Site icon Vistara News

ಕಿಮ್ಮನೆ ಪಾದಯಾತ್ರೆಗೆ ಕಿಮ್ಮತ್ತು ಕೊಡದ ಡಿಕೆಶಿ: ಸಿದ್ದರಾಮಯ್ಯ ಹಾಜರ್‌

ಸಿದ್ದರಾಮಯ್ಯ

ಶಿವಮೊಗ್ಗ: ಪಠ್ಯ ಪರಿಷ್ಕರಣೆ ವಿರೋಧಿಸಿ, ಕುವೆಂಪು ಹಾಗೂ ನಾಡಗೀತೆ ಬಗ್ಗೆ ರೋಹಿತ್‌ ಚಕ್ರತೀರ್ಥ ಆಕ್ಷೇಪಾರ್ಹ ಬರಹ ಖಂಡಿಸಿ ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಕಾಂಗ್ರೆಸ್‌ ಹಮ್ಮಿಕೊಂಡಿರುವ ಪಾದಯಾತ್ರೆ ತೀರ್ಥಹಳ್ಳಿಗೆ ತಲುಪಿದೆ. ಅಲ್ಲಿ ಹಮ್ಮಿಕೊಂಡಿರುವ ಬೃಹತ್‌ ಬಹಿರಂಗ ಸಭೆಯಲ್ಲಿ ಹಲವು ಸಾಹಿತಿಗಳು ಹಾಗೂ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.

ಕುವೆಂಪು ಸಮಾಧಿ ಸ್ಥಳ ಕವಿಶೈಲದಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಆರಂಭಗೊಂಡಿದ್ದ ಪಾದಯಾತ್ರೆ 18 ಕಿ.ಮೀ ಕ್ರಮಿಸಿ ತೀರ್ಥಹಳ್ಳಿಗೆ ಸೇರಿದೆ. ಪಟ್ಟಣದ ಸಂಸ್ಕೃತಿ ಭವನದ ಆವರಣದಲ್ಲಿ ಬೃಹತ್‌ ಸಭೆ ಹಮ್ಮಿಕೊಳ್ಳಲಾಗಿದೆ.

ಪಾದಯಾತ್ರೆ ಬಳಿಕ ನಡೆಯುವ ಬೃಹತ್‌ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಮಾಜಿ ಸಿಎಂ ಸಿದ್ದರಾಮಯ್ಯ,‌ ಮಾಜಿ‌ ಸ್ಪೀಕರ್ ರಮೇಶ್‌ ಕುಮಾರ್ ಹೆಲಿಕಾಪ್ಟರ್‌ನಲ್ಲಿ ಜಿಲ್ಲೆಗೆ ಆಗಮಿಸಿ, ಅಲ್ಲಿಂದ ಪಟ್ಟಣಕ್ಕೆ ಆಗಮಿಸಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಗೈರು ಹಾಜರಾಗಿದ್ದಾರೆ. ಪಠ್ಯಪುಸ್ತಕ ವಿಚಾರದಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಪ್ರಾರಂಭದಿಂದಲೂ ಸಿದ್ದರಾಮಯ್ಯ ವಾಗ್ದಾಳಿ ನಡೆಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್‌ ಸಹ ಬಿಜೆಪಿ ವಿರುದ್ಧ ಮಾತನಾಡಿದ್ದಾರಾದರೂ ತೀರಾ ಆದ್ಯತೆ ನೀಡಿರಲಿಲ್ಲ. ಇದೀಗ ಕಿಮ್ಮನೆ ರತ್ನಾಕರ ನಡೆಸುತ್ತಿರುವ ಹೋರಾಟಕ್ಕೆ ಇದಿಷ್ಟೆ ಕಾರಣವೇ ಅಥವಾ ಬೇರೆ ರಾಜಕೀಯ ಕಾರಣವೂ ಇದೆಯೇ ಎಂಬುದು ಮಾತ್ರ ತಿಳಿದುಬಂದಿಲ್ಲ.

ಮೋದಿ, ಅಮೀತ್‌ ಶಾ ಸಂವಿಧಾನ ಬರೆದರೇ?

ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ʼʼರೋಹಿತ್‌ ಚಕ್ರತೀರ್ಥಗೆ ಇತಿಹಾಸ ಗೊತ್ತಿಲ್ಲ. ಇತಿಹಾಸ ತಿರುಚುವುದಷ್ಟೇ ಗೊತ್ತು. ಮೊದಲು ಪಠ್ಯ ಪರಿಷ್ಕರಣೆ ಮಾಡಿದರು, ನಂತರ ತಪ್ಪು ಒಪ್ಪಿಕೊಂಡರು. ಡಾ. ಬಿ.ಆರ್.‌ ಅಂಬೇಡ್ಕರ್‌ ಸಂವಿಧಾನ ಶಿಲ್ಪಿ ಅಲ್ಲವೇ, ಪಠ್ಯದಿಂದ ಸಂವಿಧಾನ ಶಿಲ್ಪಿ ಪದ ತೆಗೆದಿದ್ದು ಯಾಕೆ? ಸಂವಿಧಾನ ಬರೆದಿದ್ದು ಮೋದಿ, ಅಮೀತ್‌ ಶಾ ಅವರಾʼʼ ಎಂದು ಪ್ರಶ್ನಿಸಿದರು.

ಇನ್ನು ರಾಹುಲ್ ಗಾಂಧಿ ಇ.ಡಿ ವಿಚಾರಣೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ʼʼಇದೊಂದು ದ್ವೇಷದ ರಾಜಕಾರಣ. ಇದು ಹೊಸ ಪ್ರಕರಣವಲ್ಲ, ಹಿಂದೆಲ್ಲ ತನಿಖೆ ಆಗಿದೆ. ಅವರಿಗೆ ತೊಂದರೆ ಕೊಡಲು ನೀಡಿರುವ ನೋಟಿಸ್ ಇದಾಗಿದ್ದು, ದೆಹಲಿ ಪೊಲೀಸರು ಅಮಿತ್‌ ಶಾ ಕಂಟ್ರೋಲ್‌ನಲ್ಲಿ ಇದ್ದಾರೆ. ಸಂಸದ ಡಿ.ಕೆ. ಸುರೇಶ್ ಮೇಲೆ ಹಲ್ಲೆ ಮಾಡಲಾಗಿದೆ. ಇದು ಪ್ರಜಾಪ್ರಭುತ್ವವನ್ನು ನಾಶ ಮಾಡುವ ಕ್ರಮ. ಪ್ರತಿಭಟನಾ ಹಕ್ಕು ಹತ್ತಿಕ್ಕುವ ಪ್ರಯತ್ನ, ಇ.ಡಿ ಹಾಗೂ ಐಟಿ ಬಿಜೆಪಿ ಸರ್ಕಾರದ ಕೈಗೊಂಬೆಗಳಾಗಿವೆʼʼ ಎಂದು ಕಿಡಿ ಕಾರಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ ಮಾತನಾಡಿ ʼʼರಾಜ್ಯದಲ್ಲಿ ಪಠ್ಯಪುಸ್ತಕ ವಿಚಾರದ ಗೊಂದಲ ಸೃಷ್ಟಿಯಾಗಿರುವುದರಿಂದ ಇದನ್ನು ಖಂಡಿಸಿ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಪಾದಯಾತ್ರೆ ಮಾಡಲಾಗಿದೆ. ಮಲೆನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲವೂ ಬದಲಾಗಿದೆ. ರಾಜ್ಯದ ಇತಿಹಾಸದಲ್ಲಿ ಇಂತಹ ಕಳಪೆ ಗೃಹಮಂತ್ರಿಯನ್ನು ನೋಡಿಲ್ಲ. ಪ್ರತಿ ಗೃಹ ಸಚಿವರು ಸಹ ಅವರದ್ದೇ ಶೈಲಿಯಿಂದ ಕಾರ್ಯನಿರ್ವಹಣೆ ಮಾಡಿದ್ದಾರೆ. ಆದರೆ ತೀರ್ಥಹಳ್ಳಿಯ ಆರಗ ಜ್ಞಾನೇಂದ್ರ ಅವರು ಮೊದಲ ದಿನದಿಂದಲೇ ವೈಫಲ್ಯ ಅನುಭವಿಸಿದ್ದಾರೆ. ಮೈಸೂರಿನ ರೇಪ್ ಪ್ರಕರಣ, ಶಿವಮೊಗ್ಗ ಕೊಲೆ ಪ್ರಕರಣ ಯಾವುದೇ ಇರಲಿ, ಗೃಹ ಸಚಿವರು ಜವಾಬ್ದಾರಿಯುತವಾಗಿ ಮಾತನಾಡುವ ಕೆಲಸ ಮಾಡಲಿಲ್ಲʼʼ ಎಂದು ಕಿಡಿಕಾರಿದರು. ʼʼಗೃಹ ಸಚಿವರಾದವರು ರಾಜ್ಯವ್ಯಾಪಿ ಕೆಲಸ ಮಾಡಬೇಕು. ಆದರೆ ಆರಗ ಜ್ಞಾನೇಂದ್ರ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಗೆ ಸೀಮಿತರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆʼʼ ಎಂದವರು ಆರೋಪಿಸಿದರು.

ʼʼರಾಜಧಾನಿ ಬೆಂಗಳೂರು ಸೇರಿ ಎಲ್ಲ ಜಿಲ್ಲೆಗಳಲ್ಲೂ ಅದೇ ಪರಿಸ್ಥಿತಿ ಇದೆ. ರಾಜ್ಯದಲ್ಲಿ ನಡೆದ ಪಿಎಸ್ಐ ಹಗರಣದಲ್ಲಿ ಈಗಾಗಲೇ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ. ಅವರನ್ನು ಕೂಡ ವಿಚಾರಣೆ ಮಾಡ್ತಿದ್ದಾರೆ. ಇಷ್ಟಾದರೂ ಗೃಹ ಸಚಿವರು ರಾಜೀನಾಮೆ ಕೊಡುತ್ತಿಲ್ಲ. ಗೃಹ ಸಚಿವರ ತಲೆದಂಡವಾಗಬೇಕು. ತಕ್ಷಣವೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಂದ ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಜೀನಾಮೆ ಪಡೆಯಬೇಕುʼʼ ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ ʼʼಕುಪ್ಪಳಿಯಿಂದ ಕನ್ನಡದ ಕಹಳೆ ಆರಂಭವಾಗಿದೆ. ಅಂದು ಗೋಕಾಕ್ ಚಳವಳಿ ನಡೆದಿತ್ತು, ಇಂದು ಕುಪ್ಪಳಿ ಕಹಳೆ ಆರಂಭವಾಗಿದೆ. ಕನ್ನಡಕ್ಕೆ ಮಹಾಮನೆ ಕಲ್ಯಾಣ, ಕವಿಮನೆ ಕವಿಶೈಲವಾಗಿದೆ. ಕನ್ನಡಕ್ಕೆ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡುವುದುʼʼ ಎಂದು ಪ್ರಶ್ನಿಸಿದರು.

ʼʼತಮಿಳಿಗರ ರೀತಿ ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳಬೇಕಿದೆ. ನಾವು ಭಾಷಾಂಧರು ಅಂದರೂ ಸರಿ. ಅವರನ್ನು ನಾವು ಅನುಸರಿಸಬೇಕು. ಅಲ್ಲಿ ಭಾಷೆಗೆ ಧಕ್ಕೆಯಾದರೆ ಆಳುವವರು, ವಿರೋಧ ಪಕ್ಷದವರು ಎಲ್ಲರೂ ಒಗ್ಗಟ್ಟಾಗುತ್ತಾರೆ. ಇದು ನಾಡಿನಾದ್ಯಂತ ಮೊಳಗಬೇಕು. ಕುವೆಂಪು ಅಂದ್ರೆ ಕನ್ನಡ, ಬಸವ ಅಂದ್ರೆ ಕರ್ನಾಟಕ. ನಮ್ಮದು ನಾಡಗೀತೆ ಅಲ್ಲ, ನಾಡೇ ಒಂದು ಗೀತೆ. ನಾಡೇ ನಮಗೆ ಒಂದು ಧ್ವಜ. ಇವೆರಡಕ್ಕೂ ಅವಮಾನವಾಗಿದೆʼʼ ಎಂದು ಹೇಳಿದರು.
ಶಾಸಕ ಟಿ.ಡಿ.ರಾಜೇಗೌಡ, ಪತ್ರಕರ್ತ ದಿನೇಶ್ ಅಮೀನಮಟ್ಟು, ಹಿರಿಯ ಸಾಹಿತಿ ನಾ.ಡಿಸೋಜಾ, ಎಐಸಿಸಿಯ ನಿಖಿತ್ ರಾಜ್ ಮೌರ್ಯ, ಡಿಎಸ್ಎಸ್ ರಾಜ್ಯಾಧ್ಯಕ್ಷ ಗುರುಮೂರ್ತಿ, ಬಿ.ಚಂದ್ರೇಗೌಡ ಉಪಸ್ಥಿತರಿದ್ದರು.

ಇದನ್ನೂ ಓದಿ | ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ: ಕವಿಶೈಲದಿಂದ ತೀರ್ಥಹಳ್ಳಿ ಪಾದಯಾತ್ರೆಗೆ ಹಂಸಲೇಖ ಚಾಲನೆ

Exit mobile version