Site icon Vistara News

ಜಾಹೀರಾತು ವಿವಾದ | ನೆಹರು ದೇಶವನ್ನು ಮುನ್ನಡೆಸಿದ್ದಾರೆ ಎಂದ ಕುಮಾರಸ್ವಾಮಿ

Rakshit Shetty Richard Anthony Produce By Hombale

ಬೆಂಗಳೂರು: ಸರ್ಕಾರಿ ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ನೆಹರು ಸ್ಮರಿಸದಿರುವುದನ್ನು ಜೆಡಿಎಸ್‌ ಕೂಡ ಖಂಡಿಸಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, “ಜವಾಹರಲಾಲ್‌ ನೆಹರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಕ್ಲಿಷ್ಟಕರ ಪರಿಸ್ಥಿತಿ ಇತ್ತು, ಯಾವುದೇ ಲೋಪದೋಷವಿದ್ದರೂ ಪ್ರಥಮ ಪ್ರಧಾನಿಯಾಗಿ ದೇಶವನ್ನು ಶಕ್ತಿಯುತವಾಗಿ ಮುನ್ನಡೆಸಿದ್ದಾರೆ. ಅವರು ಯಾವುದೇ ಪಕ್ಷಕ್ಕೇ ಸೇರಿರಲಿ, ಆದರೆ ಸ್ವಾತಂತ್ರ್ಯಕ್ಕೆ ಆ ಕುಟುಂಬ ದೊಡ್ಡ ಮಟ್ಟದ ಕೊಡುಗೆ ನೀಡಿದೆ ಎಂಬುದನ್ನು ಮರೆಯಬಾರದುʼʼ ಎಂದಿದ್ದಾರೆ.

ನಗರದ ದಾಸರಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಮೊದಲ ಪ್ರಧಾನಮಂತ್ರಿ ನೆಹರು ಅವರನ್ನು ಕಡೆಗಣನೆ ಮಾಡಿರುವುದು ಸಣ್ಣ ತನದ ರಾಜಕಾರಣ. ದೇಶ ವಿಭಜನೆಗೆ ನೆಹರು ಕಾರಣ ಎಂದು ಆ.14ರ ದಿನವನ್ನು ಬಿಜೆಪಿಯವರು ಕರಾಳ ದಿನಾಚರಣೆ ಎಂದು ಆಚರಿಸಿದ್ದಾರೆ. ನೆಹರು ತಪ್ಪು ಮಾಡಿದ್ದರೆ ಆಗ ಆಂದೋಲನ ಮಾಡದೆ ಇವರು ಏನು ಮಾಡುತ್ತಿದ್ದರು, ವೀರ ಸಾವರ್ಕಲ್ ಟೀಂ ನೆಹರು ವಿರುದ್ಧ ಹೋರಾಟ ಮಾಡಿ, ವಿಭಜನೆ ಆಗದಂತೆ ತಡೆಯಬೇಕಿತ್ತಲ್ಲವೇ? ಹಾಗಿದ್ದರೆ ಅದರಲ್ಲಿ ನಿಮ್ಮದು ಪಾಲಿದೆ ಎಂಬುವುದು ದೃಢವಾಗಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ | ನೆಹರು, ವಾಜಪೇಯಿ ಮೂರ್ಖತನದಿಂದ ನಾವು ಹೀಗಾಗಿದ್ದು ಎಂದ ಸುಬ್ರಹ್ಮಣಿಯನ್ ಸ್ವಾಮಿ

ಕಳೆದ ಎಂಟತ್ತು ದಿನಗಳಿಂದ ಎರಡು ರಾಷ್ಟ್ರೀಯ ಪಕ್ಷಗಳು ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಯಲ್ಲಿ ತೊಡಗಿವೆ. ಒಂದು ಪಕ್ಷ ರಾಷ್ಟ್ರ ಧ್ವಜವನ್ನು ಎಲ್ಲರ ಮನೆ ಮೇಲೆ ಹಾರಿಸುವ ಆಂದೋಲನ ನಡೆಸುತ್ತಿದ್ದರೆ, ಮತ್ತೊಂದು ಪಕ್ಷ ಪಾದಯಾತ್ರೆ ಮಾಡುತ್ತಿದೆ. ರಾಷ್ಟ್ರ ಧ್ವಜಕ್ಕೆ ಗೌರವ ಕೊಡುವುದರಲ್ಲಿ ಅಲ್ಲ, ಜನರ ಸಮಸ್ಯೆಗೆ ಪರಿಹಾರ ಕೊಡುವುದರಲ್ಲಿ ಪೈಪೋಟಿ ಇರಬೇಕು ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಅವರು ಟಾಂಗ್‌ ನೀಡಿದ್ದಾರೆ.

ಎರಡು ರಾಷ್ಟ್ರೀಯ ಪಕ್ಷಗಳಿಗೆ ನಾಯಕರ ಹೃದಯದಲ್ಲಿ ಕಿಂಚಿತ್ತು ದೇಶಪ್ರೇಮವಿದ್ದರೆ ದೇಶದ ಸಮಸ್ಯೆಗಳನ್ನು ಬಗೆಹರಿಸಬೇಕು. ಒಂದು ಕಡೆ ಪೈಪೋಟಿ, ಇನ್ನೊಂದು ಕಡೆ ಸಂವಿಧಾನ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೆಲಸ ಆಗುತ್ತಿದೆ. ಸ್ವತಂತ್ರ ಸಂಸ್ಥೆಗಳು ನಿರ್ಭೀತಿಯಿಂದ ಕೆಲಸ ಮಾಡಲು ಆಗುತ್ತಿಲ್ಲ. ದೇಶದಲ್ಲಿ ಬಡತನ ತಾಂಡವವಾಡುತ್ತಿದೆ, ಆದರೆ ಒಂದೊಂದು ಯೋಜನೆಯಲ್ಲೂ ಹಗರಣಗಳು ನಡೆಯುತ್ತಿದ್ದು, ಭ್ರಷ್ಟ ವ್ಯವಸ್ಥೆ ಬಗ್ಗೆ ಮಾಧ್ಯಮದಲ್ಲಿ ಚರ್ಚೆ ಆಗುತ್ತಿದೆ ಎಂದರು.

ಕಾಂಗ್ರೆಸ್‌ನ ಪಾದಯಾತ್ರೆಯ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮೋತ್ಸವಕ್ಕೆ ಟಕ್ಕರ್ ಕೊಡಲು ಮತ್ತೊಂದು ಬಣ ಪಾದಯಾತ್ರೆ ನಡೆಸುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಇದು ರಾಷ್ಟ್ರಧ್ವಜದ ಗೌರವ ಹೆಚ್ಚಿಸುವ ಪಾದಯಾತ್ರೆ ಅಲ್ಲ, ಸಂಕುಚಿತ ಭಾವನೆಯಿಂದ ರಾಷ್ಟ್ರ ಧ್ವಜದ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ | ಸ್ವಾತಂತ್ರ್ಯದ ಅಮೃತ ಮಹೋತ್ಸವ | ಕರ್ನಾಟಕದಲ್ಲಿ ರಾಷ್ಟ್ರಧ್ವಜ ಸತ್ಯಾಗ್ರಹಗಳು

Exit mobile version