೂದ್‌ ಮನೆಗೆ. ಅಲ್ಲಿ ಕುಟುಂಬಿಕರಿಗೆ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರ ಧನ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪ್ರವೀಣ್‌ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಮಸೂದ್‌ ಮನೆಗೆ ಬಾರದೆ ಇರುವುದು ಬೇಜವಾಬ್ದಾರಿತನ ಎಂದರು.

ಮಸೂದ್‌ ಹತ್ಯೆಯಲ್ಲಿ ವಿಚಿತ್ರ ಸನ್ನಿವೇಶ ಇದೆ. ಅವರ ಸಾವಿನ ಹಿನ್ನೆಲೆಯಲ್ಲಿ ಮನೆಯವರು ನನ್ನ ಗಮನಕ್ಕೆ ತಂದಿದ್ದಾರೆ. ಇದನ್ನು ಪೊಲೀಸರ ಗಮನಕ್ಕೆ ತರುತ್ತೇನೆ. ಇದರ ಬಗ್ಗೆ ತನಿಖೆಗೆ ಸೂಚಿಸುತ್ತೇನೆ ಎಂದ ಎಚ್‌ಡಿಕೆ, ಮಸೂದ್‌ಗೆ ಯಾವುದೇ ಸಂಘಟನೆ, ರಾಜಕೀಯ ಪಕ್ಷದ ಸಂಪರ್ಕ ಇಲ್ಲ. ಹಿಂದು ಸಂಘಟನೆಯವರೇ ಆತನ ಹತ್ಯೆ ಮಾಡಿದ್ದಾರೆ. ಇದರ ವಾಸ್ತವ ಹೊರಬರಬೇಕು ಎಂದರು.

ಏನೇ ಸಮಸ್ಯೆ ಇದ್ದರೂ ನನಗೆ ಕರೆ ಮಾಡಿ
ಬಳಿಕ ಪ್ರವೀಣ್‌ ನೆಟ್ಟಾರು ಅವರ ಮನೆಗೆ ಭೇಟಿ ನೀಡಿದ ಕುಮಾರಸ್ವಾಮಿ ಅವರು, ಮನೆಯ ಸದಸ್ಯರ ಜತೆ ಮಾತುಕತೆ ನಡೆಸಿದರು. ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದರು.

ʻʻಪ್ರವೀಣ್ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಅವರ ಸಂಸಾರದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಆಗಬೇಕು. ಸರ್ಕಾರ ಕಾಟಾಚಾರಕ್ಕೆ ತನಿಖೆ ನಡೆಸಬಾರದು. ಇದರ ಹಿಂದಿರುವ ಎಲ್ಲ ಶಕ್ತಿಗಳನ್ನು ಬಯಲುಗೊಳಿಸಬೇಕು. ಈಗ ಕೆಲ ದಿನಗಳ ಕಾಲ ಅನುಕಂಪ ತೋರುವುದು ಬೇಡ. ಅವರಿಗೆ ನ್ಯಾಯ ಸಿಗಲಿʼʼ ಎಂದು ಪ್ರವೀಣ್‌ ಮನೆಗೆ ಭೇಟಿ ನೀಡಿದ ಬಳಿಕ ಕುಮಾರಸ್ವಾಮಿ ಹೇಳಿದರು. ʻʻಸಂಸಾರದಲ್ಲಿ ಸಮಸ್ಯೆ ಏನೇ ಬಂದರೂ ನನಗೆ ಕರೆ ಮಾಡಿ ಅಂತ ನಂಬರ್ ಕೊಟ್ಟಿದ್ದೇನೆʼʼ ಎಂದರು ಕುಮಾರಸ್ವಾಮಿ.

ಪ್ರವೀಣ್‌ ನೆಟ್ಟಾರು ಅವರ ಮನೆಯಲ್ಲಿ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

ಜವಾಬ್ದಾರಿ ಎತ್ತಿ ಹಾಕಿದ್ದಾರೆ
ಸರ್ಕಾರ ಪ್ರವೀಣ್‌ ಕೊಲೆ ತನಿಖೆಯನ್ನು ಎನ್‌ಐಎಗೆ ವಹಿಸುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ನಮ್ಮ ಪೊಲೀಸರು ಸರಿ ಇದಾರೆ, ಎನ್ ಐಎಗೆ ಕೊಟ್ಟಿದ್ದು ಎಷ್ಟು ಕೇಸ್ ಬಗೆಹರಿದಿದೆ. ಈಗ ಎನ್ ಐಎಗೆ ಕೊಟ್ಟಿರುವುದರಿಂದ ಪೊಲೀಸರೂ ತನಿಖೆ ಮಾಡ್ತಿಲ್ಲ, ಎನ್‌ಐಎ ತನಿಖೆಯೂ ವೇಗ ಪಡೆದಿಲ್ಲ. ನಮ್ಮ ಪೊಲೀಸರು ಸಮರ್ಥರಿರುವಾಗ ಅವರಿಗೆ ಕೊಟ್ಟು ಕೈತೊಳೆದುಕೊಂಡಿರುವುದು ಸರಿಯಲ್ಲʼʼ ಎಂದರು ಕುಮಾರಸ್ವಾಮಿ.

ಮಂಗಳಪೇಟೆಯ ಫಾಝಿಲ್‌ ಮನೆಗೆ ಭೇಟಿ
ಕುಮಾರಸ್ವಾಮಿ ಅವರು ಜುಲೈ 27ರಂದು ಕೊಲೆಯಾದ ಸುರತ್ಕಲ್‌ನ ಮಂಗಳಪೇಟೆ ನಿವಾಸಿ ಮೊಹಮ್ಮದ್‌ ಫಾಝಿಲ್‌ ಅವರ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿದರು.

ಪಕ್ಷದ ರಾಜ್ಯಾಧ್ಯಕ್ಷರಾದ ಸಿ ಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೆಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಜೆಡಿಎಸ್‌ ಮುಖಂಡರು ಜತೆಗಿದ್ದರು.

ಇದನ್ನೂ ಓದಿ| Praveen Nettaru | ಪ್ರವೀಣ್‌ ಮನೆಗೆ ಹೋದ ಕಾಂಗ್ರೆಸ್‌ ನಾಯಕರಿಗೆ ತೀವ್ರ ತರಾಟೆ, ಧಿಕ್ಕಾರದ ಕೂಗು

Exit mobile version