Site icon Vistara News

ಜಾತಿ ಅಸ್ತ್ರದೊಂದಿಗೆ ಯಾರೂ ಸಿಎಂ ಆಗಿಲ್ಲ: ಡಿಕೆಶಿಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಟಾಂಗ್

Karnataka Election 2023: No ban on Bajarangdal, says Veerappa Moily

ಬಾಗಲಕೋಟೆ: ʻʻಸಿಎಂ ಕುರ್ಚಿಗಾಗಿ ಆರೋಗ್ಯಕರ ಚರ್ಚೆ ನಡೆದರೆ ತೊಂದರೆಯಿಲ್ಲ. ಆದರೆ ಅದು ಅನಾರೋಗ್ಯದ ದಾರಿಯಲ್ಲಿ ನಡೆಯಬಾರದು ಹಾಗೂ ಪಕ್ಷದ ಒಗ್ಗಟ್ಟಿಗೆ ಧಕ್ಕೆಯಾಗಬಾರದು. ಸಿಎಂ ಆಗಲು ಜಾತಿ ಅಸ್ತ್ರ ಬಳಕೆ ಮಾಡುವುದು ತಪ್ಪು. ಜಾತಿ ಅಸ್ತ್ರ ಇಟ್ಟುಕೊಂಡು ಈ ರಾಜ್ಯದಲ್ಲಿ ಯಾರೂ ಸಿಎಂ ಆಗಿಲ್ಲ. ಜಾತಿ ಮುಂದೆ ತರುವುದು ಪಕ್ಷದ ನಿಲುವಿಗೆ ವಿರುದ್ಧವಾದುದುʼʼ ಎಂದು ಡಿ.ಕೆ. ಶಿವಕುಮಾರ್‌ಗೆ ಪರೋಕ್ಷವಾಗಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಟಾಂಗ್ ನೀಡಿದರು.

ಅಧಿಕಾರಕ್ಕೆ ಬರುವ ಮುನ್ನವೇ ಕಾಂಗ್ರೆಸ್‌‌ನಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟದ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಡಿಕೆಶಿ ಒಕ್ಕಲಿಗರ ಸಮಾವೇಶದಲ್ಲಿ ಸಿಎಂ ಮಾಡಲು ಮನವಿ ಮಾಡಿರುವುದು, ಜಮೀರ್ ಅವರು ನೀಡಿರುವ ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬಂತಹ ಹೇಳಿಕೆಗಳಿಂದ ಪಕ್ಷಕ್ಕೆ ತೊಂದರೆ ಆಗುತ್ತದೆ. ಕಾಂಗ್ರೆಸ್‌ ಜಾತ್ಯತೀತ ತತ್ವದ ಬುಡವನ್ನೇ ಕತ್ತರಿಸಿದರೆ ಜನರಿಗೆ ವಿಶ್ವಾಸ ಬರುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಾತಾವರಣವಿದೆ. ಆದರೆ, ಜಾತಿ, ಮತ ಧ್ರುವೀಕರಣ ಮಾಡಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ | ಸಿದ್ದರಾಮೋತ್ಸವ ಮಾಡಬೇಡಿ, ಸಿದ್ದರಾಮೇಶ್ವರ ಉತ್ಸವ ಮಾಡಿ: ಸಿಎಂ ಬೊಮ್ಮಾಯಿ

ʻʻಕಾಂಗ್ರೆಸ್‌ನಲ್ಲಿ ಎಸ್.ಆರ್ ಪಾಟೀಲ್ ಸೇರಿ ಹಿರಿಯರನ್ನು ಮೂಲೆಗುಂಪು ಮಾಡಲಾಗಿದೆʼʼ ಎಂಬ ದೂರುಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಯಕರನ್ನು ಅಷ್ಟು ಸುಲಭವಾಗಿ ಮೂಲೆ ಗುಂಪು ಮಾಡಲು ಸಾಧ್ಯವಿಲ್ಲ. ನನ್ನನ್ನ ಅನೇಕ ಬಾರಿ‌ ಮೂಲೆಗುಂಪು ಮಾಡುವುದಕ್ಕೆ ಪ್ರಯತ್ನ ಪಟ್ಟರು.‌ ಆದರೆ ನಂತರ ನಾನು ಸಿಎಂ ಹಾಗೂ ಕೇಂದ್ರದಲ್ಲಿ ಮಂತ್ರಿಯಾದೆ. ಎಸ್.ಆರ್.ಪಾಟೀಲ್ ಅವರಂತಹವರನ್ನು ಮೂಲೆಗುಂಪು ಮಾಡೋಕೆ ಆಗೋದೇ ಇಲ್ಲ. ಅವರು ಸ್ವಯಂ ಪ್ರಕಾಶಯುಳ್ಳ ಸೂರ್ಯನಿದ್ದಂತೆ ಎಂದರು.

ರಾಜ್ಯದಲ್ಲಿ ಕೋಮು ಗಲಭೆ, ಸರಣಿ ಹತ್ಯೆಗಳು ನಡೆಯುತ್ತಿರುವುದು ಕಳವಳಕಾರಿ ವಿಚಾರ, ಇಂತಹ ಘಟನೆಗಳು ಜರುಗುತ್ತಿರುವುದು ದೇಶ ಹಾಗೂ ರಾಜ್ಯಕ್ಕೆ ದುರದೃಷ್ಟಕರ. ಸಿಎಂ ಆದವರು ತಾಯಿಯಂತೆ ಇರಬೇಕು, ಎಲ್ಲಾ ಮಕ್ಕಳನ್ನು ಸಮಾನ ನೋಡಬೇಕು. ಧರ್ಮ ಯುದ್ಧದ ಕಹಳೆಯನ್ನು ಸಿಎಂ, ಅಧಿಕಾರದಲ್ಲಿದ್ದ ಪಕ್ಷಗಳೇ ಊದಿದರೆ ಅಲ್ಲಿ ಸುವ್ಯವಸ್ಥಿತವಾದ ಆಡಳಿತ ಇರುವುದಿಲ್ಲ ಎಂದು ಬೇಸರ ಹೊರಹಾಕಿದರು.

500 ವರ್ಷಗಳ ನಂತರ ಧರ್ಮದ ಮೂಲಕ ಧ್ರುವೀಕರಣ ಮಾಡಿ ಅಧಿಕಾರಕ್ಕೆ ಬರುವ ಪ್ರಯತ್ನ ಭಾರತದಲ್ಲಿ ನಡೆಯುತ್ತಿದೆ. ಈ ರೀತಿಯಾದರೆ ಭಾರತೀಯರಷ್ಟು ಮೂರ್ಖರು ಯಾರು ಇಲ್ಲ. ಜಾತಿ ಧ್ರುವೀಕರಣದಿಂದ ಪ್ರಜಾಪ್ರಭುತ್ವ ನಾಶವಾಗುತ್ತದೆ. ಕೇಂದ್ರ, ರಾಜ್ಯದ ಬಿಜೆಪಿ ನಾಯಕರು ಪ್ರಚೋದನೆ ಮಾಡುತ್ತಿದ್ದಾರೆ. ಈಗಿನ ಸರ್ಕಾರ ಇಂತಹ ಪ್ರಯತ್ನ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ವೈಭವದ ಕಾಲ ನೋಡಿದ್ದಿರಿ, ಈಗಿನ ಸ್ಥಿತಿ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು 70 ವರ್ಷ ಅಧಿಕಾರ ಮಾಡಿದ್ದೇವೆ. ನಾವು ಪಶ್ಚಾತ್ತಾಪ ಪಡಬೇಕಾದ ಅವಶ್ಯಕತೆಯಿಲ್ಲ, ಬಿಜೆಪಿಯವರು ಎಂಟು ವರ್ಷದಿಂದ ಅಧಿಕಾರ ಮಾಡುತ್ತಿದ್ದಾರೆ. ಇವರು ಶಾಶ್ವತವಾಗಿ ಇರುತ್ತೇವೆ ಎಂದು ತಿಳಿದುಕೊಂಡರೆ ಅದು ಭ್ರಮೆ. 1977ರಲ್ಲಿ ಇಂದಿರಾ ಗಾಂಧಿ ಹೀನಾಯವಾಗಿ ಸೋತಿದ್ದರು. ನಂತರ 1980ರಲ್ಲಿ ಪುನಃ ಅಧಿಕಾರಕ್ಕೆ ಬಂದು ಪ್ರಧಾನಿಯಾದರು. ಹೀಗಾಗಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ | ಡಿಕೆಶಿಗೆ ಸಿಎಂ ಆಗೋ ಯೋಗ್ಯತೆ, ಅರ್ಹತೆ ಇಲ್ಲ: ಸಚಿವ ಅಶ್ವತ್ಥನಾರಾಯಣ ವ್ಯಾಖ್ಯಾನ

Exit mobile version