Site icon Vistara News

ಕಾಂಗ್ರೆಸ್‌ ಕಾಲದಲ್ಲಿ ರೈತರ ಪಂಪ್‌ ಸೆಟ್‌ಗೆ ಮೀಟರ್‌ ಅಳವಡಿಸಲು ಮುಂದಾಗಿದ್ದೆವು ಎಂಬ ಮಾಹಿತಿ ಸುಳ್ಳು: ಸಿದ್ದರಾಮಯ್ಯ

ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಲು ಮುಂದಾಗಿರಲಿಲ್ಲ. ಅದು ನಿಜವಾದರೆ ಯಾವ ಕಂಪೆನಿಗೆ ಆದೇಶ ಕೊಟ್ಟಿದ್ದೆವು? ನಮ್ಮ ಸರ್ಕಾರ ಮೀಟರ್ ಅಳವಡಿಸಲು ಕ್ಯಾಬಿನೆಟ್‍ನಲ್ಲಿ ತೀರ್ಮಾನ ಮಾಡಿದ್ದರೆ ಅದರ ಪ್ರತಿಗಳೆಲ್ಲಿವೆ? ಯಾವ ರೈತರಿಗೆ ತೊಂದರೆ ಕೊಟ್ಟಿದ್ದೇವೆ ಎಂದು ದಾಖಲೆ ಬಿಡುಗಡೆ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಅವಧಿಯಲ್ಲಿ ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸಲು ಹುನ್ನಾರ ನಡೆದಿತ್ತು ಎಂಬ ಸಚಿವ ಸುನಿಲ್‍ಕುಮಾರ್ ಹೇಳಿಕೆ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂಧನ ಸಚಿವ ಸುನೀಲ್‌ ಕುಮಾರ್ ಹಿಂದಿನ ನಮ‌್ಮ ಸರ್ಕಾರದ ಬಗ್ಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ ಕೂಡಲೆ ಶ್ವೇತಪತ್ರ ಹೊರಡಿಸಬೇಕು. ಈಗ ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸಲು ಮುಂದಾಗಿರುವ ಕೇಂದ್ರದ ವಿದ್ಯುತ್ ಮಸೂದೆಯನ್ನು ತಿರಸ್ಕರಿಸಲು ಮುಂದಿನ ಅಧಿವೇಶನದಲ್ಲಿ ನಿರ್ಣಯ ಮಂಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಸೆ.12ರ ಜನತಾ ಮಿತ್ರ ಸಮಾರೋಪ ಮುಂದೂಡಿದ ಜೆಡಿಎಸ್‌, ಅಂದೇ ಶಾಸಕಾಂಗ ಪಕ್ಷ ಸಭೆ

ʻʻಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ವಿದ್ಯುತ್ ಇಲಾಖೆಯ ಮೇಲೆ ದೊಡ್ಡ ಮೊತ್ತದ ಸಾಲ ಇತ್ತು. ಮುಖ್ಯಮಂತ್ರಿ ಹುದ್ದೆಯ ಜತೆಗೆ ಹಣಕಾಸಿನ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದ ನಾನು ಈ ಸಾಲವನ್ನು ಹೀಗೇ ಬಿಟ್ಟರೆ, ವಿದ್ಯುತ್ ಇಲಾಖೆಯು ಮುಳುಗಿ ಹೋಗುತ್ತದೆ ಎಂಬ ಕಾರಣಕ್ಕಾಗಿ ಎಸ್ಕಾಂಗಳ ಬಾಕಿಗಳನ್ನು ತೀರಿಸಲು ಸಾಲ ಮಾಡಿದ್ದೆವು. ಅಗತ್ಯ ಇರುವ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದನ್ನು ನಷ್ಟ ಎನ್ನುವುದಿಲ್ಲ. ಬದಲಾಗಿ ಬಂಡವಾಳ ಹೂಡಿಕೆ ಎನ್ನುತ್ತಾರೆ ಎಂಬ ಅರ್ಥ ಶಾಸ್ತ್ರದ ತತ್ವಗಳನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕುʼʼ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 2014-15ರಲ್ಲಿ ಒಟ್ಟು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದ ವಿದ್ಯುತ್ 14825 ಮೆ.ವ್ಯಾ ಮಾತ್ರ. ಅದರಲ್ಲಿ ಸೋಲಾರ್ ಮೂಲದಿಂದ 118 ಮತ್ತು ಪವನ ವಿದ್ಯುತ್‌ ಮೂಲದಿಂದ 2655 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಆದರೆ 2018ರ ವೇಳೆಗೆ ಸೋಲಾರ್ ಮೂಲದಿಂದ 6157 ಮೆ.ವ್ಯಾ. ಮತ್ತು ಪವನ್‌ ವಿದ್ಯುತ್ 4730 ಮೆಗಾ ವ್ಯಾಟ್ ಉತ್ಪಾದನೆ ಮಾಡುವ ಸ್ಥಿತಿಗೆ ರಾಜ್ಯವು ತಲುಪಿದೆ.

ಕಲ್ಲಿದ್ದಲು ಮೂಲದ ಉಷ್ಣ ವಿದ್ಯುತ್ ಕೂಡ 2014-15ರಲ್ಲಿ 6197 ಮೆಗಾವ್ಯಾಟ್‌ ಉತ್ಪಾದನೆ ಇದ್ದದ್ದು, 2018ರ ವೇಳೆಗೆ 11366 ಮೆಗಾವ್ಯಾಟ್ ಉತ್ಪಾದನೆ ಮಾಡುವ ಹಂತಕ್ಕೆ ತಲುಪಿತ್ತು. ಒಂದು ಕಾಲದಲ್ಲಿ ಕೇವಲ 2-3 ಗಂಟೆ ವಿದ್ಯುತ್ ಒದಗಿಸಲು ಸಂಕಷ್ಟ ಪಡುತ್ತಿದ್ದ ರಾಜ್ಯವು 2018ರ ವೇಳೆಗೆ 28741 ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದನೆ ಮಾಡುವ ಹಂತಕ್ಕೆ ರಾಜ್ಯವು ತಲುಪಿತು. ನಮ್ಮ 5 ವರ್ಷಗಳ ಆಡಳಿತದ ಅವಧಿಯಲ್ಲಿ 13175 ಮೆಗಾವ್ಯಾಟ್‌ ವಿದ್ಯುತ್ ಅನ್ನು ಹೆಚ್ಚಾಗಿ ಉತ್ಪಾದನೆ ಮಾಡಲಾರಂಭಿಸಿದೆವು. 2014-15ರಲ್ಲಿ ನವೀಕರಿಸಬಹುದಾದ ಇಂಧನ ಮೂಲದಿಂದ ಒಟ್ಟು ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಪ್ರಮಾಣ 4855 ಮೆಗಾ ವ್ಯಾಟ್‌ಗಳಷ್ಟಿತ್ತು. 2018ರ ವೇಳೆಗೆ ಅದು 13500ಕ್ಕೂ ಹೆಚ್ಚು ಮೆಗಾ ವ್ಯಾಟ್‌ಗಳನ್ನು ಉತ್ಪಾದನೆ ಮಾಡುವ ಹಂತಕ್ಕೆ ತಲುಪಿದೆವು ಎಂದು ತಿಳಿಸಿದ್ದಾರೆ.

ಇದು ಕಾಂಗ್ರೆಸ್ ಸರ್ಕಾರದ ಶ್ರಮದಿಂದ ಆದದ್ದು. ನಾವು ಮಾಡಿದ್ದ ಕೆಲಸದಿಂದ ನೀವು ಹಣಗಳಿಸುತ್ತಿದ್ದರೆ, ಕೆಲಸದ ಕ್ರೆಡಿಟ್‌ ಯಾರಿಗೆ ಸಲ್ಲಬೇಕು? ಬಿಜೆಪಿ ಸರ್ಕಾರ ಮಾರುತ್ತಿರುವ ವಿದ್ಯುತ್ ಅನ್ನು ಉತ್ಪಾದಿಸಲು ಕ್ರಮ ಕೈಗೊಂಡವರು ಯಾರು? ನಿಮ್ಮ ಸರ್ಕಾರ ಬಂದಾದ ಮೇಲೆ ಎಷ್ಟು ವಿದ್ಯುತ್ ಉತ್ಪಾದನೆಯನ್ನು ಹೊಸದಾಗಿ ಮಾಡಿದ್ದೀರಿ? ವಿದ್ಯುತ್ ಉತ್ಪಾದನೆಗಾಗಿ ಎಷ್ಟು ಬಂಡವಾಳ ಹೂಡಿದ್ದೀರಿ? ಹಾಗೂ ನಾವು ಉತ್ಪಾದನೆ ಮಾಡಲು ಪ್ರಾರಂಭಿಸಿದ ವಿದ್ಯುತ್ ಅನ್ನು ಎಷ್ಟು ಮಾರಾಟ ಮಾಡುತ್ತಿದ್ದೀರಿ? ಎಂಬ ದಾಖಲೆಗಳನ್ನು ಕೂಡಲೆ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಬೇಸಿಗೆಯಲ್ಲಿ ಸುಮಾರು 11 ರಿಂದ 13000 ಮೆಗಾ ವ್ಯಾಟ್‍ಗಳಷ್ಟು ಇದೆ. ಮಳೆಗಾಲದಲ್ಲಿ 8 ರಿಂದ 9000 ಮೆಗಾ ವ್ಯಾಟ್‍ಗಳಿಗೆ ಮಾತ್ರ ಬೇಡಿಕೆಯಿರುತ್ತದೆ. ಇನ್ನು ಉಳಿಕೆಯಾಗುವ ಸುಮಾರು 18 ರಿಂದ 20 ಸಾವಿರ ಮೆಗಾ ವ್ಯಾಟ್‍ಗಳನ್ನು ಮಾರಬೇಕಲ್ಲ, ಅದನ್ನು ಮಾರಾಟ ಮಾಡಲು ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಶ್ವೇತ ಪತ್ರದ ಮೂಲಕ ರಾಜ್ಯದ ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಸೋಲಾರ್ ವಿದ್ಯುತ್ ಅನ್ನು ಪ್ರತಿ ಯೂನಿಟ್‍ಗೆ 5 ರಿಂದ 11 ರೂ.ಗಳವರೆಗೆ ಕೊಟ್ಟು ಅವಾಸ್ತವಿಕ ಖರೀದಿ ಒಪ್ಪಂದವನ್ನು ಮಾಡಿಕೊಂಡಿತ್ತು ಎಂದು ಆರೋಪ ಮಾಡಿದ್ದೀರಿ. ಈ ದರಗಳನ್ನು ಕಡಿಮೆ ಮಾಡಿ, ರೂ.3 ರ ಒಳಗೆ ಒಪ್ಪಂದ ಮಾಡಿಕೊಂಡಿದ್ದರೆ ರಾಜ್ಯಕ್ಕೆ ರೂ.2000 ಸಾವಿರ ಕೋಟಿ ನಷ್ಟ ತಪ್ಪುತ್ತಿತ್ತು ಎಂದೂ ಹೇಳಿದ್ದೀರಿ. ಆದರೆ ದೇಶದಲ್ಲಿ ಯಾವ, ಯಾವ ರಾಜ್ಯಗಳು 2010 ರಿಂದ 2022 ರವರೆಗೆ ಎಷ್ಟು ರೂಪಾಯಿಗಳಿಗೆ ಸೋಲಾರ್ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂಬುದರ ಕುರಿತು ಕೂಡಲೆ ಶ್ವೇತ ಪತ್ರವನ್ನು ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Umesh Katti | ಉಮೇಶ್‌ ಕತ್ತಿ ಪತ್ನಿ ಶೀಲಾ ಕತ್ತಿಗೆ ಪ್ರಧಾನಿ ಮೋದಿ ಪತ್ರ, ಭಾವನಾತ್ಮಕ ನುಡಿಗಳ ಮೂಲಕ ಸಾಂತ್ವನ!

Exit mobile version