Site icon Vistara News

Political warfare : ಸಚಿವ ಅಶ್ವತ್ಥನಾರಾಯಣಗೆ ತಿರುಗೇಟು ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

siddaramaiah

ಬೆಂಗಳೂರು: ಟಿಪ್ಪುವನ್ನು ಕೊಂದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಿ ಎಂಬುದಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಕರೆ ಕೊಟ್ಟಿರುವುದಕ್ಕೆ ಪ್ರತಿಯಾಗಿ (Political warfare) ಸಿದ್ದರಾಮಯ್ಯ ಅವರು ಸರಣಿ ಟ್ವೀಟ್​ ಮಾಡಿದ್ದಾರೆ. ಬೇರೆಯವರನ್ನು ಪ್ರಚೋದಿಸಬೇಡಿ ನೀವೇ ಕೋವಿ ಹಿಡಿದುಕೊಂಡು ಬಂದು ನನ್ನನ್ನು ಕೊಲೆ ಮಾಡಿ ಎಂದು ಅವರು ಬರೆದುಕೊಂಡಿದ್ದಾರೆ.

ಮಂಡ್ಯದ ಸಾತನೂರು ಬಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವ ಭರದಲ್ಲಿ ಉರಿಗೌಡ, ನಂಜೇಗೌಡ ಟಿಪ್ಪುವನ್ನು ಕೊಂದಂತೆ ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಬೇಕು ಎಂದು ಅಶ್ವತ್ಥ ನಾರಾಯಣ ಅವರು ಹೇಳಿಕೆ ಕೊಟ್ಟಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಸಿದ್ದರಾಮಯ್ಯ ಅವರು ನಾಲ್ಕು ಟ್ವೀಟ್​ ಮೂಲಕ ಉತ್ತರ ಕೊಟ್ಟಿದ್ದಾರೆ.

ಜನರನ್ನು ಪ್ರಚೋದಿಸುವ ಬದಲು ನೀವೇ ಕೋವಿ ಹಿಡಿದುಕೊಂಡು ಬಂದುಬಿಡಿ ಎಂದು ಮೊದಲ ಟ್ವೀಟ್​ ಮಾಡಿರುವ ಸಿದ್ದರಾಮಯ್ಯ ಅವರು ಎರಡನೇ ಟ್ವೀಟ್​ನಲ್ಲಿ ನನ್ನ ಹತ್ಯೆಗೆ ಕರೆ ಕೊಟ್ಟಿರುವುದು ಆಶ್ಚರ್ಯ ತಂದಿಲ್ಲ. ಯಾಕೆಂದರೆ ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುವ ಪಕ್ಷದ ನಾಯಕರಿಂದ ಪ್ರೀತಿ, ಕರುಣೆ, ಸ್ನೇಹ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Karnataka Election: ಟಿಪ್ಪುನನ್ನು ಹೊಡೆದು ಹಾಕಿದಂತೆಯೇ ಸಿದ್ದರಾಮಯ್ಯರನ್ನೂ ಹೊಡೆದು ಹಾಕಬೇಕು: ಅಶ್ವತ್ಥನಾರಾಯಣ

ಮೂರನೇ ಟ್ವೀಟ್​ನಲ್ಲಿ ಅವರು ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ. ಸರ್ಕಾರ ಸತ್ತುಹೋಗಿದೆ ಎಂದೇ ಲೆಕ್ಕ ಎಂದು ಬರೆದಿದ್ದಾರೆ. ಮುಂದುವರಿದ ಅವರು ಸಚಿವ ಡಾ.ಅಶ್ವತ್ಥನಾರಾಯಣ್ ಅವರು ನೀಡಿರುವ ಹತ್ಯೆಯ ಕರೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರತಿಕ್ರಿಯೆ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ. ಮೌನ ಸಮ್ಮತಿಯ ಲಕ್ಷಣವೇ ಎಂದು ಪ್ರಶ್ನಿಸಿದ್ದಾರೆ.

Exit mobile version