ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರನ್ನು ನಗರದ ಮಣಿಪಾಲ್ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿರಂತರ ಪ್ರವಾಸ ಹಾಗೂ ಕಾರ್ಯಕ್ರಮಗಳ ಒತ್ತಡದಿಂದ ಅವರಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸತತವಾಗಿ ಪ್ರವಾಸ ಮಾಡಿದ್ದ ಮಾಜಿ ಮುಖ್ಯಮಂತ್ರಿಗಳು ಜ್ವರದಿಂದ ಬಳಲುತ್ತಿರುವುದರಿಂದ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸಲಹೆ ಮಾಡಿದ್ದಾರೆ. ಹೀಗಾಗಿ ಅವರು ದೊಮ್ಮಲೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎಚ್‌ಡಿಕೆ, ವಿಶ್ರಾಂತಿ ನಂತರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಆರೋಗ್ಯದ ಬಗ್ಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ | Karnataka Election: ಲಿಂಗಾಯತ ಮುಖ್ಯಮಂತ್ರಿಗಳೇ ರಾಜ್ಯವನ್ನು ಹಾಳು ಮಾಡಿದ್ದು ಎಂದ ಸಿದ್ದರಾಮಯ್ಯ: ಡ್ಯಾಮೇಜ್ ಕಂಟ್ರೋಲ್ ಪ್ರಯತ್ನ ಆರಂಭ
ಸಣ್ಣ ಪ್ರಮಾಣದಲ್ಲಿ ಲಂಗ್ಸ್ ಇನ್ಪೆಕ್ಷನ್, ಡಸ್ಟ್ ಅಲರ್ಜಿ ಹಾಗೂ ಜ್ವರ ಕೂಡ ಬಂದಿರುವ ಹಿನ್ನೆಲೆಯಲ್ಲಿ ಸ್ಪೆಷಲ್ ವಾರ್ಡ್‌ನಲ್ಲಿ ಕುಮಾರಸ್ವಾಮಿಯನ್ನು ದಾಖಲಿಸಲಾಗಿದೆ. ಡಾ.ಸತ್ಯನಾರಾಯಣ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಭಾನುವಾರ ಬೆಳಗ್ಗೆ ಆಸ್ಪತ್ರೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ತಂದೆಯ ಆರೋಗ್ಯ ವಿಚಾರಿಸಲಿದ್ದಾರೆ. ಭಾನುವಾರ ಸಂಜೆ ಆಸ್ಪತ್ರೆಯಿಂದ ಎಚ್‌ಡಿಕೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿ ಆಸ್ಪತ್ರೆ ಮೂಲಗಳಿಂದ ಲಭ್ಯವಾಗಿದೆ.