Site icon Vistara News

ಅವನ್ಯಾವನೋ ಅರುಣ್ ಶಹಾಪುರ ಅಂತಿದ್ದಾನಲ್ಲಾ ಮುಖ ತೋರ್ಸಿದ್ದಾನಾ?: ಸಿದ್ದರಾಮಯ್ಯ

Multi-Specialty Hospital

ಬೆಳಗಾವಿ: ದೇಶದಲ್ಲಿ ಯಾವ ರೀತಿ ರಾಜಕಾರಣ ನಡೆಯುತ್ತಿದೆ ಅನ್ನೋದನ್ನು ನೋಡಿದ್ದೀರಿ. ಕಾಂಗ್ರೆಸ್‌ ಆಡಳಿತ ಹಾಗೂ ಬಿಜೆಪಿ ಸರ್ಕಾರದ ಆಡಳಿತವನ್ನು ಹೋಲಿಕೆ ಮಾಡಿದರೆ ಈ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುವುದು ತಿಳಿಯುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಅರುಣ್‌ ಶಹಾಪುರ ಬಗ್ಗೆ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಬೆಳಗಾವಿಯ ಮರಾಠ ಮಂಡಲ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕತೆ, ನಿರುದ್ಯೋಗ ಪ್ರಮಾಣ ಹೇಗಿದೆ, ಈ ಸರ್ಕಾರದಿಂದ ಸಂವಿಧಾನ ರಕ್ಷಣೆ ಆಗುತ್ತಿದೆಯಾ?. ಸರ್ಕಾರದ ಸಾಧನೆಗಳು ಅಂತ ದೊಡ್ಡ ಆಂದೋಲನ ಮಾಡಿದ್ದಾರೆ. ದೊಡ್ಡ ದೊಡ್ಡ ಜಾಹೀರಾತು ನೀಡಿದ್ದಾರೆ. ರಾಜ್ಯಕ್ಕೆ ಅಷ್ಟು ಕೊಟ್ಟೆವು, ಇಷ್ಟು ಕೊಟ್ಟೆವು ಎನ್ನುತ್ತಾರೆ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಒಬ್ಬೊಬ್ಬರ ತಲೆ ಮೇಲೆ ₹1.75 ಲಕ್ಷ ಸಾಲ ಇದೆ. ಈ ದೇಶದ ಜನರನ್ನು ಮೋದಿ ಸರ್ಕಾರ ಸಾಲದ ಸುಳಿಗೆ ಸಿಲುಕಿಸಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಚುನಾವಣೆ ಬಗ್ಗೆ ಮಾತನಾಡಿ, ಅವನ್ಯಾವನೋ ಅರುಣ್ ಶಹಾಪುರ್ ಅಂತಿದ್ದಾನಲ್ಲಾ ಮುಖ ತೋರ್ಸಿದ್ದಾನಾ?, ಒಂದು ಬಾರಿಯಾದ್ರೂ ವಿಧಾನ ಮಂಡಲದಲ್ಲಿ ಪ್ರಶ್ನೆ ಮಾಡಿದ್ದಾರಾ?, ಬಿಜೆಪಿಯವರು ಬಂದ ಮೇಲೆ ಏನು ಮಾಡಿದ್ದಾರೆ ಹೇಳಲಿ. ಜಿಎಸ್‌ಟಿ, ನೋಟ್‌ ಬ್ಯಾನ್ ಮಾಡುವ ಮೊದಲು ದೇಶದಲ್ಲಿ 12 ಕೋಟಿ ಉದ್ಯೋಗ ಸೃಷ್ಟಿಯಾಗಿತ್ತು. ಈಗ ಎರಡು ಕೋಟಿಗೆ ಬಂದು ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಠ್ಯ ಪುಸ್ತಕದಲ್ಲಿ ಉದ್ದೇಶ ಪೂರ್ವಕವಾಗಿ ಅನೇಕ ತಪ್ಪು ಮಾಡಲಾಗಿದೆ. ಸಂವಿಧಾನ ಬರೆದು ಕೊಟ್ಟವರು ಯಾರು? ಸಂವಿಧಾನ ಶಿಲ್ಪಿ ಅನ್ನೋದೇ ತಗೆದುಹಾಕಿದರೆ ಹೇಗೆ, ಕುವೆಂಪು ಫೋಟೋ ತಗೆದು ಹಾಕಿದ್ರೆ ಅವಮಾನ ಅಲ್ಲವೆ?,
ನಾರಾಯಣಗುರು, ಬಸವಣ್ಣ, ಸುರಪುರ ನಾಯಕರು ಎಲ್ಲರಿಗೂ ಅವಮಾನ ಮಾಡಲಾಗಿದ್ದು ಇವರು ಪಠ್ಯವನ್ನು ಕೇಸರಿಕರಣ ಮಾಡಲು ಹೋರಟಿದ್ದಾರೆ. ವಿದ್ಯಾರ್ಥಿಗಳಿಗೆ ಜ್ಞಾನ ವೃದ್ಧಿಸುವ ವೈಚಾರಿಕ ಶಿಕ್ಷಣ ಸಿಗಬೇಕು, ಇತಿಹಾಸ ತಿರುಚುವ ಕೆಲಸ ಮಾಡಬಾರದು ಎಂದರು.

ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಒಂದೇ ವೇದಿಕೆಯಲ್ಲೇ ಅಕ್ಕಪಕ್ಕ ಕುಳಿತರೂ ಹೆಚ್ಚು ಮಾತನಾಡಲಿಲ್ಲ. ಸಭೆ ಬಳಿಕವೂ ಉಭಯ ನಾಯಕರು ಅಂತರ ಕಾಯ್ದುಕೊಂಡದ್ದು ಕಂಡುಬಂತು. ಈ ಹಿಂದೆ ಸಿದ್ದರಾಮಯ್ಯ ರಾಮದುರ್ಗ ಪ್ರವಾಸ ವೇಳೆಯೂ ಇಬ್ಬರೂ ಅಂತರ ಕಾಯ್ದುಕೊಂಡಿದ್ದರು. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಚರ್ಚಾಸ್ಪದವಾಗಿದೆ.‌ ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿ ವಿವಿಧ ಮುಖಂಡರು ಇದ್ದರು.

ಇದನ್ನೂ ಓದಿ | ನಮ್ಮ ಕುಟುಂಬದಿಂದ 3ನೇ ವ್ಯಕ್ತಿ ರಾಜಕೀಯಕ್ಕೆ ಬಂದ್ರೆ ರಾಜೀನಾಮೆ: ಸಚಿವ ನಿರಾಣಿ

ಬಿಜೆಪಿ ಅಭ್ಯರ್ಥಿಗಳು ಬಹಳ ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದ್ದಾರೆ

ಬೆಳಗಾವಿ: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಿಶ್ಚಿತವಾಗಿ ವಾಯವ್ಯದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಇಬ್ಬರು ಅಭ್ಯರ್ಥಿಗಳು ಬಹಳ ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ರಾಜ್ಯಸಭೆಯಲ್ಲಿ ಲೇಹರ್ ಸಿಂಗ್ ಸೇರಿ ಮೂವರು ಗೆಲ್ಲುತ್ತಾರೆ ಎಂದು ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಇಡೀ ಜಗತ್ತೇ ಮೆಚ್ಚಿದೆ. ಅವರ ಮಾರ್ಗದರ್ಶನದಲ್ಲಿ ನಿಶ್ಚಿತವಾಗಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಗೆಲ್ಲುತ್ತೇವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 140ರಿಂದ 150 ಸ್ಥಾನಗಳನ್ನು ಗೆಲ್ಲುತ್ತದೆ. ಈಗಾಗಲೇ ಆ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭಗೊಂಡಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲಿ ಟಿಕೆಟ್ ಹಂಚಿಕೆ ವಿಚಾರ ಪ್ರತಿಕ್ರಿಯಿಸಿದ ಅವರು, ಇನ್ನೂ ನಾವು ಯಾವುದೇ ನಿರ್ಧಾರ ಮಾಡಿಲ್ಲ, ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ನೋಡುತ್ತೇವೆ. ಪ್ರಧಾನಿ ಮೋದಿ ನೀಡುವ ನಿರ್ದೇಶನದಂತೆ ಚುನಾವಣೆ ನಡೆಯಲಿದೆ ಎಂದರು.

ಮುಂಬರುವ ಚುನಾವಣೆಯಲ್ಲಿ ಬಿಎಸ್‌ವೈ ಮುಖಂಡತ್ವ ವಹಿಸುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖಂಡತ್ವ ಪ್ರಶ್ನೆ ಇಲ್ಲ, ಸಾಮೂಹಿಕ ನೇತೃತ್ವದಲ್ಲಿ ಎಲ್ಲ ಕಡೆ ಪ್ರವಾಸ ಮಾಡುತ್ತೇವೆ. ಮುಂಬರುವ ಎಲ್ಲ ಚುನಾವಣೆ ಗೆಲ್ಲಲು ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮತದಾರರು ಮೋದಿ ಮತ್ತು ಬಿಜೆಪಿ ಜತೆಗೆ ಇರುವವರೆಗೆ ಯಾವುದೇ ಆತಂಕವಿಲ್ಲ. ಯಾವಾಗ, ಎಲ್ಲಿ ಕರೆದರೂ 24 ಗಂಟೆಯೂ ಪ್ರವಾಸ ಮಾಡಲು ನಾನು ರೆಡಿಯಿದ್ದೇನೆ. ಇನ್ನೂ ಹತ್ತು ವರ್ಷ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬಲಪಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಿದ್ದಾರೆ, ಚುನಾವಣೆಯಲ್ಲಿ ಸೋಲು ನಿಶ್ಚಿತ ಅನ್ನುವುದು ಗೊತ್ತಿರುವುದರಿಂದ ಹಗುರವಾಗಿ ಮಾತನಾಡುತ್ತಿದ್ದಾರೆ. ಆರ್‌ಎಸ್ಎಸ್ ಸೇರಿ ಹಲವು ವಿಷಯಗಳ ಬಗ್ಗೆ ಹಗುರವಾಗಿ ಮಾತನಾಡುವುದು ಅವರಿಗೆ ಚಟವಾಗಿದೆ.

ಇದರಿಂದ ಅವರಿಗೇನು ಲಾಭ ಆಗಲ್ಲ. ಅವರ ಗೌರವವನ್ನು ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು. ಪ್ರತಿ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ ಎಂಬ ಎಚ್‌ಡಿಕೆ ಹೇಳಿಕೆ ಬಗ್ಗೆ ಸ್ಪಂದಿಸಿದ ಅವರು, ರಾಜ್ಯದಲ್ಲಿ ಪ್ರವಾಸ ಮಾಡಲು ಕುಮಾರಸ್ವಾಮಿ ಸ್ವತಂತ್ರರಿದ್ದಾರೆ. ಅವರ ಪಕ್ಷ ಬಲಪಡಿಸಲು ಅವರು ಪ್ರಯತ್ನಿಸಲಿ, ನಾವೂ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್‌ ಪಕ್ಷವನ್ನು ಜನರೇ ಬ್ಯಾನ್‌ ಮಾಡುತ್ತಿದ್ದಾರೆ

ಚಿಕ್ಕಮಗಳೂರು: ಆರ್‌ಎಸ್‌ಎಸ್ ಬಹುದೊಡ್ಡ ದೇಶಭಕ್ತ ಸಂಘಟನೆ. ಪ್ರವಾಹ ಬರಲಿ, ಬರಗಾಲ ಬರಲಿ, ಯುದ್ಧ ಆದಾಗ ಜನಸೇವೆ ಮಾಡಿರುವ ಸಂಘಟನೆ ಬಗ್ಗೆ ಟೀಕೆ ಮಾಡುವ ಸಿದ್ದರಾಮಯ್ಯ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಕಿಡಿಕಾರಿದ್ದಾರೆ. ಸೋನಿಯಾ ಗಾಂಧಿ ಅವರ ಕೃಪೆಗೆ ಪಾತ್ರರಾಗಬೇಕು ಎಂಬ ಕಾರಣದಿಂದ ಇವರು ಆರ್‌ಎಸ್ಎಸ್‌ ಅನ್ನು ಬಯ್ಯುತ್ತಾರೆ. ಆರ್‌ಎಸ್‌ಎಸ್‌ ಸಮವಸ್ತ್ರ ಸುಡುವುದು ಅತ್ಯಂತ ಕೀಳು ಮಟ್ಟದ, ಅತ್ಯಂತ ಅವಮಾನಕರ ಹಾಗೂ ಅಪ್ರಬುದ್ಧ ನಡವಳಿಕೆಯಾಗಿದೆ. ನೀವು ಎಷ್ಟರ ಮಟ್ಟಿಗೆ ಆರ್‌ಎಸ್‌ಎಸ್‌ ಅವಮಾನ ಮಾಡುತ್ತೀರಿ, ಅಷ್ಟು ದೊಡ್ಡ ಮಟ್ಟದಲ್ಲಿ ಆರ್‌ಎಸ್‌ಎಸ್‌ ಬೆಳೆಯುತ್ತದೆ. ನಿಮ್ಮನ್ನು ದೇಶದಲ್ಲಿ ಜನರೇ ಬ್ಯಾನ್ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಆರ್‌ಎಸ್‌ಎಸ್‌ ತುಳಿಯುವ ಕೆಲಸ ಸ್ವಾತಂತ್ರ್ಯ ಬಂದಾಗಿನಿಂದ ನಡೆಯುತ್ತಿದೆ

ಮಂಡ್ಯ: ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ಇದೆ. ನಮ್ಮ ಅಭ್ಯರ್ಥಿ ಮೈ.ವಿ. ರವಿಶಂಕರ್ ಗೆಲ್ಲುವ ವಿಶ್ವಾಸವಿದೆ. ಈ ಬಾರಿ ಭಾರಿ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ರಾಜ್ಯಾದ್ಯಂತ ಆರ್‌ಎಸ್‌ಎಸ್‌ ಚಡ್ಡಿ ಸುಡುವುದಾಗಿ ಸಿದ್ದು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರ ಹೇಳಿಕೆ ಶೋಭೆ ತರುವುದಿಲ್ಲ. ಆರ್‌ಎಸ್‌ಎಸ್‌ ತುಳಿಯುವ ಕೆಲಸ ಸ್ವಾತಂತ್ರ್ಯ ಬಂದಾಗಿನಿಂದ ನಡೆಯುತ್ತಿದೆ.
ಅದು ಸೇವೆ ಎಂಬ ಯಜ್ಞದಲ್ಲಿ ತೊಡಗಿಸಿಕೊಂಡು ಸಮೃದ್ಧವಾಗಿ ಬೆಳೆದಿದೆ, ಪಾಪ ಕಾಂಗ್ರೆಸ್ ಮುಖಂಡರಿಗೆ ಈ ವಿಚಾರ ತಿಳಿದಿಲ್ಲ ಎಂದರು. ಪಠ್ಯ ಪರಿಷ್ಕರಣೆಯಲ್ಲಿ ಬಸವಣ್ಣನವರಿಗೆ ಅವಮಾನ ಎಂಬ ವಿಚಾರದ ಬಗ್ಗೆ ಸ್ಪಂದಿಸಿ, ಪಠ್ಯ ಪರಿಷ್ಕರಣೆ ವರದಿ ಸಿಎಂ ಕೈ ಸೇರಿದೆ. ಏನೇ ತಪ್ಪಿದ್ದರೂ ಸರಿಪಡಿಸುವುದಾಗಿ ಸಿಎಂ ಹೇಳಿದ್ದಾರೆ. ಯಡಿಯೂರಪ್ಪ ಮಗನನ್ನು ಎಂಎಲ್‌ಸಿ ಮಾಡಿ ಎಂದು ಯಾರನ್ನೂ ಕೇಳಿರಲಿಲ್ಲ. ಆದರೆ, ನಾನು ಏನಾಗಬೇಕು ಎಂಬುದನ್ನ ಪಕ್ಷ ತೀರ್ಮಾನಿಸಲಿದೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದರು.

ಇದನ್ನೂ ಓದಿ | ರಾಜಕೀಯ ದೇಣಿಗೆ: ಬಿಜೆಪಿಗೆ ಸಿಂಹ ಪಾಲು, ಕಾಂಗ್ರೆಸ್‌ಗೆ ಇಲ್ಲೂ ಭಾರಿ ಅಂತರದ ಸೋಲು!

Exit mobile version