ಬೆಂಗಳೂರು: ರಾಜ್ಯ ಸರ್ಕಾರದ 40% ಕಮಿಷನ್ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ, ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತೇನೆ. ಒಂದು ವೇಳೆ ಸರ್ಕಾರ ತನಿಖೆ ಮಾಡದಿದ್ದರೆ ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂಬುವುದು ಸ್ಪಷ್ಟವಾಗುತ್ತದೆ. ಆಗ ನಾವು ಜನರ ಬಳಿಗೆ ಹೋಗುತ್ತೇವೆ, ಯಾರು ಭ್ರಷ್ಟರು ಎಂಬುವುದನ್ನು ಅವರೇ ತೀರ್ಮಾನಿಸುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಗುತ್ತಿಗೆದಾರರ ಸಂಘದ ಸದಸ್ಯರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಸಿದ್ದರಾಮಯ್ಯ, ಈ ಹಿಂದೆ ರಾಜ್ಯ ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಸಂಘದ ಪದಾಧಿಕಾರಿಗಳು, ಅರಣ್ಯ ಇಲಾಖೆಯ ಗುತ್ತಿಗೆದಾರರ ಜತೆ ಚರ್ಚೆ ನಡೆಸಿದ್ದೇನೆ. ಇಲಾಖೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ನಾವು ರಾಜ್ಯ ಸರ್ಕಾರದ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಪ್ರಧಾನಿಗೆ ಪತ್ರ ಬರೆದರೂ ಕ್ರಮವಾಗಿಲ್ಲ, ನ್ಯಾಯಾಂಗ ತನಿಖೆ ಮಾಡಿದರೆ ದಾಖಲೆ ಕೊಡಲು ಸಿದ್ಧ, ಈ ಬಗ್ಗೆ ನೀವು ಸದನದಲ್ಲಿ ಒತ್ತಾಯ ಮಾಡಬೇಕೆಂದು ಗುತ್ತಿಗೆದಾರರು ಮನವಿ ಮಾಡಿರುವುದಾಗಿ ಹೇಳಿದರು.
ಇದನ್ನೂ ಓದಿ | ಸೆಕ್ಷನ್ 144: ಮಡಿಕೇರಿ ಚಲೋ ರದ್ದು ಎಂದು ಘೋಷಿಸಿದ ಸಿದ್ದರಾಮಯ್ಯ
ಭ್ರಷ್ಟಾಚಾರ ಮೊದಲು ಆಮೆ ವೇಗದಲ್ಲಿ ಇತ್ತು. ಈಗ ಅದು ಶರವೇಗದಲ್ಲಿ ಇದೆ ಅಂತ ಹೇಳಿದ್ದಾರೆ. ನಮ್ಮ ಆರೋಪ ಸಾಬೀತಾಗದಿದ್ದರೆ ಯಾವುದೇ ಶಿಕ್ಷೆಗೂ ಸಿದ್ಧ. ಸಿಎಂ ಸೂಚನೆಗೂ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ ಎಂದು ಕೆಂಪಣ್ಣ ಹೇಳಿರುವುದಾಗಿ ತಿಳಿಸಿದ ಸಿದ್ದರಾಮಯ್ಯ, ಬೇರೆ ವಿಚಾರಗಳ ಜತೆಗೆ ರಾಜ್ಯ ಸರ್ಕಾರದ ವಿರುದ್ಧದ 40% ಕಮಿಷನ್ ಜನರಿಗೆ ತಿಳಿದಿದ್ದು, ಚುನಾವಣೆಯಲ್ಲಿ ಬುದ್ಧಿ ಕಲಿಸಲಿದ್ದಾರೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆ ರದ್ದು ಮಾಡುವ ಸಚಿವ ಉಮೇಶ್ ಕತ್ತಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಹೇಳಿದರೆ ಅನ್ನಭಾಗ್ಯ ಯೋಜನೆ ಅಕ್ಕಿ ನಿಲ್ಲಿಸಿ ಬಿಡುತ್ತೇವೆ ಎಂದು ಸಚಿವರು ಹೇಳುತ್ತಾರೆ. ಅವರ ಮನಸ್ಥಿತಿ ಏನಿದೆ ಎಂಬುವುದು ಇದರಿಂದಲೇ ತಿಳಿಯುತ್ತದೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Dollu Kannada Movie | ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ವೀಕ್ಷಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ